ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು ಕೊರೋನಾ ಲಸಿಕೆ ಪಡೆಯುವ ಮೂಲಕ ದೇಶವಾಸಿಗಳಿಗೆ ಮಾದರಿಯಾಗಿದ್ದಾರೆ. ಹಿರಿಯ ನಾಗರಿಕರ ವಿಭಾಗದಲ್ಲಿ ಲಸಿಕೆ ಪಡೆದ ಮೋದಿ, ದೇಶದ ಜನರಿಗೆ ಯಾವುದೇ ಆತಂಕವಿಲ್ಲದೇ ಲಸಿಕೆ ಹಾಕಿಸಿಕೊಳ್ಳಬೇಕು. ಭಾರತ ಕೊರೋನಾ ಮುಕ್ತವಾಗಬೇಕೆಂದು ಹೇಳಿದ್ದಾರೆ. ರಾಷ್ಟ್ರ ರಾಜಧಾನಿ ನವದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಪ್ರಧಾನಿ ಮೋದಿ ಭಾರತ್ ಬಯೋಟೆಕ್ನ ಕೋವ್ಯಾಕ್ಸಿನ್ ಪಡೆದಿದ್ದಾರೆ. ಕೊರೋನಾ ಲಸಿಕೆ ಪಡೆಯುವ ಮೂಲಕ ವಿಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ.
ಇಂದು ಪ್ರಧಾನಿ ಮೋದಿಯವರಿಗೆ ಮೊದಲ ಕೊರೋನಾ ವ್ಯಾಕ್ಸಿನ್ ನೀಡಲಾಗಿದೆ. 28 ದಿನಗಳ ಬಳಿಕ ಎರಡನೇ ಡೋಸ್ ನೀಡಲಾಗುತ್ತದೆ. ಲಸಿಕೆ ಹಾಕಿಸಿಕೊಳ್ಳುವ ವೇಳೆ ಪ್ರಧಾನಿ ಮೋದಿ ನರ್ಸ್ ಜೊತೆ ಒಂದು ಚುಟುಕು ಸಂಭಾಷಣೆ ನಡೆಸಿದ್ದಾರೆ.
ಏಮ್ಸ್ ಆಸ್ಪತ್ರೆಯ ನರ್ಸ್ ಪಿ.ನಿವೇದಾ ಪ್ರಧಾನಿ ಮೋದಿಗೆ ವ್ಯಾಕ್ಸಿನ್ ಹಾಕಿದ ದಾದಿ. ವ್ಯಾಕ್ಸಿನ್ ಹಾಕುವಾಗ, ನೀವು ಎಲ್ಲಿಯವರು? ಎಂದು ಪ್ರಧಾನಿ ಮೋದಿ ನರ್ಸ್ಗೆ ಪ್ರಶ್ನಿಸಿದ್ದಾರೆ. ಜೊತೆಗೆ ನೀವು ಲಸಿಕೆ ಹಾಕಿದ್ದು ನನಗೆ ನೋವೇ ಆಗಲಿಲ್ಲ ಎಂದು ಚಟಾಕಿ ಹಾರಿಸಿದ್ದಾರೆ.
ಈ ಅನುಭವವನ್ನು ಹಂಚಿಕೊಂಡ ನರ್ಸ್ ಪಿ.ನಿವೇದಾ ಸಂತಸ ವ್ಯಕ್ತಪಡಿಸಿದ್ದಾರೆ. ನನ್ನ ಊರು? ಎಷ್ಟು ವರ್ಷದ ಅನುಭವ? ಎಂಬೆಲ್ಲಾ ಪ್ರಶ್ನೆಗಳನ್ನು ಕೇಳಿದರು. ವ್ಯಾಕ್ಸಿನ್ ಹಾಕುವ ವೇಳೆ ಒಂದು ಪುಟ್ಟ ಸಂಭಾಷಣೆ ನಡೆಯಿತು. ಮೋದಿವರಿಗೆ ಲಸಿಕೆ ಹಾಕಿ, ಅವರ ಜೊತೆ ಮಾತನಾಡಿದ್ದು ಖುಷಿಯಾಯಿತು. ಇಂದು ಮೊದಲ ಕೊರೋನಾ ವ್ಯಾಕ್ಸಿನ್ ಹಾಕಲಾಗಿದ್ದು, 28 ದಿನಗಳ ಬಳಿಕ 2ನೇ ಡೋಸ್ ನೀಡಲಾಗುವುದು ಎಂದರು.
ವ್ಯಾಕ್ಸಿನ್ ಪಡೆದ ಪ್ರಧಾನಿ ಮೋದಿ, ಟ್ವಿಟರ್ನಲ್ಲಿ ಫೋಟೋ ಹಂಚಿಕೊಂಡಿದ್ದಾರೆ. ಇಂದು ನಾನು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಕೊರೋನಾ ಮೊದಲ ಲಸಿಕೆ ಪಡೆದೆ. ವಿಜ್ಞಾನಿಗಳು ಮತ್ತು ವೈದ್ಯರು ತ್ವರಿತವಾಗಿ ಕೋವಿಡ್-19 ವ್ಯಾಕ್ಸಿನ್ ಕಂಡುಹಿಡಿದಿದ್ದಾರೆ. ದೇಶವಾಸಿಗಳು ಯಾವುದೇ ಆತಂಕವಿಲ್ಲದೇ ಕೊರೋನಾ ಲಸಿಕೆ ಹಾಕಿಸಿಕೊಳ್ಳಬೇಕು. ಕೊರೊನಾ ಮುಕ್ತ ಭಾರತವನ್ನು ನಿರ್ಮಾಣ ಮಾಡಬೇಕು ಎಂದು ಕರೆ ನೀಡಿದ್ದಾರೆ.
ಮೋದಿಗೆ ಲಸಿಕೆ ಹಾಕಿದ ನರ್ಸ್ ಪುದುಚೇರಿ ಮೂಲದವರಾಗಿದ್ದು, ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನರ್ಸ್ ನಿವೇದಾ ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೊರೋನಾ ವ್ಯಾಕ್ಸಿನ್ ಪಡೆದ ಮೋದಿಯವರ ನಡೆಗೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗುತ್ತಿದೆ.