ಅಂತರಾಷ್ಟ್ರೀಯ

ಭಾರತಕ್ಕೆ ಹೊರಟಿದ್ದ ಮಲೇಶ್ಯ ವಿಮಾನ ತುರ್ತು ಭೂಸ್ಪರ್ಶ

Pinterest LinkedIn Tumblr

Maleshiya

ಕೌಲಾಲಂಪುರ, ಸೆ.14: ಭಾರತಕ್ಕೆ ತೆರಳಿದ್ದ ಮಲೇಶ್ಯ ಏರ್‌ಲೈನ್ಸ್‌ನ ವಿಮಾನವೊಂದರ ಆಟೊ ಪೈಲಟ್ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸುರಕ್ಷಿತವಾಗಿ ತುರ್ತು ಭೂಸ್ಪರ್ಶಗೈದ ಘಟನೆ ರವಿವಾರ ಸಂಭವಿಸಿದೆ. ಮಲೇಶ್ಯ ಏರ್‌ಲೈನ್ಸ್‌ನ ಎರಡು ವಿಮಾನಗಳು ಈಗಾಗಲೇ ದುರಂತಕ್ಕೀಡಾಗಿ ನೂರಾರು ಮಂದಿಯನ್ನು ಬಲಿತೆಗೆದುಕೊಂಡಿರುವುದು ಎಲ್ಲರ ನೆನಪಿನಲ್ಲಿರುವಾಗಲೇ ಈ ಘಟನೆ ಸಂಭವಿಸಿದೆ.

ಏರ್‌ಲೈನ್ಸ್‌ನ ಎಂಎಚ್198 ವಿಮಾನವು ಸ್ಥಳೀಯ ಕಾಲಮಾನ ಶನಿವಾರ ರಾತ್ರಿ 10:30ರ ವೇಳೆಗೆ ಕೌಲಾಲಂಪುರದಿಂದ ಹೈದರಾಬಾದ್‌ನತ್ತ ಹಾರಾಟ ಪ್ರಾರಂಭಿಸಿತ್ತಾದರೂ, ಆಟೊ ಪೈಲಟ್‌ನಲ್ಲಿ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅದು ಮಧ್ಯರಾತ್ರಿಯ ಬಳಿಕ 2:01ರ ಸುಮಾರಿಗೆ ಕೌಲಾಲಂಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಿ ತುರ್ತು ಭೂಸ್ಪರ್ಶಗೈದಿದೆ ಎಂದು ವಿಮಾನಯಾನ ಸಂಸ್ಥೆ ಹೇಳಿಕೆಯೊಂದರಲ್ಲಿ ತಿಳಿಸಿದೆ.

‘‘ಆಟೊ ಪೈಲಟ್‌ನಲ್ಲಿ ಕಾಣಿಸಿಕೊಂಡ ಲೋಪವು ವಿಮಾನ ಅಥವಾ ಪ್ರಯಾಣಿಕರ ಮೇಲೆ ಯಾವುದೇ ಪರಿಣಾಮ ಬೀರುವ ಸಾಧ್ಯತೆ ಇಲ್ಲವಾಗಿತ್ತಾದರೂ, ಮುನ್ನೆಚ್ಚರಿಕೆ ಕ್ರಮವಾಗಿ ಚಾಲಕನು ವಿಮಾನವನ್ನು ಇಳಿಸಲು ನಿರ್ಧರಿಸಿದನು’’ ಎಂದು ವಿಮಾನಯಾನ ಸಂಸ್ಥೆ ಹೇಳಿದೆ.

ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡ ಕಾರಣ ಅದು ತುರ್ತು ಭೂಸ್ಪರ್ಶಗೈದಿದೆಯೆಂಬ ವರದಿಗಳನ್ನು ತಳ್ಳಿಹಾಕಿರುವ ಮಲೇಶ್ಯ ಏರ್‌ಲೈನ್ಸ್, ವದಂತಿಗಳನ್ನು ಹರಡಿ ವಿಮಾನ ಪ್ರಯಾಣಿಕರಲ್ಲಿ ಗೊಂದಲ ಸೃಷ್ಟಿಯಾಗದಂತೆ ಸಹಕಾರ ನೀಡುವಂತೆ ಸಾರ್ವಜನಿಕರನ್ನು ಕೋರಿದೆ. ಮರುನಿಗದಿತ ಯಾನದಲ್ಲಿ ಎಂಎಚ್198ಡಿ ವಿಮಾನವು ರವಿವಾರ ಮಧ್ಯಾಹ್ನ ಕೌಲಾಲಂಪುರದಿಂದ ಹೈದರಾಬಾದ್‌ಗೆ ಹಾರಾಟ ನಡೆಸಿದೆ.

Write A Comment