ರಾಷ್ಟ್ರೀಯ

ಪಶ್ಚಿಮ ಬಂಗಾಳ ಚುನಾವಣಾ; ಬಿಜೆಪಿ ಸೇರಿದ ಬಾಲಿವುಡ್‌ ನಟ ಮಿಥುನ್‌ ಚಕ್ರವರ್ತಿ

Pinterest LinkedIn Tumblr

ಕೋಲ್ಕತಾ: ಖ್ಯಾತ ಬಂಗಾಳಿ ಹಾಗೂ ಬಾಲಿವುಡ್‌ ನಟ ಮಿಥುನ್‌ ಚಕ್ರವರ್ತಿ ಅವರು ಭಾನುವಾರ ಬಿಜೆಪಿ ಸೇರಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಕೋಲ್ಕತಾ ಚುನಾವಣಾ ರ‍್ಯಾಲಿಗೂ ಮುನ್ನವೇ ಅವರು ಬಿಜೆಪಿ ಸೇರಿದ್ದು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಲು ಪ್ರಯತ್ನಿಸುತ್ತಿರುವ ಬಿಜೆಪಿಗೆ ಭಾರೀ ಬಲ ಬಂದಂತಾಗಿದೆ.

ಶನಿವಾರ ಮಿಥುನ್‌ ಅವರನ್ನು ಬಂಗಾಳ ಬಿಜೆಪಿ ಉಸ್ತುವಾರಿ ಕೈಲಾಶ್‌ ವಿಜಯ ವರ್ಗೀಯ ಅವರು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಇದರ ಬೆನ್ನಲ್ಲೇ ಅವರು ಬಿಜೆಪಿ ಸೇರುವ ಬಗ್ಗೆ ಮಾತುಕತೆಗಳು ಕೇಳಿ ಬಂದಿದ್ದವು.

ಭಾನುವಾರ ಅವರು ಕಮಲ ಪಕ್ಷಕ್ಕೆ ಸೇರ್ಪಡೆಯಾಗಿದ್ದು, ಕೈಲಾಶ್ ವಿಜಯವರ್ಗೀಯ ಹಾಗೂ ಬಂಗಾಳ ಬಿಜೆಪಿ ಅಧ್ಯಕ್ಷ ದಿಲೀಪ್‌ ಗೋಷ್‌ ಅವರು ಮಿಥುನ್‌ ಅವರಿಗೆ ಪಕ್ಷದ ಧ್ವಜ ನೀಡುವ ಮೂಲಕ ಬಿಜೆಪಿಗೆ ಬರ ಮಾಡಿಕೊಂಡರು.

70 ವರ್ಷದ ಮಿಥುನ್‌ ಅವರಿಗೆ ಬಂಗಾಳದಲ್ಲಿ ಭಾರೀ ಸಂಖ್ಯೆಯ ಅಭಿಮಾನಿಗಳಿದ್ದು, ಅವರು ಬಿಜೆಪಿ ಸೇರಿದ್ದು ಬಿಜೆಪಿಗೆ ಭಾರೀ ಬಲ ಬಂದಂತಾಗಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.

ಈ ಹಿಂದೆ ಟಿಎಂಸಿಯಿಂದ ರಾಜ್ಯಸಭಾ ಸದಸ್ಯರಾಗಿದ್ದ ಅವರ ಹೆಸರು ಶಾರಾದಾ ಚಿಟ್‌ ಫಂಡ್‌ ಹಗರಣದಲ್ಲಿ ಕೇಳಿ ಬಂದಿತ್ತು. ಅಲ್ಲದೇ ಜಾರಿ ನಿರ್ದೇಶನಾಲಯದ ವಿಚಾರಣೆಗೂ ಹಾಜರಾಗಿದ್ದರು. ಇದಾದ ಬಳಿಕ ಅನಾರೋಗ್ಯದ ಕಾರಣ ನೀಡಿ ರಾಜ್ಯಸಭೆಯ ಸದಸ್ಯತ್ವಕ್ಕೆ ರಾಜಿನಾಮೆ ನೀಡಿದ್ದರು.

ಕಳೆದ ಎರಡು ಅವಧಿಯಲ್ಲಿ ಭರ್ಜರಿ ಬಹುಮತದೊಂದಿಗೆ ಬಂಗಾಳದಲ್ಲಿ ಅಧಿಕಾರ ಹಿಡಿದಿದ್ದ ಟಿಎಂಸಿಯನ್ನು ಈ ಬಾರಿ ಸೋಲಿಸಲೇಬೇಕೆಂದು ಬಿಜೆಪಿ ಪಣ ತೊಟ್ಟಿದೆ.

ಹೀಗಾಗಿ ಟಿಎಂಸಿಯ ದೊಡ್ಡ ದೊಡ್ಡ ನಾಯಕರನ್ನೇ ಬಿಜೆಪಿ ಸೆಳೆದುಕೊಂಡಿದೆ. ಇದರ ಜತೆಗೆ ಖ್ಯಾತ ಸಿನಿಮಾ ನಟರನ್ನೂ ಕೂಡ ಬಿಜೆಪಿ ಪಕ್ಷಕ್ಕೆ ಸೇರಿಸಿಕೊಂಡಿದ್ದು, ಈ ಬಾರಿಯ ಚುನಾವಣೆ ಭಾರೀ ಕುತೂಹಲ ಕೆರಳಿಸಿದೆ.

ಮಾರ್ಚ್‌ 27ರಿಂದ ಏಪ್ರಿಲ್ 29ರ ವರಗೆ ಒಟ್ಟು ಎಂಟು ಹಂತಗಳಲ್ಲಿ ಪಶ್ಚಿಮ ಬಂಗಾಳದಲ್ಲಿ ಚುನಾವಣೆ ನಡೆಯಲಿದ್ದು, ಮೇ ಎರಡರಂದು ಫಲಿತಾಂಶ ಹೊರ ಬೀಳಲಿದೆ. ಒಟ್ಟು 294 ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದೆ.

Comments are closed.