ಅಂತರಾಷ್ಟ್ರೀಯ

ಹಾನಿಕಾರಕ ಹೈ ಹೀಲ್ಡ್: ಚಪ್ಪಲಿ ತಂದ ನೋವು

Pinterest LinkedIn Tumblr

heels

ಹೈ ಹೀಲ್ಡ್ ಚಪ್ಪಲಿ ಧರಿಸುವುದರಿಂದ ಸೆಕ್ಸಿಯಾಗಿ ಕಾಣುತ್ತೇವೇನೋ ನಿಜ. ಆದರೆ, ಇದರಿಂದಾಗುವ ಸೈಡ್ ಎಫೆಕ್ಟ್ ಒಂದೆರಡಲ್ಲ…

ಮಹಿಳೆಯರು ಹೈಹೀಲ್ಡ್ ಶೂ ಅಥವಾ ಪಾದರಕ್ಷೆ ಧರಿಸುವುದು ಕೆಲವೊಮ್ಮೆ ಫ್ಯಾಷನ್ ಮತ್ತು ಕೆಲವೊಮ್ಮೆ ಎತ್ತರವಾಗಿ ಕಾಣಬೇಕೆಂಬ ಉದ್ದೇಶದಿಂದ. ಉದ್ದ ಕಾಣಬೇಕು ಎಂದೇನೋ ಒಳ್ಳೆಯ ವಿಷಯವೇ ಸರಿ. ಏಕೆಂದರೆ ಇದು ಅನಿವಾರ್ಯತೆ. ಆದರೆ ಫ್ಯಾಷನ್‍ಗಾಗಿ ಎತ್ತರದ ಹಿಮ್ಮಡಿಯ ಪಾದರಕ್ಷೆ ಧರಿಸುವುದು ಅನಿವಾರ್ಯತೆ ಅಲ್ಲ, ಬದಲಿಗೆ ಅದು ನಮ್ಮ ಇಚ್ಛೆ ಆಗಿರುತ್ತದೆ. ಎತ್ತರದ ಹಿಮ್ಮಡಿಯ ಹೈಹೀಲ್ಡ್ ಧರಿಸುವುದು ಪ್ರತಿಷ್ಠೆಯ ವಿಷಯವೂ ಹೌದು. ಆದರೆ ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಹೈಹೀಲ್ಡ್ ಧರಿಸುವುದರಿಂದ ಸಂಧಿವಾತ ಬರುವುದರ ಜತೆಗೆ ಮಂಡಿಗಳ ಸವೆತವೂ ಉಂಟಾಗುತ್ತದೆ ಎನ್ನುತ್ತದೆ ಒಂದು ವೈದ್ಯಕೀಯ ವರದಿ.

ದೀರ್ಘಕಾಲದವರೆಗೆ ಹೈಹೀಲ್ಡ್ ಧರಿಸುವುದರಿಂದ ಪಾದಗಳು ಬಾತುಕೊಳ್ಳುವುದು, ಮೀನಖಂಡಗಳ ಬಿಗಿತ ಮತ್ತು ಕಾಲ್ಬೆರಗಳ ಸೊಟ್ಟಗಾಗುವಿಕೆ ಮುಂತಾದ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಇವು ಸಾಮಾನ್ಯ ತೊಂದರೆಗಳ ಮಾತಾಯಿತು. ಆದರೆ ಎತ್ತರದ ಹಿಮ್ಮಡಿಯ ಪಾದರಕ್ಷೆ ಧರಿಸುವುದರಿಂದ ಹಿಮ್ಮಡಿಯ ಸಂದುಗಳಲ್ಲಿ ಅಪಾಯಕಾರಿ ಒತ್ತಡ ಉಂಟಾಗುತ್ತದೆ. ಶರೀರದಲ್ಲಿ ಪ್ರಕೃತಿ ನಿರ್ಮಿತ ಶಾಕ್ ಅಬ್ಸಾರ್ಬರ್ ಆಗಿ ಕೆಲಸ ಮಾಡುವ ಮೃದ್ವಸ್ಥಿಯ ಸವೆತಕ್ಕೆ ಕಾರಣವಾಗುತ್ತದೆ. ಜತೆಗೆ ಅಸ್ಥಿ ಸಂಧಿವಾತಕ್ಕೂ ಕಾರಣವಾಗುತ್ತದೆ ಎಂದು ಅಮೆರಿಕದಲ್ಲಿ ನಡೆದ ಹೊಸ ಸಂಶೋಧನೆ ಎಚ್ಚರಿಸಿದೆ. ಕೆಲವು ಮಹಿಳೆಯರಿಗಂತೂ ಹಿಮ್ಮಡಿ ಬದಲಾವಣೆಯ ಶಸ್ತ್ರಚಿಕಿತ್ಸೆಯ ಅಗತ್ಯವೂ ಇದೆ.

ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯದ ತಂಡವು ಸಾಧಾರಣ ಹಿಮ್ಮಡಿ, ಒಂದೂವರೆ ಅಂಗುಲ ಎತ್ತರದ ಮತ್ತು ಮೂರೂವರೆ ಅಂಗುಲ ಎತ್ತರದ ಪಾದರಕ್ಷೆಗಳನ್ನು ಮಹಿಳೆಯರಿಗೆ ಧರಿಸಲು ನೀಡಿ ಪರೀಕ್ಷೆ ನಡೆಸಿದ್ದಾರೆ. ಎತ್ತರದ ಹಿಮ್ಮಡಿಯಲ್ಲಿ ಮಹಿಳೆಯರ ಮಂಡಿಗಳು ವಿಚಿತ್ರವಾಗಿದ್ದು ಕಂಡುಬಂದಿದೆ. ಅವರ ಕೀಲುಗಳು ಬಾಗಿದಂತೆ ಇದ್ದುದು ಪತ್ತೆಯಾಗಿದೆ. ಅವರು ವಯಸ್ಸಾದವರಂತೆ ಅಥವಾ ಹಾನಿಗೊಳಗಾದ ಕೀಲುಗಳನ್ನು ಹೊಂದಿದ್ದುದು ಕಂಡುಬಂದಿದೆ. ಇದು ಅಸ್ಥಿ ಸಂಧಿವಾತದ ಅಪಾಯವನ್ನು ಹೆಚ್ಚಿಸಿದೆ. ಫಿಸಿಯೊಥೆರಪಿಸ್ಟ್ ಮತ್ತು ಅಸ್ಥಿ ಸಂಧಿವಾ ತಜ್ಞ ಡಿಮ್ ಅಲಾರ್ಡಿಸ್ ಅವರ ಪ್ರಕಾರ, ಇದು ಆಶ್ಚರ್ಯದ ವಿಷಯವೇನೂ ಅಲ್ಲ. ಹೈಹೀಲ್ಡ್‍ನಿಂದಾಗಿ ನಡೆಯುವ ಭಂಗಿಯ ಮತ್ತು ಇದರಿಂದಾಗಿ ಈ ಲಕ್ಷಣ ಉಲ್ಬಣಗೊಳ್ಳುವುದು ಸಾಮಾನ್ಯ ಎಂದಿದ್ದಾರೆ.

ಎತ್ತರದ ಹಿಮ್ಮಡಿಯಲ್ಲಿ ಹೆಚ್ಚುವರಿ ಅಥವಾ ಅಸಮರ್ಪಕ ಕೋನ ಕೆಳಮುಖದ ಒತ್ತಡವನ್ನು ಶೇ.25ರಷ್ಟು ಹೆಚ್ಚಿಸುತ್ತದೆ. ಇದು ಮಂಡಿಯ ಚಿಪ್ಪಿನ ಮೇಲೆ ಭಾರಿ ಒತ್ತಡವನ್ನು ಹೇರುತ್ತದೆ. ನೀವು ನಡೆಯದೆ ಒಂದೇ ಕಡೆ ನಿಂತಿದ್ದರೂ ಈ ಒತ್ತಡ ಮುಂದುವದಿರುತ್ತದೆ ಎಂದು ಅವರು ಹೇಳುತ್ತಾರೆ. ಕೆಲವು ಪ್ರಕರಣಗಳಲ್ಲಿ 30ನೇ ವಯಸ್ಸಿನಲ್ಲಿ ಈ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಒಮ್ಮೆ ಈ ತೊಂದರೆಗಳುಕಾಣಿಸಿಕೊಂಡಿದ್ದೇ ಆದಲ್ಲಿ ಹಾಸಿಗೆಯಿಂದ ಏಳುವುದು ಮತ್ತು ನಡೆದಾಡುವುದು ಕಷ್ಟವಾಗಬಹುದು. ಮಂಡಿಗಳ ಮೇಲೆ ಶರೀರದ ಭಾರ ಬೀಳದಂತಿರಲು ಕೆಲವೊಮ್ಮೆ ಊರುಗೋಲುಗಳನ್ನು ಬಳಸಬೇಕಾದ ಅನಿವಾರ್ಯತೆಯೂ ಎದುರಾದೀತು.

ಇನ್ನು ಈ ಸರ್ವೆಯಲ್ಲಿ ಹೈಹೀಲ್ಡ್ ಚಪ್ಪಲಿ ಧರಿಸುವುದಕ್ಕೆ ಹೆಣ್ಮಕ್ಕಳು ಕಾರಣಗಳನ್ನೂ ಕೊಟ್ಟರು. `ನಾವು ಸೆಕ್ಸಿಯಾಗಿ ಕಾಣುತ್ತೇವೆ. ನಮ್ಮಲ್ಲಿ ಹೆಣ್ತನದ ಭಾವನೆ ಹೆಚ್ಚಾಗುತ್ತದೆ’ ಎಂದು ಶೇ.93 ಮಹಿಳೆಯರು ಹೇಳಿದರೆ, `ಹೆಚ್ಚು ಸ್ಟೈಲಿಶ್ ಆಗಿ ಕಾಣುತ್ತೇವೆ’ ಎಂದವರು ಶೇ.88 ಮಂದಿ. ನಾವು ತೆಳುವಾಗಿರುವ ಭಾವನೆ ಉಂಟಾಗುತ್ತದೆ ಎಂದವರು ಶೇ. 77 ಮಹಿಳೆಯರು! ಈ ಅಭಿಪ್ರಾಯ ಸಂಗ್ರಹಣೆಗಾಗಿ 1,200 ಮಹಿಳೆಯರನ್ನು ಸಂದರ್ಶಿಸಲಾಗಿತ್ತು.

ಆದರೆ ಹೈಹೀಲ್ಡ್‍ಗಳ ಆಕರ್ಷಣೆ ಮಹಿಳೆಯರಲ್ಲಿ ಎಷ್ಟಿದೆ ಎಂದರೆ ನೋವಾದರೂ ಪರವಾಗಿಲ್ಲ. ಹೈಹೀಲ್ಡ್ ಇರಲಿ ಎನ್ನುವವರೇ ಹೆಚ್ಚು. ಹೈಹೀಲ್ಡ್ ಎಂಬುದು ಈಗ ಆಕರ್ಷಕವಾಗಿ ಕಾಣಬಹುದು. ಆದರೆ ದೀರ್ಘಾವಧಿಯಲ್ಲಿ ಇದರಿಂದ ಹಾನಿಯೇ

ಹೆಚ್ಚು ಎಂದು ವೈದ್ಯರು ಎಚ್ಚರಿಸುತ್ತಾರೆ.

Write A Comment