ರಾಷ್ಟ್ರೀಯ

ಬಿಬಿಸಿ ರೇಡಿಯೋ ಶೋನಲ್ಲಿಪ್ರಧಾನಿ ಮೋದಿ ತಾಯಿ ವಿರುದ್ಧ ನಿಂದನೆ ಮಾಡಿದ ವ್ಯಕ್ತಿ; ಬಿಬಿಸಿ ನಿಷೇಧಕ್ಕೆ ಒತ್ತಾಯ

Pinterest LinkedIn Tumblr

ಲಂಡನ್: ಬಿಬಿಸಿ ಏಷ್ಯಾ ನೆಟ್ ವರ್ಕ್ ನಲ್ಲಿ ಇತ್ತೀಚೆಗೆ ‘ಬಿಗ್ ಡಿಬೇಟ್’ ಎಂಬ ರೇಡಿಯೋ ಶೋದಲ್ಲಿ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ತಾಯಿ ಹೀರಾಬೆನ್ ಅವರ ಬಗ್ಗೆ ನಿಂದನಕಾರಿ ಟೀಕೆ ಮಾಡಿದ ಪ್ರಕರಣ ನಡೆದಿದ್ದು ವ್ಯಾಪಕವಾಗಿ ಸುದ್ದಿಯಾಗಿದೆ.

ರೇಡಿಯೋ ಶೋದಲ್ಲಿ ಆಡಿರುವ ಮಾತುಗಳ ಆಡಿಯೊ ಕ್ಲಿಪ್ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ. ಹೀಗಾಗಿ ಅನೇಕ ಬಿಜೆಪಿ ನಾಯಕರು ಮತ್ತು ಟ್ವಿಟ್ಟರ್ ಬಳಕೆದಾರರು ತಮ್ಮ ಅಸಮಾಧಾನವನ್ನು ಹೊರಹಾಕುತ್ತಿದ್ದಾರೆ.

ಏನಿದು ವಿವಾದ: ಬಿಬಿಸಿ ಏಷ್ಯಾ ನೆಟ್ ವರ್ಕ್ ನ ಬಿಗ್ ಡಿಬೇಟ್ ರೇಡಿಯೋ ಶೋದಲ್ಲಿ ಇಂಗ್ಲೆಂಡ್ ನಲ್ಲಿರುವ ಭಾರತೀಯರು ಮತ್ತು ಸಿಖ್ ಧರ್ಮೀಯರ ವಿರುದ್ಧ ಜನಾಂಗೀಯ ನಿಂದನೆ ಬಗ್ಗೆ ಚರ್ಚೆ ನಡೆಯುತ್ತಿತ್ತು. ಈ ಮಧ್ಯೆ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಬಗ್ಗೆ ಸಹ ಚರ್ಚೆ ಮಾತುಕತೆಗಳು ಶೋದಲ್ಲಿ ಸಾಗಿದವು.

ಈ ಸಂದರ್ಭದಲ್ಲಿ ಶೋ ಮಧ್ಯೆ ಕರೆ ಮಾಡಿದ ಸೀಮನ್ ಎಂದು ತನ್ನನ್ನು ಸಂಬೋಧಿಸಿಕೊಂಡ ವ್ಯಕ್ತಿ ಮಾತನಾಡುತ್ತಾ ಪ್ರಧಾನಿ ಮೋದಿಯವರ ತಾಯಿ ಹೀರಾಬೆನ್ ಮೋದಿ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡಿದರು. ತಕ್ಷಣವೇ ಶೋ ನಡೆಸುತ್ತಿದ್ದ ವ್ಯಕ್ತಿ ಚರ್ಚೆಯ ವಿಷಯವನ್ನು ಬದಲಾಯಿಸಿ ಮೂಲ ವಿಷಯಕ್ಕೆ ಬಂದರು. ಆದರೆ ಅಷ್ಟರಲ್ಲಾಗಲೇ ಪ್ರಧಾನಿ ಮೋದಿಯವರ ತಾಯಿ ಬಗ್ಗೆ ನೀಡಿದ್ದ ಹೇಳಿಕೆ ಸಾವಿರಾರು ಕೇಳುಗರಿಗೆ ತಲುಪಿಯಾಗಿತ್ತು.

ಶೋದಲ್ಲಿ ಸೀಮನ್ ಎಂಬ ವ್ಯಕ್ತಿ ಮಾತನಾಡಿರುವ ಆಡಿಯೋ ಇನ್ನೂ ಲಭ್ಯವಿದ್ದು ಇದು ಭಾರತೀಯರನ್ನು ಕೆರಳಿಸಿದೆ. #BoycottBBC ಎಂಬ ಹ್ಯಾಶ್ ಟ್ಯಾಗ್ ನೊಂದಿಗೆ ಭಾರತದಲ್ಲಿ ಟ್ರೆಂಡ್ ಆಗಿದ್ದು 80 ಸಾವಿರಕ್ಕೂ ಅಧಿಕ ಟ್ವೀಟ್ ಗಳು ಬಂದಿವೆ. #BanBBC ಎಂಬ ಹ್ಯಾಶ್ ಟ್ಯಾಗ್ ಕೂಡ ಭಾರತದಲ್ಲಿ ಟ್ರೆಂಡಿಯಾಗಿದೆ.

ಬಿಬಿಸಿ ಮಾಧ್ಯಮ ಸಂಸ್ಥೆ ಭಾರತ ವಿರೋಧಿಯಾಗಿದ್ದು ಅದನ್ನು ನಿಷೇಧಿಸಬೇಕು ಎಂದು ಹಲವರು ಟ್ವಿಟ್ಟರ್ ನಲ್ಲಿ ಒತ್ತಾಯಿಸಿದ್ದಾರೆ.

Comments are closed.