ಫ್ರಾನ್ಸ್: ದಕ್ಷಿಣ ಫ್ರಾನ್ಸ್ ನ ಆಲ್ಫ್ಸ್ ಪರ್ವತ ಪ್ರದೇಶದಲ್ಲಿ ಜರ್ಮನ್ ವಿಂಗ್ಸ್ ವಿಮಾನ ಅಪಘಾತಕ್ಕೀಡಾಗಿ 148 ಮಂದಿ ಸಾವಿಗೀಡಾದ ದುರಂತದ ಬಳಿಕ ಅಪಘಾತದ ಸ್ಥಳದಲ್ಲಿ ಪತ್ತೆಯಾದ ಬ್ಲಾಕ್ ಬಾಕ್ಸ್ ವಿಶ್ಲೇಷಣೆ ನಡೆಸುವ ಮೂಲಕ ನಿಖರ ಕಾರಣ ಪತ್ತೆಗೆ ತಜ್ಞರು ಮುಂದಾಗಿದ್ದಾರೆ.
ಪ್ರಾಥಮಿಕ ಹಂತದ ವಿಶ್ಲೇಷಣೆ ವೇಳೆ ವಿಮಾನದಲ್ಲಿದ್ದ ಒಬ್ಬ ಪೈಲೆಟ್ ಕಾಕ್ ಪಿಟ್ ನಿಂದ ಹೊರಗೆ ಹೋಗಿರುವುದು ತಿಳಿದುಬಂದಿದೆ. ಅಲ್ಲದೇ ಹೊರ ಹೋಗಿದ್ದ ಪೈಲೆಟ್ ಮತ್ತೆ ಕಾಕ್ ಪಿಟ್ ಪ್ರವೇಶಿಸಲು ಬಂದ ವೇಳೆ ಅದು ಲಾಕ್ ಆಗಿರುವ ಅಂಶವೂ ಬೆಳಕಿಗೆ ಬಂದಿದೆ.
ಪೈಲೆಟ್ ಹಲವು ಬಾರಿ ಕಾಕ್ ಪಿಟ್ ಬಾಗಿಲನ್ನು ಬಡಿದರೂ ಒಳಗಿದ್ದ ಸಹ ಪೈಲೆಟ್ ತೆಗೆಯುವ ಪ್ರಯತ್ನ ಮಾಡದಿರುವುದೂ ಬ್ಲಾಕ್ ಬಾಕ್ಸ್ ನಲ್ಲಿನ ಧ್ವನಿಮುದ್ರಿಕೆಯಲ್ಲಿ ದಾಖಲಾಗಿದೆ. ಪೈಲೆಟ್ ಯಾಕಾಗಿ ಕಾಕ್ ಪಿಟ್ ಬಿಟ್ಟು ಹೊರ ತೆರಳಿದ್ದ ಮತ್ತು ಒಳಗಿದ್ದ ಸಹ ಪೈಲೆಟ್ ಕಾಕ್ ಪಿಟ್ ಬಾಗಿಲನ್ನು ತೆರೆಯದೇ ಇರುವುದು ಯಾಕೆ ಎಂಬುದು ಇನ್ನೂ ಪ್ರಶ್ನಾರ್ಥಕವಾಗಿಯೇ ಉಳಿದಿದೆ.
