
ನವದೆಹಲಿ: ದೇಶದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ, ಇಂದು ಪ್ರಧಾನಿ ನರೇಂದ್ರ ಮೋದಿ ಅಧಿಕಾರಿಗಳ ಜೊತೆ ಸಭೆ ನಡೆಸುತ್ತಿದ್ದಾರೆ. ಕೊರೋನಾ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎನ್ನಲಾಗುತ್ತಿದೆ. ಈ ನಡುವೆಯೇ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಪರಿಸ್ಥಿತಿ ಕೈ ಮೀರಿ ಹೋಗಿದೆ. ಹೀಗಾಗಿ ವಾರಾಂತ್ಯಕ್ಕೆ ಮಾತ್ರ ನಿಗದಿಯಾಗಿದ್ದ ಕರ್ಫ್ಯೂವನ್ನು ಒಂದು ವಾರ ಕಾಲ ವಿಸ್ತರಿಸಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಆದೇಶ ಹೊರಡಿಸಿದ್ದಾರೆ.
ಇಂದು ರಾತ್ರಿ 10 ಗಂಟೆಯಿಂದ ಮುಂದಿನ ಸೋಮವಾರ ಬೆಳಗ್ಗೆ 5 ಗಂಟೆವರೆಗೂ ಅಂದರೆ ಒಂದು ವಾರ ಕಾಲ ದೆಹಲಿಯಲ್ಲಿ ಕರ್ಫ್ಯೂ ಜಾರಿಯಲ್ಲಿರುತ್ತದೆ. ಈ ಹೊಸ ಆದೇಶ ಇಂದು ರಾತ್ರಿಯಿಂದಲೇ ಅನ್ವಯವಾಗಲಿದೆ.
ಕೊರೋನಾ ಪ್ರಕರಣಗಳು ಹೆಚ್ಚಾದ ಹಿನ್ನೆಲೆ, ಕಳೆದ ವಾರ ಕೇಜ್ರಿವಾಲ್ ವೀಕೆಂಡ್ ಕರ್ಫ್ಯೂ ಜಾರಿ ಮಾಡಿ ಆದೇಶ ಹೊರಡಿಸಿದ್ದರು. ಜೊತೆಗೆ ಈ ವೀಕೆಂಡ್ ಕರ್ಫ್ಯೂ ದೆಹಲಿಯಲ್ಲಿ ಕೊರೋನಾ ನಿಯಂತ್ರಿಸಲು ಸಹಕಾರಿಯಾಗುತ್ತದೆ. ಈ ಕಠಿಣ ನಿಯಮಗಳು ನಿಮ್ಮ ಸುರಕ್ಷತೆಗಾಗಿ ಎಂದು ರಾಜ್ಯದ ಜನರಿಗೆ ಕೇಜ್ರಿವಾಲ್ ಹೇಳಿದ್ದರು. ನಿಮ್ಮ ಸಹಕಾರವಿದ್ದರೆ ಈ ನಾಲ್ಕನೇ ಕೋವಿಡ್-19 ಅಲೆಯನ್ನು ನಿಯಂತ್ರಿಸಬಹುದಾಗಿದೆ ಎಂದು ಹೇಳಿದ್ದರು.
ದೆಹಲಿಯಲ್ಲಿ ಕೊರೋನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಹೀಗಾಗಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಇಂದು ಬೆಳಗ್ಗೆ ಲೆಫ್ಟಿನೆಂಟ್ ಗವರ್ನರ್ ಅನಿಲ್ ಜೈಜಲ್ ಜೊತೆ ಸಭೆ ನಡೆಸಿದ್ದರು. ಸಭೆ ಬಳಿಕ ದೆಹಲಿಯಾದ್ಯಂತ ಒಂದು ವಾರ ಕಾಲ ಕರ್ಫ್ಯೂ ಜಾರಿ ಮಾಡಿ ಆದೇಶ ಹೊರಡಿಸಲಾಗಿದೆ.
ದೆಹಲಿಯಲ್ಲಿ ಭಾನುವಾರ ಒಂದೇ ದಿನ ಒಟ್ಟು 25,462 ಹೊಸ ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದವು. 161 ಮಂದಿ ಮೃತಪಟ್ಟಿದ್ದರು. ದೆಹಲಿಯಲ್ಲಿ ಪಾಸಿಟಿವಿಟಿ ದರ ಶೇ. 29.74ರಷ್ಟಿದೆ. ಸುಮಾರು 20,259 ಮಂದಿ ಈವರೆಗೆ ಕೊರೋನಾದಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ದೆಹಲಿಯಲ್ಲಿ ಒಟ್ಟು 74,941 ಸಕ್ರಿಯ ಪ್ರಕರಣಗಳಿವೆ. ಈವರೆಗೆ ಒಟ್ಟು 12,121 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ.
ಕಳೆದ 24 ಗಂಟೆಯಲ್ಲಿ ದೇಶದಲ್ಲಿ ಸುಮಾರು 2,73,810 ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ಜೊತೆಗೆ 1,619 ಮಂದಿ ಸಾವನ್ನಪ್ಪಿದ್ದಾರೆ. ದೇಶದಲ್ಲಿ ಒಟ್ಟು 19,29,329 ಸಕ್ರಿಯ ಕೊರೋನಾ ಪ್ರಕರಣಗಳಿವೆ. ಒಟ್ಟು ಕೊರೋನಾ ಸೋಂಕಿತರ ಸಂಖ್ಯೆ 1,50,61,919ಕ್ಕೆ ಏರಿಕೆಯಾಗಿದೆ. ಈವರೆಗೆ 1,29,53,821 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
Comments are closed.