ರಾಷ್ಟ್ರೀಯ

ದೇಶದಲ್ಲಿ ಮತ್ತೆ ಹೆಚ್ಚುತ್ತಿದೆ ಕೊರೋನಾ; 18,000ಕ್ಕೂ ಹೆಚ್ಚು ಪ್ರಕರಣಗಳು ಪತ್ತೆ

Pinterest LinkedIn Tumblr

ನವದೆಹಲಿ: ದೇಶದಲ್ಲಿ ದಿನೇ ದಿನೇ ಕೊರೋನಾ ಅಬ್ಬರ ಹೆಚ್ಚುತ್ತಿದ್ದು. ದೇಶದಲ್ಲಿ ಮತ್ತೆ ಕಳೆದ 24 ಗಂಟೆಗಳಲ್ಲಿ 18,000ಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿದೆ.

ಭಾನುವಾರ ಬೆಳಿಗ್ಗೆ 8 ಗಂಟೆಗೆ ಅಂತ್ಯಗೊಂಡ 24 ತಾಸು ಅವಧಿಯಲ್ಲಿ 18,711 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಈ ಮೂಲಕ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,12,10,799ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಈ ಹಿಂದೆ ಜ.29ರಂದು 18,855 ಪ್ರಕರಣ ವರದಿಯಾಗಿದ್ದವು. ಆ ಬಳಿಕ ಪ್ರಕರಣಗಳ ಸಂಖ್ಯೆ 18 ಸಾವಿರ ದಾಟಿರಲಿಲ್ಲ. 36 ದಿನಗಳ ಬಳಿ ನಿನ್ನೆ 18,327 ಹೊಸ ಪ್ರಕರಣಗಳು ಪತ್ತೆಯಾಗಿದ್ದವು. ಇಂದು ಮತ್ತೆ 18,711 ಪ್ರಕರಣಗಳು ಪತ್ತೆಯಾಗಿವೆ.

ಈ ನಡುವೆ ಒಟ್ಟಾರೆ 1,12,10,799 ದಿ ಸೋಂಕಿತರ ಪೈಕಿ ನಿನ್ನೆ ಒಂದೇ ದಿನ 14,392 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದು, ಇದರೊಂದಿಗೆ ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 1,08,68,520ಕ್ಕೆ ಏರಿಕೆಯಾಗಿದೆ. ಪ್ರಸ್ತುತ ದೇಶದಲ್ಲಿ 1,84,523 ಸಕ್ರಿಯ ಪ್ರಕರಣಗಳು ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ತಿಳಿದುಬಂದಿದೆ.

ಇನ್ನು ಭಾರತದಲ್ಲಿ ಒಂದೇ ದಿನ 7,61,834 ಮಂದಿಯನ್ನು ಕೊರೋನಾ ಪರೀಕ್ಷೆಗೊಳಪಡಿಸಲಾಗಿದ್ದು, ಈವರೆಗೂ ದೇಶದಲ್ಲಿ 21,99,40,742 ಮಂದಿಯನ್ನು ಪರೀಕ್ಷೆಗೊಳಪಡಿಸಲಾಗಿದೆ ಎಂದು ಐಸಿಎಂಆರ್ ಮಾಹಿತಿ ನೀಡಿದೆ.

ಭಾರತದಲ್ಲಿ ಜನವರಿ 16 ರಂದು ಸ್ವದೇಶಿ ನಿರ್ಮಿತ ಕೋವಿಶೀಲ್ಟ್ ಮತ್ತು ಕೋವ್ಯಾಕ್ಸಿನ್ ಕೊರೋನಾ ಲಸಿಕೆಗೆ ಪ್ರಧಾನಿ ಮೋದಿಯವರು ಚಾಲನೆ ನೀಡಿದ್ದು, ತಮ್ಮ ಜೀವವನ್ನೇ ಪಣಕ್ಕಿಟ್ಟು ಕೊರೋನಾ ವಿರುದ್ಧ ಹೋರಾಟ ಮಾಡುತ್ತಿರುವ ಕೊರೋನಾ ವಾರಿಯರ್ಸ್’ಗೆ ಲಸಿಕೆಯ ಮೊದಲ ಆದ್ಯತೆಯನ್ನು ನೀಡಲಾಗುತ್ತದೆ.

ಇದರಂತೆ ಲಸಿಕೆ ಅಭಿಯಾನ ಆರಂಭವಾಗಿ ಇಲ್ಲಿಯವರೆಗೂ ಒಟ್ಟಾರೆ 2,09,22,344 ಮಂದಿಗೆ ಲಸಿಕೆಯನ್ನು ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

Comments are closed.