ಅಂತರಾಷ್ಟ್ರೀಯ

‘ನಿಮಗೆ ನಾವು ಕಾಣುತ್ತಿಲ್ಲವೇ? ನಮಗೆ ನೆರವು ಬೇಕು’: ನೇಪಾಳದ ಹಳ್ಳಿಯ ಜನತೆ

Pinterest LinkedIn Tumblr

Nepal-victims-AP

ಪೌವಾಥೊಕ್, ಮೇ 4: ನೇಪಾಳದ ಪ್ರಬಲ ಭೂಕಂಪದಲ್ಲಿ ಬಹುತೇಕ ನೆಲಸಮವಾಗಿರುವ ಬೆಟ್ಟದ ಮೇಲಿನ ಈ ಹಳ್ಳಿಯ ಪ್ರವೇಶದ್ವಾರದಲ್ಲಿ ಮರದ ಹಲಗೆಗಳನ್ನು ಜೋಡಿಸಿ ನಿಲ್ಲಿಸಲಾದ ಫಲಕವೊಂದು ಎದ್ದು ಕಾಣಿಸುತ್ತದೆ. ‘ನಮಗೆ ಸಹಾಯ ಬೇಕು. ದಯವಿಟ್ಟು ನೆರವು ನೀಡಿ’ ಎಂಬ ಸಂದೇಶ ಅದರಲ್ಲಿದೆ.
ನೇಪಾಳದ ರಾಜಧಾನಿ ಕಠ್ಮಂಡುವಿನಿಂದ ಪೂರ್ವಕ್ಕೆ ಕೇವಲ 50 ಕಿ.ಮೀ. ದೂರದಲ್ಲಿದೆ ಪೌವಾಥೊಕ್ ಎಂಬ ಸಣ್ಣ ಹಳ್ಳಿ. ಸಮುದ್ರಮಟ್ಟದಿಂದ 3,600 ಅಡಿ ಎತ್ತರದಲ್ಲಿರುವ ಈ ಹಳ್ಳಿಗೆ ತಲುಪಲು ಅಗಲಕಿರಿದಾದ ರಸ್ತೆ ಇದೆ. ವಾರದ ಹಿಂದೆ ಭೂಕಂಪ ಸಂಭವಿಸಿದ ಬಳಿಕ ಒಬ್ಬನೇ ಒಬ್ಬ ಸರಕಾರಿ ಅಧಿಕಾರಿ ಇಲ್ಲವೇ ಸೈನಿಕ ಈ ಹಳ್ಳಿಗೆ ಕಾಲಿಟ್ಟಿಲ್ಲ ಎಂದು ಹಳ್ಳಿಯ ನಿವಾಸಿಗಳು ಹೇಳುತ್ತಾರೆ. ನೇಪಾಳವನ್ನು ಅಲ್ಲಾಡಿಸಿ ಹೋದ ಪ್ರಬಲ ಭೂಕಂಪವನ್ನು ಎದುರಿಸಲು ಅಲ್ಲಿನ ಸರಕಾರಿ ವ್ಯವಸ್ಥೆ ಎಷ್ಟೊಂದು ಅಸಮರ್ಥವಾಗಿದೆ ಎಂಬುದಕ್ಕೆ ಈ ಪ್ರಕರಣವೇ ಸಾಕ್ಷಿಯಾಗಿದೆ.

ಶನಿವಾರ ಬೆಳಗ್ಗೆ ಟಾರ್ಪಾಲ್‌ಗಳಿಂದ ಮುಚ್ಚಿದ್ದ ಸಾಲುಸಾಲು ಲಾರಿಗಳು ಪೌವಾಥೊಕ್‌ನತ್ತ ಬಂದವು. ಈ ಲಾರಿಗಳಲ್ಲಿ ನೆರವಿನ ಸರಕುಗಳಿದ್ದವು. ಬಂದೂಕು ಹಿಡಿದುಕೊಂಡಿದ್ದ ನೇಪಾಳಿ ಪೊಲೀಸರು ಲಾರಿಗಳಿಗೆ ಭದ್ರತೆ ಒದಗಿಸಿದ್ದರು. ಹಸಿವಿನಿಂದ ಬಳಲುತ್ತಿದ್ದ ಗ್ರಾಮಸ್ಥರು ರಸ್ತೆಗೆ ಓಡೋಡಿ ಬಂದರು. ಆದರೆ, ಲಾರಿಗಳು ಅಲ್ಲಿ ನಿಲ್ಲದೆ ಮುಂದಕ್ಕೆ ಹೋದವು. ‘ನಾವು ನಿಮಗೆ ಕಾಣುತ್ತಿಲ್ಲವೇ?’ ಎಂದು ಗ್ರಾಮಸ್ಥರ ನಡುವಿನಿಂದ ಗಟ್ಟಿ ದನಿಯೊಂದು ಕೂಗಿ ಹೇಳಿತು. ಮುಂದೆ ಸಾಗಿದ ಲಾರಿಗಳು ಬೆಟ್ಟದ ತಿರುವಿನಲ್ಲಿ ಮರೆಯಾದವು. ತುರ್ತು ನೆರವಿನ ಅಗತ್ಯವಿರುವ ನೇಪಾಳದ ಭೂಕಂಪ ಸಂತ್ರಸ್ತರಿಗೆ ಸಕಾಲದಲ್ಲಿ ನೆರವು ಲಭಿಸುತ್ತಿಲ್ಲ. ಬಹುತೇಕ ಕಡೆಗಳಲ್ಲಿ ನೆರವು ಇನ್ನೂ ತಲುಪಿಯೇ ಇಲ್ಲ.

ಈ ಮಧ್ಯೆ, ಮುಂದಿನ ದಿನಗಳಲ್ಲಿ ಬೇರೆಬೇರೆ ಕಾರಣಗಳಿಂದ ಸಾಂಕ್ರಾಮಿಕ ರೋಗಗಳು ಹರಡುವ ಅಪಾಯವಿದೆ ಎಂದು ವಿಶ್ವಸಂಸ್ಥೆಯ ಅಧಿಕಾರಿಯೊಬ್ಬರು ಶನಿವಾರ ಕಳವಳ ವ್ಯಕ್ತಪಡಿಸಿದ್ದರು. ಪೌವಾಥೊಕ್‌ನಂತಹ ಬೆಟ್ಟದ ಮೇಲಿನ ಹಳ್ಳಿಗಳಿಗೆ ತಲುಪಬೇಕಾದಲ್ಲಿ ಹೆಲಿಕಾಪ್ಟರ್‌ಗಳು ಬೇಕು ಎಂದು ವಿಶ್ವಸಂಸ್ಥೆಯ ಪರಿಹಾರ ಕಾರ್ಯಕರ್ತರು ಹೇಳುತ್ತಾರೆ. ನೇಪಾಳದ ಕುಗ್ರಾಮಗಳಿಂದ ಭೂಕಂಪ ಸಂಬಂಧಿ ವರದಿಗಳು ಬರುತ್ತಲೇ ಇವೆ. ಹೀಗಾಗಿ ಭೂಕಂಪದಿಂದಾದ ಹಾನಿಯ ಪ್ರಮಾಣವನ್ನು ಅಂದಾಜು ಮಾಡುವುದು ಇನ್ನೂ ಸಾಧ್ಯವಾಗಿಲ್ಲ. ಬಹುತೇಕ ಹಳ್ಳಿಗಳು ರಸ್ತೆ ಸಂಪರ್ಕವನ್ನೇ ಕಡಿದುಕೊಂಡಿವೆ. ನೇಪಾಳದ ಒಟ್ಟು ಜನಸಂಖ್ಯೆಯ ಪೈಕಿ ನಾಲ್ಕನೆ ಒಂದರಷ್ಟು ಜನರು (ಸುಮಾರು 8.1 ದಶಲಕ್ಷ) ಭೂಕಂಪದ ಪ್ರತಿಕೂಲ ಪರಿಣಾಮಗಳಿಂದ ತೊಂದರೆಗೆ ಒಳಗಾಗಿದ್ದಾರೆ ಎಂದು ವಿಶ್ವಸಂಸ್ಥೆ ಅಂದಾಜು ಮಾಡಿದೆ.

ಭೂಕಂಪದಿಂದ ಈವರೆಗೆ 7,040 ಜನರು ಅಸುನೀಗಿದ್ದಾರೆ ಎಂದು ನೇಪಾಳ ಸರಕಾರವೇ ತಿಳಿಸಿದೆ. ಭೂಕಂಪದಿಂದ ಬದುಕುಳಿದವರನ್ನು ಇನ್ನು ಪತ್ತೆ ಮಾಡುವುದು ಬಹಳ ಕಷ್ಟ ಎಂದು ಗೃಹ ಸಚಿವಾಲಯದ ಹಿರಿಯ ಅಧಿಕಾರಿ ಲಕ್ಷ್ಮೀ ಧಕಲ್ ಹೇಳುತ್ತಾರೆ.

ಎಪ್ರಿಲ್ 25ರ ಪ್ರಬಲ ಭೂಕಂಪದ ನಂತರ 70ಕ್ಕೂ ಹೆಚ್ಚು ಸಲ ಪಶ್ಚಾತ್ ಕಂಪನಗಳು ಸಂಭವಿಸಿವೆ. ಶನಿವಾರ ಮಧ್ಯಾಹ್ನ ಹೊತ್ತಿಗೆ ಕಿರು ಪಶ್ಚಾತ್ ಕಂಪನ ಸಂಭವಿಸಿದಾಗ ಗ್ರಾಮಸ್ಥರು ಕಿರಿಚಾಡುತ್ತ ತಮ್ಮ ಮನೆಗಳಿಂದ ಹೊರಗೋಡಿ ಬಂದರು. ಕಂಪನ ತಣ್ಣದಾದಾಗ ಹಳ್ಳಿಗರು ನೆಮ್ಮದಿಯ ನಿಟ್ಟುಸಿರು ಬಿಟ್ಟರು.
ಸಿಂಧೂಪಾಲ್‌ಚೌಕ್ ಜಿಲ್ಲೆಯಲ್ಲಿ (ಪೌವಾಥೊಕ್ ಈ ಜಿಲ್ಲೆಯ ಒಂದು ಹಳ್ಳಿ) ನೇಪಾಳದ ಬೇರೆಡೆಯಲ್ಲಿ ಎಲ್ಲೂ ಸಂಭವಿಸಿದಷ್ಟು ಸಾವುನೋವುಗಳು ಸಂಭವಿಸಿವೆ. ಇಲ್ಲಿ ಸುಮಾರು 2,560 ಜನರು ಸತ್ತಿದ್ದಾರೆ. ಇಡೀ ಕಠ್ಮಂಡುವಿನಲ್ಲಿ ಸತ್ತವರು 1,622 ಮಂದಿ ಮಾತ್ರ ಎಂಬುದನ್ನು ಗಮನಿಸಿ! ಸಿಂಧೂಪಾಲ್‌ಚೌಕ್ ಜಿಲ್ಲೆಯಲ್ಲಿ ಶೇ.90ರಷ್ಟು ಮನೆಗಳು ಧ್ವಂಸಗೊಂಡಿವೆ ಎಂದು ವಿಶ್ವಸಂಸ್ಥೆ ಅಧಿಕಾರಿಗಳು ಅಂದಾಜು ಮಾಡಿದ್ದಾರೆ.

ಭೂಕಂಪ ಸಂಭವಿಸಿದ ದಿನ ದೊಡ್ಡ ಮರವೊಂದರ ಅಡಿಯಲ್ಲಿ ತಾನು ಕುಳಿತಿದ್ದೆ ಎಂದು ಪೌವಾಥೊಕ್‌ನ ರಾಜಾರಾಮ ಗಿರಿ ನೆನಪಿಸಿಕೊಂಡು ಹೇಳುತ್ತಾರೆ. ಒಂದು ಕ್ಷಣದಲ್ಲಿ ಕೆಂಪು ಧೂಳಿನಿಂದ ಇಡೀ ಹಳ್ಳಿ ಆವರಿಸಿಕೊಂಡಿತು. ಧೂಳು ತೆರವಾದಾಗ ಕೇವಲ ಮನೆಗಳ ಅವಶೇಷಗಳು ಕಂಡು ಬಂದವು ಎಂದು ಗಿರಿ ಹೇಳುತ್ತಾರೆ. ಗ್ರಾಮದ ಒಟ್ಟು 80 ಮನೆಗಳ ಪೈಕಿ ಬೆರಳೆಣಿಕೆಯ ಮನೆಗಳು ಮಾತ್ರ ವಾಸಕ್ಕೆ ಯೋಗ್ಯವೆನಿಸಿವೆ. ಬಹುತೇಕರು ತಮ್ಮ ಮನೆಗಳ ಅವಶೇಷಗಳನ್ನು ಬಳಸಿಕೊಂಡು ನಿರ್ಮಿಸಿಕೊಂಡಿರುವ ತಾತ್ಕಾಲಿಕ ಮನೆಗಳಲ್ಲಿ ವಾಸಿಸುತ್ತಾರೆ. ಇನ್ನು ಕೆಲವರು ಟಾರ್ಪಾಲಿನ್‌ಗಳ ಅಡಿಯಲ್ಲಿ ಮಲಗುತ್ತಾರೆ. ರಸ್ತೆ ಮಧ್ಯೆ ಧರಣಿ ಕುಳಿತು ನೆರವಿನ ಲಾರಿಗಳನ್ನು ತಡೆದು ಇವುಗಳನ್ನು ಪಡೆದುಕೊಂಡಿದ್ದು ಎಂದು ಗಿರಿ ಹೇಳುತ್ತಾರೆ.
‘ನಾವು ಧರಿಸಿದ್ದ ಬಟ್ಟೆಬರೆ ಬಿಟ್ಟರೆ, ಬೇರೇನೂ ನಮ್ಮ ಬಳಿ ಇರಲಿಲ್ಲ. ಉಳಿದದ್ದೆಲ್ಲ ಅವಶೇಷಗಳ ಅಡಿಯಲ್ಲಿ ಮುಚ್ಚಿಹೋಗಿದೆ’ ಎಂದು ಗಿರಿ ತಿಳಿಸುತ್ತಾರೆ. ಶನಿವಾರ ರಾತ್ರಿ ಹೊತ್ತಿಗೆ ಪೌವಾಥೊಕ್ ಗ್ರಾಮಸ್ಥರ ಕೂಗು ಕಠ್ಮಂಡು ತಲುಪಿದಂತೆ ಕಾಣುತ್ತದೆ. ಒಂದು ಲಾರಿ ಭರ್ತಿ ಅಕ್ಕಿ, ನೂಡಲ್ಸ್, ವೈದ್ಯಕೀಯ ಸಾಮಗ್ರಿಗಳು ಹಳ್ಳಿಯನ್ನು ತಲುಪಿತು. ಕ್ಷಣಮಾತ್ರದಲ್ಲಿ ಗ್ರಾಮಸ್ಥರು ಲಾರಿಯನ್ನು ಸುತ್ತುವರಿದರು.

-ವಾತಾಱಭಾರತಿ

Write A Comment