ರಾಷ್ಟ್ರೀಯ

ಬಾಟ್ಲಾ ಹೌಸ್ ಎನ್‌ಕೌಂಟರ್ ಪ್ರಕರಣ; ಉಗ್ರ ಸಂಘಟನೆಯ ಅರಿಜ್ ಖಾನ್‌ಗೆ ಮರಣದಂಡನೆ ಶಿಕ್ಷೆ ವಿಧಿಸಿದ ದೆಹಲಿ ನ್ಯಾಯಾಲಯ

Pinterest LinkedIn Tumblr

ಹೊಸದಿಲ್ಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ 2008ರ ಬಾಟ್ಲಾ ಹೌಸ್ ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ, ಇಂಡಿಯನ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಅರಿಜ್ ಖಾನ್‌ಗೆ ದೆಹಲಿ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿದೆ.

ಬಾಟ್ಲಾ ಎನ್‌ಕೌಂಟರ್ ವೇಳೆ ಇನ್ಸಪೆಕ್ಟರ್ ಮೋಹನ್ ಚಂದ್ ಶರ್ಮಾ ಅವರ ಕೊಲೆ ಹಾಗೂ ಪ್ರಕರಣದ ಇತರ ಅಪರಾಧಗಳಲ್ಲಿ ಭಾಗಿಯಾದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅರಿಜ್ ಖಾನ್‌ಗೆ ಗಲ್ಲುಶಿಕ್ಷೆ ವಿಧಿಸಲಾಗಿದೆ.

ಕಳೆದ 2018ರ ಫೆಬ್ರವರಿಯಲ್ಲಿ ಉತ್ತರಪ್ರದೇಶದ ಆಜಂಗರ್‌ ನಿವಾಸಿಯಾದ ಅರಿಜ್ ಖಾನ್‌ನನ್ನು ದೆಹಲಿ ಪೊಲೀಸರು ಬಂಧಿಸಿದ್ದರು. ಕಳೆದ ವಾರವಷ್ಟೇ ಬಾಟ್ಲಾ ಎನ್‌ಕೌಂಟರ್ ಪ್ರಕರಣದಲ್ಲಿ ಅರಿಜ್ ಖಾನ್ ದೋಷಿ ಎಂದು ತೀರ್ಪು ನೀಡಿದ್ದ ನ್ಯಾಯಾಲಯ, ಇಂದು(ಮಾ.15-ಸೋಮವಾರ) ಆತನಿಗೆ ಮರಣದಂಡನೆ ಶಿಕ್ಷೆ ವಿಧಿಸಿದೆ.

ಅರಿಜ್ ಖಾನ್ ಮೇಲೆ ದೆಹಲಿ, ಗುಜರಾತ್, ರಾಜಸ್ಥಾನ ಹಾಗೂ ಉತ್ತರಪ್ರದೇಶಗಳಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣದಲ್ಲೂ ದೋಷಿ ಎಂದು ತೀರ್ಪು ನೀಡಲಾಗಿದೆ.

ದಕ್ಷಿಣ ದೆಹಲಿಯ ಜಾಮಿಯಾ ನಗರದಲ್ಲಿ 2008ರಲ್ಲಿ ನಡೆದಿದ್ದ ಬಾಟ್ಲಾ ಹೌಸ್ ಎನ್‌ಕೌಂಟರ್ ದೇಶದ ಗಮನ ಸೆಳೆದಿತ್ತು. ಈ ಎನ್‌ಕೌಂಟರ್‌ನಲ್ಲಿ ದೆಹಲಿ ಪೊಲಿಸ್‌ನ ವಿಶೇಷ ವಿಭಾಗದ ಇನ್ಸ್ ಪೆಕ್ಟರ್ ಮೋಹನ್ ಚಂದ್ ಶರ್ಮಾ ಹುತಾತ್ಮರಾಗಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣಾ ನ್ಯಾಯಾಲಯವೊಂದು ಜುಲೈ 2013ರಂದುಮ ಇಂಡಿಯನ್ ಮುಜಾಹಿದ್ದೀನ್ ಉಗ್ರ ಶಹಜಾದ್ ಅಹ್ಮದ್‌ಗೆ ಜೀವಾವಧಿ ಶಿಕ್ಷೆ ವಿಧಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

Comments are closed.