ರಾಷ್ಟ್ರೀಯ

ಮೇ 5ರಂದು ಪಶ್ಚಿಮ ಬಂಗಾಳದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ಮಮತಾ ಬ್ಯಾನರ್ಜಿ

Pinterest LinkedIn Tumblr

ಕೋಲ್ಕತಾ: ಪಶ್ಚಿಮ ಬಂಗಾಳದ ನೂತನ ಮುಖ್ಯಮಂತ್ರಿಯಾಗಿ ತೃಣಮೂಲ ಕಾಂಗ್ರೆಸ್ ಪಕ್ಷದ ಅಧಿನಾಯಕಿ ಮಮತಾ ಬ್ಯಾನರ್ಜಿ ಅವರು ಮೇ 5ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ತಿಳಿದುಬಂದಿದೆ.

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಫಲಿತಾಂಶದ ಬೆನ್ನಲ್ಲೇ ಇಂದು ನಡೆದ ಟಿಎಂಸಿ ಶಾಸಕಾಂಗ ಸಭೆಯಲ್ಲಿ ಮಮತಾ ಬ್ಯಾನರ್ಜಿ ಅವರನ್ನು ಶಾಸಕಾಂಗ ಪಕ್ಷದ ನಾಯಕಿಯಾಗಿ ಅಧಿಕೃತವಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಆ ಮೂಲಕ ಮಮತಾ ಬ್ಯಾನರ್ಜಿ ಅವರು ಸತತ ಮೂರನೇ ಬಾರಿಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಇದೇ ಮೇ 5ರಂದು ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದ್ದು, ಮಮತಾ ಬ್ಯಾನರ್ಜಿ ಅವರೊಂದಿಗೆ ಯಾರೆಲ್ಲಾ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂಬುದು ತಿಳಿದುಬಂದಿಲ್ಲ.

ನಂದಿಗ್ರಾಮ ಫಲಿತಾಂಶ; ಚುನಾವಣಾ ಆಯೋಗದ ವಿರುದ್ಧ ಕೋರ್ಟ್ ಗೆ ಅರ್ಜಿ
ಇದೇ ವೇಳೆ ನಂದಿಗ್ರಾಮ ಕ್ಷೇತ್ರದ ಫಲಿತಾಂಶದ ಕುರಿತು ಚುನಾವಣಾ ಆಯೋಗದ ಕ್ರಮದ ವಿರುದ್ಧ ಕೋರ್ಟ್ ಗೆ ಅರ್ಜಿ ಸಲ್ಲಿಸುವುದಾಗಿ ಮಮತಾ ಘೋಷಣೆ ಮಾಡಿದ್ದು, ಫಲಿತಾಂಶ ಘೋಷಣೆಯೇ ಗೊಂದಲದಿಂದ ಕೂಡಿದೆ. ಸಾಕಷ್ಟು ಮತಗಳ ಮತಎಣಿಕೆ ಬಾಕಿ ಇರುವಾಗಲೇ ಆಯೋಗ ಫಲಿತಾಂಶ ಘೋಷಣೆ ಮಾಡಿದ್ದು ಅನುಮಾನ ಮೂಡಿಸುತ್ತಿದೆ. ಹೀಗಾಗಿ ಮರು ಮತ ಎಣಿಕೆ ಕುರಿತು ಕೋರ್ಟ್ ಗೆ ಅರ್ಜಿ ಸಲ್ಲಿಸುತ್ತೇವೆ ಎಂದು ಟಿಎಂಸಿ ಹೇಳಿದೆ.

ಈ ಹಿಂದೆ ಇದೇ ವಿಚಾರವಾಗಿ ಮಾತನಾಡಿದ್ದ ಮಮತಾ ಬ್ಯಾನರ್ಜಿ, ‘ನಾನು ಜನರ ತೀರ್ಪನ್ನು ಸ್ವೀಕರಿಸುತ್ತೇನೆ. ಫಲಿತಾಂಶ ಘೋಷಣೆಯ ನಂತರ ಕೆಲವು ಕಾಣದ ಕೈಗಳ ಕೈವಾಡ ನಡೆದಿವೆ. ನಾನು ಅದೇನು ಎಂದು ಶೀಘ್ರ ಬಹಿರಂಗಪಡಿಸುತ್ತೇನೆ. ಈ ಸಂಬಂಧ ಮರು ಮತಎಣಿಕೆ ಕೋರಿ ನ್ಯಾಯಾಲಯದಲ್ಲಿ ಅರ್ಜಿ ಹಾಕುತ್ತೇವೆ ಎಂದು ಹೇಳಿದ್ದಾರೆ.

Comments are closed.