ಅಂತರಾಷ್ಟ್ರೀಯ

ಇನ್ಫೊಸಿಸ್‌ ಉದ್ಯೋಗಿ ಸೇರಿ ಇಬ್ಬರೂ ಭಾರತೀಯರು ಸುರಕ್ಷಿತ; ಇರಾನ್‌ ನಿರಾಶ್ರಿತ, ಐ.ಎಸ್‌ ಬೆಂಬಲಿಗ ಮ್ಯಾನ್‌ ಹರೋನ್‌ ಮೋನಿಸ್‌ನಿಂದ ಕೃತ್ಯ; ಸಿಡ್ನಿ ಕೆಫೆ ಒತ್ತೆ ರಕ್ತಸಿಕ್ತ ಅಂತ್ಯ

Pinterest LinkedIn Tumblr

Australia Police Operation

ಸಿಡ್ನಿ (ಪಿಟಿಐ): ಐ.ಎಸ್‌ ಬೆಂಬಲಿಗ ಬಂದೂಕುಧಾರಿಯೊಬ್ಬ ಆಸ್ಟ್ರೇ­ಲಿಯಾ­ದ ಸಿಡ್ನಿಯ ಲಿಂಡ್‌ ಚಾಕ­ಲೇಟ್‌ ಕೆಫೆಗೆ ಸೋಮವಾರ ಬೆಳಿಗ್ಗೆ ನುಗ್ಗಿ ನಾಗರಿಕರನ್ನು ಒತ್ತೆಯಿ­ರಿಸಿಕೊಂಡಿದ್ದ ಪ್ರಕರಣ ೧೬ ತಾಸುಗಳ ಬಳಿಕ ರಕ್ತಸಿಕ್ತ ಅಂತ್ಯ ಕಂಡಿದೆ.

ಶಸ್ತ್ರಸಜ್ಜಿತ ಪೊಲೀಸರು ಕೆಫೆ ಒಳಗೆ ಕಾರ್ಯಾ­ಚರಣೆ­ ನಡೆಸಿದಾಗ ಗುಂಡಿನ ಶಬ್ದ ಕೇಳಿ ಬಂತು. ಘಟನೆಯಲ್ಲಿ ಇಬ್ಬರು ಸಾವಿ­ಗೀಡಾ­ಗಿದ್ದು, ಹಲವರು ಗಾಯಗೊಂಡಿದ್ದಾರೆ.

ಕೆಫೆ ಒಳಗಿದ್ದ ಒತ್ತೆಯಾಳುಗಳಲ್ಲಿ ಭಾರತದ ಪುಷ್ಪೇಂದು ಘೋಷ್‌, ಇನ್ಫೊ-­ಸಿಸ್ ಉದ್ಯೋಗಿ ಆಂಧ್ರದ ವಿಶ್ವಕಾಂತ್‌ ಅಂಕಿತ್ ರೆಡ್ಡಿ ಕೂಡ ಇದ್ದರು. ಅವರೂ ಸೇರಿ 11 ಮಂದಿ ಸುರಕ್ಷಿತವಾಗಿ ಹೊರಗೆ ಬಂದಿದ್ದಾರೆ.

ಸಿಡ್ನಿಯ ಹೃದಯಭಾಗದಲ್ಲಿರುವ ಪ್ರಸಿದ್ಧ ಮಾರ್ಟಿನ್‌ ಪ್ಲೇಸ್‌ನ ಲಿಂಡ್‌ ಚಾಕಲೇಟ್‌ ಕೆಫೆಗೆ (ರೆಸ್ಟೊರೆಂಟ್‌) ಸ್ಥಳೀಯ ಕಾಲಮಾನ ಸೋಮವಾರ ಬೆಳಿಗ್ಗೆ ೯.೪೦ರ ವೇಳೆಗೆ (ಭಾರತೀಯ ಕಾಲಮಾನ ಬೆಳಿಗ್ಗೆ ೪.೧೦ ಗಂಟೆ) ಶಸ್ತ್ರಸಹಿತ ನುಗ್ಗಿದ್ದ ಹರೋನ್‌ ಅಲ್ಲಿದ್ದವರನ್ನು ಒತ್ತೆಯಿರಿಸಿಕೊಂಡಿದ್ದ.

ಬೇಡಿಕೆ: ಐ.ಎಸ್‌ ಧ್ವಜ ಕೊಡಬೇಕು, ಆಸ್ಟ್ರೇಲಿಯಾ ಪ್ರಧಾನಿ ಟೋನಿ ಅಬಾಟ್‌ ತನ್ನೊಂದಿಗೆ ಮಾತ­ನಾಡ­­ಬೇಕು ಎಂದು ಬೇಡಿಕೆ ಇಟ್ಟಿದ್ದ. ಕೆಫೆ ಒಳಗೆ ಮತ್ತು ಪ್ರಮುಖ ವಾಣಿಜ್ಯ ಪ್ರದೇಶ­ದಲ್ಲಿ ತಲಾ 2 ಬಾಂಬ್‌ ಇಟ್ಟಿ­ದ್ದಾಗಿ ಒತ್ತೆ­ಯಾಳುಗಳಿಗೆ ತಿಳಿಸಿದ್ದ.

ಕೊನೆಯ ಕ್ಷಣದಲ್ಲಿ ಕಾರ್ಯಾಚರಣೆ: ಸ್ಥಳಕ್ಕೆ ಧಾವಿಸಿದ ಪೊಲೀಸ್‌ ಸಂಧಾನಕಾರರು ಬಂದೂಕುಧಾರಿ ಜತೆ ಮಾತುಕತೆ ನಡೆಸಿದ್ದರು. ೧೬ ಗಂಟೆ ಕಾದು ಕೆಫೆಯ ಒಳಗೆ ನುಗ್ಗಿ ರಕ್ಷಣಾ ಕಾರ್ಯಾಚರಣೆ ನಡೆಸಿದರು.

ಕೆಫೆಯಲ್ಲಿ ನಡೆದಿದ್ದು ಏನು?: ಉಗ್ರಗಾಮಿ ದಾಳಿ ನಡೆಸಿದ ಸುಮಾರು ಐದು ತಾಸಿನ ನಂತರ ಮಹಿಳೆ ಸೇರಿದಂತೆ ಐವರು ತಪ್ಪಿಸಿಕೊಂಡು ಹೊರಗೆ ಓಡಿಬಂದರು.

ಒತ್ತೆಯಾಳುಗಳಲ್ಲಿ ಕೆಲವರು ಕಿಟಕಿ ಗಾಜಿಗೆ ಕೈ ಒತ್ತಿ­ಕೊಂಡು ನಿಂತಿದ್ದರು. ಇವರ ಕೈಯಲ್ಲಿ ಈತ ಕಪ್ಪು ಧ್ವಜಗಳನ್ನು ಕೊಟ್ಟಿದ್ದ. ಸರದಿ ಪ್ರಕಾರ ಇವರನ್ನು ಕಿಟಕಿ ಮುಂದೆ ಬಲ­ವಂತ­ವಾಗಿ ತಂದು ನಿಲ್ಲಿಸುತ್ತಿದ್ದ ಎಂದೂ ‘ಚಾನೆಲ್‌ 7’ ಹೇಳಿತ್ತು.

ಈ ಧ್ವಜಗಳ ಮೇಲೆ ‘ಅಲ್ಲಾಹುವಿನ ಹೊರತಾಗಿ ಬೇರೆ ದೇವರು ಇಲ್ಲ; ಮೊಹಮ್ಮದ್‌ ಆತನ ದೂತ’ ಎಂದು ಅರಬ್ಬಿ­ಯಲ್ಲಿ ಬರೆಯಲಾಗಿತ್ತು. ಐ.ಎಸ್‌ ಹಾಗೂ ಅಲ್‌ಕೈದಾ ಉಗ್ರರು ಸೇರಿದಂತೆ ಸುನ್ನಿ ಉಗ್ರರ ಗುಂಪಿನಲ್ಲಿ ಈ ಧ್ವಜ ಜನಪ್ರಿಯ.

ಅಮೆರಿಕದ ಪ್ರಬಲ ಮಿತ್ರದೇಶವಾಗಿರುವ ಆಸ್ಟ್ರೇಲಿಯಾ ಸಿರಿಯಾ ಮತ್ತು ಇರಾಕ್‌ನಲ್ಲಿರುವ ಐ.ಎಸ್‌ನ ಕಟುವಿರೋಧಿ. ಮಧ್ಯಪ್ರಾಚ್ಯದಿಂದ ಮರಳುತ್ತಿರುವ ಸ್ವದೇಶಿ ಉಗ್ರರಿಂದ ದಾಳಿಯ ಬೆದರಿಕೆ ಎದುರಿಸುತ್ತಿದೆ.

ವಾಣಿಜ್ಯ ಸಮುಚ್ಚಯ
ಮಾರ್ಟಿನ್‌ ಪ್ಲೇಸ್‌ ವಾಣಿಜ್ಯ ಸಮುಚ್ಚಯವಾಗಿದ್ದು, ಸಮೀಪದಲ್ಲಿಯೇ ಸಿಡ್ನಿ ಒಪೇರಾ ಹೌಸ್‌, ರಾಷ್ಟ್ರೀಯ ಗ್ರಂಥಾಲಯ, ಸಿಡ್ನಿ ಶಾಸಕಾಂಗ ಕಟ್ಟಡ ಹಾಗೂ ನ್ಯಾಯಾಲಯಗಳು ಇವೆ.

ಮಾರ್ಟಿನ್‌ ಪ್ಲೇಸ್‌ನಿಂದ ಕೇವಲ ೪೦೦ ಮೀಟರ್‌ ದೂರದಲ್ಲಿ ಭಾರತ ಮತ್ತು ಅಮೆರಿಕ ಕಾನ್ಸಲೇಟ್‌ ಸೇರಿ ಸೇರಿ ಅನೇಕ ಪ್ರಮುಖ ಕಚೇರಿಗಳಿದ್ದು, ಅವುಗಳನ್ನು ತೆರವುಗೊಳಿ­ಸಲಾಗಿತ್ತು. ಲಿಂಡ್‌ ಕೆಫೆ ಸಮೀಪವೇ ಎಸ್‌ಬಿಐ, ಬ್ಯಾಂಕ್‌ ಆಫ್‌ ಬರೋಡಾ, ಭಾರತೀಯ ಪ್ರವಾಸೋದ್ಯಮ ಕಚೇರಿ ಸೇರಿದಂತೆ ಭಾರತದ ಅನೇಕ ಕಚೇರಿಗಳೂ ಇವೆ.

ಕ್ರಿಕೆಟಿಗರಿಗೆ ಭದ್ರತೆ: ಆಸೀಸ್‌ ಪ್ರವಾಸ­ದಲ್ಲಿ­ರುವ ಭಾರತ ಕ್ರಿಕೆಟ್‌ ತಂಡದ ಆಟಗಾರರಿಗೆ ಬಿಗಿಭದ್ರತೆ ಒದಗಿಸ­ಲಾಗಿದೆ. ಬುಧವಾರ ಆರಂಭವಾಗಲಿರುವ 2ನೇ ಟೆಸ್ಟ್‌ ಆಡಲು ತಂಡವು ಸದ್ಯ ಬ್ರಿಸ್ಬೇನ್‌ನಲ್ಲಿ ತಂಗಿದೆ. ಬಿಸಿಸಿಐ ಕ್ರಿಕೆಟ್‌ ಆಸ್ಟ್ರೇಲಿಯಾ ಜತೆ ನಿರಂತರ ಸಂಪರ್ಕ ಹೊಂದಿದೆ.

ಯಾರಿತ ಬಲಿಯಾದ ಬಂದೂಕುಧಾರಿ?

Lindt
ಲಿಂಡ್‌ ಕೆಫೆ ದಾಳಿಕೋರ ಮ್ಯಾನ್‌ ಹರೋನ್‌ ಮೋನಿಸ್‌ (49) ಮೂಲತಃ ಇರಾನ್‌ ನಿರಾಶ್ರಿತ. 1996ರಲ್ಲಿ ಆಸ್ಟ್ರೇಲಿ­ಯಕ್ಕೆ ವಲಸೆ ಬಂದಿದ್ದ. ಅತ್ಯಾಚಾರ ಪ್ರಕರಣಗಳಲ್ಲಿ ಈತ ತಪ್ಪಿತಸ್ಥ ಎಂದು ಸಾಬೀತಾ­ಗಿತ್ತು. ಆಫ್ಘನ್‌ ಯುದ್ಧದಲ್ಲಿ ಮೃತಪಟ್ಟ ಆಸ್ಟ್ರೇ­ಲಿಯಾ ಯೋಧರ ಕುಟುಂಬಕ್ಕೆ ದ್ವೇಷಪೂರಿತ ಸಂದೇಶ ಕಳುಹಿಸಿದ ಆರೋಪವೂ ಈತನ ಮೇಲಿದೆ. ಮಾಜಿ ಪತ್ನಿಯ ಕೊಲೆಗೆ ನೆರವಾದ ಪ್ರಕರಣದಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ.
ದಾಳಿಯ ವೇಳೆ ಆತ ಪೊಲೀಸ್‌ ಗುಂಡಿಗೆ ಬಲಿಯಾಗಿದ್ದಾನೆ ಎಂದು ಆಸ್ಟ್ರೇಲಿಯಾ ಪೊಲೀಸರು ತಿಳಿಸಿದ್ದಾರೆ.

Write A Comment