ಅಂತರಾಷ್ಟ್ರೀಯ

ಜತೆ ಜತೆಯಲ್ಲಿ ಸಾಗೋಣ..ಒಬಾಮ-ಮೋದಿ ಸಂಕಲ್ಪ : ವಿಶ್ವದ ಪ್ರಜಾಪ್ರಭುತ್ವ ದಿಗ್ಗಜರ ಅಪೂರ್ವ ಮಿಲನ

Pinterest LinkedIn Tumblr

obama_30

ವಾಷಿಂಗ್ಟನ್, ಸೆ.30: ಇಡೀ ವಿಶ್ವದ ಕಲ್ಯಾಣಕ್ಕಾಗಿ ನಾವಿಬ್ಬರೂ ಹೆಗಲಿಗೆ ಹೆಗಲು ಸೇರಿಸಿ ಜತೆ ಜತೆಯಾಗಿ ಮುನ್ನಡೆಯೋಣ… ಜಗತ್ತಿನ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಗಳಾದ ಭಾರತ-ಅಮೆರಿಕ ಮೇರು ನಾಯಕರಿಬ್ಬರು ಇಂದು ಶ್ವೇತಭವನದಿಂದ ಬಿಡುಗಡೆ ಮಾಡಿರುವ ಜಂಟಿ ಘೋಷಣಾ ವಾಕ್ಯವಿದು. ಅಧ್ಯಕ್ಷ ಒಬಾಮಾ ಅವರು ನೀಡಿದ್ದ ಖಾಸಗಿ ಭೋಜನಕೂಟಕ್ಕೆ ಪ್ರಧಾನಿ ಮೋದಿ ಅವರು ಆಗಮಿಸುತ್ತಿದ್ದಂತೆಯೇ ನಾಯಕದ್ವಯರು ಈ ಐತಿಹಾಸಿಕ ಜಂಟಿ ಹೇಳಿಕೆಯನ್ನು ಹೊರಡಿಸಿದ್ದಾರೆ. ಈ ಘೋಷಣಾ ವಾಕ್ಯ ಕೇವಲ ಭಾರತ ಮತ್ತು ಅಮೆರಿಕಗಳ ಲಾಭಕ್ಕೆ ಮಾತ್ರವಲ್ಲದೆ, ಇಡೀ ವಿಶ್ವ ಕಲ್ಯಾಣಕ್ಕಾಗಿ, ಲಾಭಕ್ಕಾಗಿ ಎಂದು ಶ್ವೇತಭವನದ ಪ್ರಕಟಣೆ ತಿಳಿಸಿದೆ. ಶಾಂತಿ-ಸಮೃದ್ಧಿಗಾಗಿ ಈ ನಮ್ಮ ವಿಶೇಷ ಪಾಲುದಾರಿಕೆ. ವಿಜ್ಞಾನ, ತಂತ್ರಜ್ಞಾನ, ರಕ್ಷಣೆ,
ಭದ್ರತೆ, ಆರ್ಥಿಕ ಅಭಿವೃದ್ಧಿ ಸೇರಿದಂತೆ ಎಲ್ಲ ರಾಷ್ಟ್ರಗಳೊಂದಿಗೆ ಪರಸ್ಪರ ಸಹಕಾರದೊಂದಿಗೆ ನಾವು ಮುನ್ನಡೆಯುವ ಅಗತ್ಯವಿದೆ.

ಎಲ್ಲಕ್ಕಿಂತಲೂ ಭದ್ರತಾ ಸಹಕಾರ ಮಹತ್ವ ಪಡೆದುಕೊಂಡಿದೆ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ. ನಾವು ಒಟ್ಟಿಗೇ ಭಯೋತ್ಪಾದಕತೆಯನ್ನು ಎದುರಿಸೋಣ, ಮಟ್ಟ ಹಾಕೋಣ. ದೇಶ ಪ್ರಜೆಗಳನ್ನು ಭಯೋತ್ಪಾದಕ ದಾಳಿಗಳಿಂದ ರಕ್ಷಿಸೋಣ. ಪ್ರಕೃತಿ ವಿಕೋಪಗಳಂಥ ಸಂದರ್ಭಗಳಲ್ಲಿ ಪರಸ್ಪರ ನೆರವಿಗೆ ನಿಲ್ಲೋಣ. 21ನೆ ಶತಮಾನದಲ್ಲಿ ಭಾರತ ಮತ್ತು ಅಮೆರಿಕ ಪರಸ್ಪರ ನಂಬಿಕೆ-ವಿಶ್ವಾಸಗಳ ತಳಹದಿಯಲ್ಲಿ ನಮ್ಮ ಪಾಲುದಾರಿಕೆಯನ್ನು ಭದ್ರವಾಗಿ ನೆಲೆಗೊಳಿಸೋಣ. ವಿನಾಕಶಕಾರಿ ಶಸ್ತ್ರಾಸ್ತ್ರಗಳು ಉಗ್ರರಿಗೆ ದೊರೆಯದಂತೆ ನಿಯಂತ್ರಿಸುವ ಮೂಲಕ ಸಾಮೂಹಿಕ ನಾಶವನ್ನು ತಡೆಯೋಣ. ಪರಮಾಣು ನಿಶ್ಯಸ್ತ್ರೀಕರಣ ವಿಚಾರದಲ್ಲಿ ಯಾವುದೇ ತಾರತಮ್ಯ ಬೇಡ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

ಎರಡೂ ದೇಶಗಳ ಇತಿಹಾಸಗಳೂ ಬೇರೆ ಬೇರೆ ಇರಬಹುದು. ಆದರೆ, ಉಭಯ ದೇಶಗಳ ಹಿಂದಿನ ನಾಯಕರು ಪ್ರಜೆಗಳಿಗೆ ಸ್ವಾತಂತ್ರ್ಯವನ್ನು ಖಾತ್ರಿ ಪಡಿಸಿದ್ದಾರೆ. ಪ್ರತಿಯೊಬ್ಬ ಪ್ರಜೆಯೂ ತನ್ನದೇ ಆದ ಬದುಕನ್ನು ಕಟ್ಟಿಕೊಳ್ಳಲು ಎರಡೂ ದೇಶಗಳೂ ಮುಕ್ತ ಸ್ವಾತಂತ್ರ್ಯ ನೀಡಿವೆ. ಜನತೆ ನಂಬಿರುವ ಪ್ರಜಾತಂತ್ರ, ಸ್ವಾತಂತ್ರ್ಯಗಳ ರಕ್ಷಣೆಗೆ ಎರಡು ದೇಶಗಳೂ ಬದ್ಧವಾಗಿವೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯೂ ಸೇರಿದಂತೆ ಪ್ರಮುಖ ರಕ್ಷಣಾತ್ಮಕ ವಿಷಯಗಳಲ್ಲಿ ನಮ್ಮ ಪಾಲುದಾರಿಕೆ ಅಭಿಯಾನ ಮುನ್ನಡೆಯಲಿದೆ. ಪರಿಸರದಲ್ಲಾಗುವ ಬದಲಾವಣೆಗಳು ಎರಡೂ ದೇಶಗಳಿಗೂ ಸವಾಲಾಗಿರುತ್ತವೆ. ಆದರೆ, ಅದನ್ನು ನಿಯಂತ್ರಿಸುವ ಸೂತ್ರಗಳನ್ನು ನಾವು ಅಳವಡಿಸಿಕೊಳ್ಳಬೇಕಾಗಿದೆ. ಮಾಲಿನ್ಯ ನಿಯಂತ್ರಣದಲ್ಲಿಯೂ ನಾವು ಸಕ್ರಿಯವಾಗಿ ಭಾಗವಹಿಸಬೇಕಾಗಿದೆ ಎದು ಶ್ವೇತಭವನ ಹೇಳಿದೆ.

Write A Comment