ರಾಷ್ಟ್ರೀಯ

ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಶಾಸಕರ ಪುತ್ರ

Pinterest LinkedIn Tumblr

ಮಧ್ಯಪ್ರದೇಶ: ಕಾಂಗ್ರೆಸ್‌ ಶಾಸಕರೋರ್ವರ ಪುತ್ರ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಧ್ಯಪ್ರದೇಶದ ಜಬಲ್‌‌ಪುರದಲ್ಲಿ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡಾತನನ್ನು ವೈಭವ್‌ (16) ಎಂದು ಗುರುತಿಸಲಾಗಿದೆ. ಈತ ಜಬಲ್‌ಪುರದ ಬಾರ್ಗಿ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಸಂಜಯ್‌ ಯಾದವ್‌ ಅವರ ಪುತ್ರ.

ದ್ವಿತೀಯ ಪಿಯು ಓದುತ್ತಿದ್ದ ವೈಭವ್‌, ಸ್ನಾನದ ಕೋಣೆಗೆ ಹೋಗಿ ತಲೆಗೆ ಗುಂಡು ಹಾರಿಸಿಕೊಂಡಿದ್ದಾನೆ. ಗುಂಡಿನ ಸದ್ದು ಕೇಳಿದ ತಕ್ಷಣ ಕುಟುಂಬಸ್ಥರು ಧಾವಿಸಿದ್ದು, ಕೂಡಲೇ ಆತನನ್ನು ಆಸ್ಪತ್ರೆ ಕೊಂಡೊಯ್ಯಲಾಯಿತ್ತಾದರೂ ಆತ ಅದಾಗಲೇ ಸಾವನ್ನಪ್ಪಿದ್ದ. ವೈಭವ್‌ ಡೆತ್‌ ನೋಟ್‌ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಡೆತ್‌ ನೋಟ್‌ ಅನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಡೆತ್‌ ನೋಟ್‌ನಲ್ಲಿ ನನ್ನ ಸಾವಿಗೆ ನಾನೇ ಕಾರಣ ಎಂದು ಬರೆಯಲಾಗಿದೆ” ಎಂದು ಜಬಲ್‌ಪುರದ ಪೊಲೀಸ್‌‌‌ ವರಿಷ್ಠಾಧಿಕಾರಿ ಸಿದ್ಧಾರ್ಥ್ ಬಹುಗುಣ ತಿಳಿಸಿದ್ದಾರೆ.

ಆತ್ಮಹತ್ಯೆಗೂ ಮೊದಲು ವೈಭವ್‌ ತನ್ನ ಎಲ್ಲಾ ಸ್ನೇಹಿತರಿಗೆ ಕರೆ ಮಾಡಿದ್ದು, ಇಷ್ಟು ದಿನ ತನ್ನೊಂದಿಗೆ ಕಳೆದಿರುವುದಕ್ಕೆ ಹಾಗೂ ತನ್ನ ಸ್ನೇಹಿತರಾಗಿರುವುದಕ್ಕೆ ಧನ್ಯವಾದ ತಿಳಿಸಿದ್ದಾನೆ. ಸಾವಿಗೆ ನಿಖರ ಕಾರಣ ಏನು ಎಂದು ಕುಟುಂಬಸ್ಥರಿಗೂ ತಿಳಿದಿಲ್ಲ ಎಂದು ಹೇಳಿದ್ದಾರೆ.

ಪ್ರಕರಣದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Comments are closed.