ಕಠ್ಮಂಡು, ಮೇ 8: ಪ್ರಬಲ ಭೂಕಂಪದ ಭೀಕರ ಪರಿಣಾಮ ಗುಂಗಿನಿಂದ ಇನ್ನೂ ಹೊರಬಾರದಿರುವ ನೇಪಾಳಿಗರು ಇಂದು ಬೆಳಗ್ಗೆ ಸಂಭವಿಸಿದ ಮತ್ತೆರಡು ಕಂಪನಗಳಿಂದ ಭಾರೀ ಭಯಭೀತರಾಗಿದ್ದು ಮತ್ತೆ ಮನೆಗಳನ್ನು ಬಿಟ್ಟು ರಸ್ತೆಗೆ ಓಡಿ ಬಂದರುವ ಘಟನೆ ನಡೆದಿದೆ.
ಆದರೆ ಯಾವುದೇ ಹಾನಿಯ ಬಗ್ಗೆ ವರದಿಯಾಗಿಲ್ಲ. ಈ ಮಧ್ಯೆ ಅವಶೇಷಗಳಡಿಯಿಂದ ಇದುವರೆಗೆ ಹೊರತೆಗೆದಿರುವ ಶವಗಳ ಸಂಖ್ಯೆ 8 ಸಾವಿರ ದಾಟಿದೆ. ಇಂದು ಮುಂಜಾನೆ ಎರಡು ಬಾರಿ ಭೂಮಿ ಕಂಪಿಸಿದ್ದು, ಭೂಕಂಪನದ ಕೇಂದ್ರಬಿಂದು ಸಿಂಧುಪಾಲ್‌ಚೌಕ್ ಹಾಗೂ ದೊಲಾಖಾ ಜಿಲ್ಲೆಗಳಲ್ಲಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಕಠ್ಮಂಡು ಪೂರ್ವ ಪ್ರದೇಶದಲ್ಲಿ ಇಂದು ಬೆಳಗಿನ ಜಾವ 2.19ರ ಸುಮಾರಿನಲ್ಲಿ 4 ರಷ್ಟು ತೀವ್ರತೆಯ ಕಂಪನ ಸಂಭವಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇನ್ನೊಂದು ಕಂಪನ ಬೆಳಗ್ಗೆ 6.17ರ ವೇಳೆ ಸಂಭವಿಸಿದ್ದು 5ರಷ್ಟು ತೀವ್ರತೆ ಹೊಂದಿತ್ತು. ಏ.25 ರಂದು ಸಂಭವಿಸಿದ 7.9ರಷ್ಟು ತೀವ್ರತೆಯ ಪ್ರಬಲ ಭೂಕಂಪದ ನಂತರ ನೇಪಾಳದಲ್ಲಿ ಸುಮಾರು 4 ಅಥವಾ ಅದಕ್ಕೂ ಹೆಚ್ಚು ತೀವ್ರತೆಯ 150 ಪಶ್ಚಾದ್ ಕಂಪನಗಳು ಸಂಭವಿಸಿದ್ದು, ಅಂದಿನಿಂದ ಇಂದಿನವರೆಗೂ ಜನ ಭೀತಿ, ಆತಂಕಗಳಲ್ಲೇ ಕಾಲಕಳೆಯುತ್ತಿದ್ದಾರೆ.
