ಅಂತರಾಷ್ಟ್ರೀಯ

ಮುಂಬೈ ದಾಳಿ ಪ್ರಕರಣದ ಸಂಚು­ಕೋರ ಲಖ್ವಿಗೆ ಜೈಲಿನಲ್ಲಿ ಅಂತರ್ಜಾಲ, ಮೊಬೈಲ್‌ ಸೌಲಭ್ಯ

Pinterest LinkedIn Tumblr

pvec02mar15j lakhvi

ಇಸ್ಲಾಮಾಬಾದ್‌: ಮುಂಬೈ ದಾಳಿ ಪ್ರಕರಣದ ಸಂಚು­ಕೋರ, ಲಷ್ಕರ್‌–ಎ ತಯಬಾ (ಎಲ್‌ಇಟಿ) ಮುಖ್ಯಸ್ಥ  ಝಕಿವುರ್‌ ರೆಹಮಾನ್‌ ಲಖ್ವಿ ರಾವಲ್ಪಿಂಡಿಯ ಕಾರಾಗೃಹದಲ್ಲಿ ಐಷಾ­ರಾಮಿ ಜೀವನ ನಡೆಸುತ್ತಿದ್ದಾನೆ. ಈತನನ್ನು ಇರಿಸಿ­ರುವ ಕೊಠಡಿಯಲ್ಲಿ ಅಂತರ್ಜಾಲ, ಮೊಬೈಲ್‌ ಸೌಲಭ್ಯ ಒದ­ಗಿಸಲಾಗಿದೆ. ಅಲ್ಲದೆ ಅತಿಥಿಗಳನ್ನು ಭೇಟಿ ಮಾಡುವುದಕ್ಕೆ ಯಾವುದೇ ನಿರ್ಬಂಧ ವಿಧಿಸಿಲ್ಲ. ಉಗ್ರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳ­ಲಾಗುವುದು ಎಂಬ ಅಲ್ಲಿನ ಸರ್ಕಾರದ ಹೇಳಿಕೆಗೆ ತದ್ವಿರುದ್ಧವಾಗಿ ಉಗ್ರನಿಗೆ ಸೌಲಭ್ಯ ಒದಗಿಸಲಾಗಿದೆ.

ರಾವಲ್ಪಿಂಡಿಯ ಅಡಿಯಾಲಾ ಕಾರಾಗೃಹದಲ್ಲಿ  ಭಾರಿ ಭದ್ರತೆಯಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದಾನೆ ಎಂದು ಬಿಬಿಸಿ ಉರ್ದು ವಾಹಿನಿ ವರದಿ ಮಾಡಿದೆ.ಲಖ್ವಿ ಜತೆ ಇತರ 6 ಸಹ ಆರೋಪಿ­ಗಳ ವಿರುದ್ಧ 2008 ರಲ್ಲಿ ಮುಂಬೈ ಮೇಲೆ ನಡೆಸಿದ ಉಗ್ರರ ದಾಳಿಯ ಗಂಭೀರ ಆರೋಪವಿದೆ. ಇಷ್ಟಾದರೂ ಸರ್ಕಾರ ಲಖ್ವಿ ಮತ್ತು  ಇತರ ಆರೋಪಿಗಳಿಗೆ ಕಾರಾಗೃಹದಲ್ಲಿ ಜೈಲು ಅಧೀಕ್ಷಕರ ಕಚೇರಿ ಕೊಠಡಿಯ ಪಕ್ಕ­ದಲ್ಲೇ ಹಲವು ಕೊಠಡಿ­ಗಳನ್ನು ಒದಗಿಸಿ ಸೌಲಭ್ಯ ನೀಡಿದೆ.

‘ಟಿ.ವಿ, ಮೊಬೈಲ್‌ ಫೋನ್‌ ಹಾಗೂ ಇಂಟರ್‌­ನೆಟ್‌ ಸಂಪರ್ಕ ಅಲ್ಲದೆ ದಿನಕ್ಕೆ ಯಾವುದೇ ಸಂಖ್ಯೆಯ ಅತಿಥಿಗಳ ಭೇಟಿಗೆ ಜೈಲು ಅಧಿಕಾರಿಗಳು ಅನುಮತಿ ನೀಡಿ­ದ್ದಾರೆ’ ಎಂದು ಬಿಬಿಸಿ ವರದಿ ಮಾಡಿದೆ. ‘ಲಖ್ವಿಗೆ ಎಷ್ಟು ಅತಿಥಿಗಳನ್ನಾದರೂ ದಿನದ ಯಾವ ಸಮಯದಲ್ಲಾದರೂ ಭೇಟಿ ಮಾಡುವ ಅವಕಾಶ ನೀಡಲಾ­ಗಿದೆ’ ಎಂದು ಕಾರಾಗೃಹದ ಅಧಿಕಾರಿ­ಯೊಬ್ಬರು ಹೇಳಿದ್ದಾರೆ.

ಇದಕ್ಕೆಲ್ಲ ಯಾವುದೇ ಅನುಮತಿ ಪಡೆಯಬೇಕಿಲ್ಲ. ಅತಿಥಿಗಳು ತಮ್ಮ ಗುರುತನ್ನು ಜೈಲಿನ ಅಧಿಕಾರಿಗಳಿಗೆ ತಿಳಿಸಬೇಕಾಗಿಲ್ಲ.  ‘ಲಖ್ವಿ ರೀತಿ ಜೈಲಿನಲ್ಲಿ ಸಕಲ ಸೌಲಭ್ಯದೊಂದಿಗೆ ಜೀವನ ಮಾಡು­ವುದನ್ನು ಬೇರೆ ಕಡೆ ಊಹಿಸಲು ಸಾಧ್ಯವಿಲ್ಲ. ಆದರೆ ಪಾಕಿಸ್ತಾನ ಕೆಲವು ಉಗ್ರ ಸಂಘಟನೆ ಕಮಾಂಡರ್‌ಗಳಿಗೆ ಸೌಲಭ್ಯ ನೀಡಿ ಸಾಕುತ್ತದೆ. ಭವಿಷ್ಯದಲ್ಲಿ ಅವರ ನೆರವು ಪಡೆಯಲು ಈ ರೀತಿ ಮಾಡಲಾಗುತ್ತದೆ’ ಎಂದು ವಾಹಿನಿ ಹೇಳಿದೆ. ‘ಭೇಟಿ ಮಾಡಲು ಬರುವವ­ರನ್ನು ಲಖ್ವಿ ಇರುವ ಸ್ಥಳಕ್ಕೆ ಭದ್ರತೆಯಲ್ಲಿ ಕರೆದೊಯ್ಯಲಾಗುತ್ತದೆ.

ಅತಿಥಿಗಳು ಎಷ್ಟು ಹೊತ್ತಾದರೂ ಆತನೊಂದಿಗೆ ಇರಬಹುದು’ ಎಂದು ವಾಹಿನಿ ಜೈಲಿನ ಅಧಿಕಾರಿಯೊಬ್ಬರ ಹೇಳಿಕೆ ಉಲ್ಲೇಖಿಸಿ ವರದಿ ಮಾಡಿದೆ.ಲಷ್ಕರ್‌ ಎ ತಯಬಾ ಸಂಘಟನೆಯ ಸ್ಥಾಪಕ ಹಫೀಜ್‌ ಸಯೀದ್‌ ಆಪ್ತನಾದ ಲಖ್ವಿಯನ್ನು 2008 ರ ಡಿಸೆಂಬರ್‌ನಲ್ಲಿ ಬಂಧಿಸಲಾ­ಗಿದೆ. ಮುಂಬೈ ದಾಳಿ ಪ್ರಕರಣದಲ್ಲಿ ಈತನ 6 ಜನ ಸಹಚರ­ರನ್ನು 2009ರ ನವೆಂಬರ್‌ನಲ್ಲಿ ಬಂಧಿಸಲಾಯಿತು. 2009ರಿಂದ ಲಖ್ವಿ­ಯನ್ನು ರಾವಲ್ಪಿಂಡಿಯ ಅಡಿಯಾಲಾ ಕಾರಾಗೃಹದಲ್ಲಿ ಇರಿಸಲಾಗಿದೆ.

Write A Comment