ನ್ಯೂಯಾರ್ಕ್: ಈಗ ನಿಮ್ಮ ಸೆಲ್ಫಿಯನ್ನು ತೆಗೆಯುಲು ಡ್ರೋನ್ ಸರದಿ ಶುರುವಾಗಿದೆ.
ಸೆಲ್ಫಿ ಪ್ರಿಯರಿಗೆ ಇದು ಬಹಳ ಸಹಕಾರಿ. ಹೌದು, ಈಗ ಸೆಲ್ಫಿ ತೆಗೆಯುವ ಸಲುವಾಗಿ ಪುಟ್ಟ ಕ್ಯಾಮೆರಾ ಲಿಲ್ಲಿಯನ್ನು ಹೊತ್ತ ಡ್ರೋನ್ ಗಳನ್ನು ಬಳಸಲಾಗುತ್ತಿದೆ.
ಈ ಡ್ರೋನ್ ಗಳಿಗೆ ಚಿಕ್ಕದೊಂದು ರಿಮೋಟ್ ಅಳವಡಿಸಲಾಗಿದ್ದು, ಅದು ಬಳಕೆದಾರರ ಜೇಬಿನಲ್ಲೋ ಕೈಯಲ್ಲೋ ಇರುವ ಜಿಪಿಎಸ್‌ನೊಂದಿಗೆ ಸತತ ಸಂಪರ್ಕ ಹೊಂದಿರುತ್ತದೆ. ಅವರು ಎಲ್ಲಿದ್ದಾರೆ ಎಂಬ ಬಗ್ಗೆ ಮಾಹಿತಿ ಹೊಂದಿರುವ ಇದು ಸೆಲ್ಫಿ ತೆಗೆಯಬೇಕಾದ ವ್ಯಕ್ತಿ ಅಥವಾ ವಸ್ತುವಿನ ಮೇಲೆ ಡ್ರೋನ್ ಕ್ಯಾಮೆರಾ ಕಣ್ಣಿಟ್ಟಿರುತ್ತದೆ.
ಈ ಡ್ರೋನ್ ಭೂಮಿಯಿಂದ ಮೇಲೆ 2 ಅಡಿಯಿಂದ 50 ಅಡಿಯವರೆಗೆ ಹಾರಾಟ ನಡೆಸುತ್ತದೆ. ನಿಮಗೆ ಬೇಕಾದ ರೀತಿಯಲ್ಲಿ ರಿಮೋಟ್ ಮೂಲಕ ಡ್ರೋನ್ ಬಳಸಿ ಸೆಲ್ಫಿ ಕ್ಲಿಕ್ಕಿಸಬಹುದು. ಸೆಲ್ಫಿ ತೆಗೆದಿದ್ದು ಸಾಕು ಎಂದೆನಿಸಿದರೆ, ರಿಮೋಟ್ ಬಟನ್ ಒತ್ತಿದರೆ ನಿಮ್ಮ ಬಳಿ ಬಂದು ಭೂಮಿಗಿಳಿಯುತ್ತದೆ.
ಡ್ರೋನ್ ಹಾರಾಟಕ್ಕೆ ಮುನ್ನ ನಿಮಗೆಂತಹ ಶಾಟ್‌ಗಳು ಬೇಕು ಎಂಬ ಬಗ್ಗೆ ಮೊದಲೇ ಆಯ್ಕೆ ಮಾಡಬೇಕು. ಝೂಮ್ಮಾಡಿ, ನಿಧಾನವಾಗಿ ನಿಮ್ಮನ್ನು ಸುತ್ತು ಹೊಡೆದು, ಒಂದೆಡೆ ನಿಂತು ಹಾರಾಡುತ್ತಾ ಬಗೆ ಬಗೆಯ ಚಿತ್ರಗಳನ್ನು ತೆಗೆಯುತ್ತದೆ.
