ರಾಷ್ಟ್ರೀಯ

ಉತ್ತರ ಪ್ರದೇಶದಲ್ಲಿ ಇಂಟರ್ನೆಟ್ ನಲ್ಲಿ ಅಶ್ಲೀಲ ಚಿತ್ರ ವೀಕ್ಷಿಸುವವರ ಮೇಲೆ ಕಣ್ಣಿಡಲು ಕಂಪನಿ ನೇಮಿಸಿಕೊಂಡ ಪೊಲೀಸರು!

Pinterest LinkedIn Tumblr

ಲಖನೌ: ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಇಂಟರ್ನೆಟ್ ನಲ್ಲಿ ಅಶ್ಲೀಲ ಚಿತ್ರ ವೀಕ್ಷಿಸುವವರ ಮೇಲೆ ಕಣ್ಣಿಡಲು ಮತ್ತು ಅವರ ಪತ್ತೆಗಾಗಿ ಪೊಲೀಸರು ಕಂಪನಿಯೊಂದನ್ನು ನೇಮಿಸಿಕೊಂಡಿದ್ದಾರೆ.

ಉತ್ತರ ಪ್ರದೇಶ ರಾಜ್ಯದಲ್ಲಿ ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಪೊಲೀಸರು ಇಂಟರ್ನೆಟ್ ಸರ್ಚಿಂಗ್ ಮೇಲೆ ನಿಗಾ ಇರಿಸಿದ್ದು, ಇಂಟರ್ನೆಟ್ ನಲ್ಲಿ ಅಶ್ಲೀಲ ಚಿತ್ರಗಳನ್ನು ವೀಕ್ಷಿಸುವವರ ಮೇಲೆ ತೀವ್ರ ನಿಗಾ ಇರಿಸಿದ್ದಾರೆ. ಇದಕ್ಕಾಗಿಯೇ ಕಂಪನಿಯೊಂದನ್ನು ನೇಮಕ ಮಾಡಿಕೊಂಡಿರುವ ಉತ್ತರ ಪ್ರದೇಶ ಪೊಲೀಸರು, ಇಂಟರ್ನೆಟ್ ನಲ್ಲಿ ಅಶ್ಲೀಲ ಚಿತ್ರ ವೀಕ್ಷಿಸುವವರ ಡಾಟಾ ಸಂಗ್ರಹಿಸಲಿದ್ದಾರೆ. ಈ ದತ್ತಾಂಶಗಳ ಮಾಹಿತಿಯನ್ನು ಉತ್ತರ ಪ್ರದೇಶ ಮಹಿಳಾ ಪವರ್ ಲೈನ್ 1090 ಗೆ ಮಾಹಿತಿ ನೀಡಲಿದ್ದು, ಈ ಮಾಹಿತಿ ಸಂಗ್ರಹಿಸುವ ಪವರ್ ಲೈನ್ ಮುಂದಿನ ಕ್ರಮ ಕೈಗೊಳ್ಳಲ್ಲಿದ್ದಾರೆ. ಮಾಹಿತಿ ಪಡೆದ ಪೊಲೀಸರು ಕೂಡಲೇ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಲಿದ್ದಾರೆ. ಇದರಿಂದ ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ ನೆರವಾಗಲಿದೆ.

ಈ ನೂತನ ಪ್ರಯೋಗವನ್ನು ಈಗಾಗಲೇ ಉತ್ತರ ಪ್ರದೇಶದಲ್ಲಿ 6 ಜಿಲ್ಲೆಗಳಲ್ಲಿ ನಡೆಸಲಾಗಿದ್ದು, ಇದಕ್ಕೆ ಸಾರ್ವಜನಿಕರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಹಿನ್ನಲೆಯಲ್ಲಿ ಈ ವ್ಯವಸ್ಥೆಯನ್ನು ಇದೀಗ ಎಲ್ಲ ಜಿಲ್ಲೆಗಳಲ್ಲೂ ವಿಸ್ತರಿಸಲು ಕ್ರಮಕೈಗೊಳ್ಳಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಉತ್ತರ ಪ್ರದೇಶ ಪೊಲೀಸ್ ಹೆಚ್ಚುವರಿ ನಿರ್ದೇಶಕ ನೀರಾ ರಾವತ್ ಮಾತನಾಡಿ, ‘ಹೆಚ್ಚುತ್ತಿರುವ ಅಂತರ್ಜಾಲದ ಬಳಕೆಯನ್ನು ಗಮನದಲ್ಲಿಟ್ಟುಕೊಂಡು, ಪವರ್‌ಲೈನ್ 1090 ಅನ್ನು ಜಾರಿಗೆ ತರಲಾಗಿದೆ. ಇದರಿಂದ ಮಹಿಳೆಯರ ಮೇಲಿನ ಅಪರಾಧಗಳನ್ನು ತಡೆಗಟ್ಟಲು ನೆರವಾಗಲಿದೆ. ಕಂಪನಿಯಿಂದ ಸಂಗ್ರಹಿಸಲಾಗುವ ಡೇಟಾದ ಮೂಲಕ ಅಂತರ್ಜಾಲದಲ್ಲಿ ಏನು ಹುಡುಕಲಾಗುತ್ತಿದೆ ಎಂಬುದರ ಮೇಲೆ ನಿಗಾ ಇಡಲು ನೆರವಾಗುತ್ತದೆ. ಈ ಕಂಪನಿಯ ಕೆಲಸ ಮೂಲತಃ, ಅಂತರ್ಜಾಲದ ವಿಶ್ಲೇಷಣೆಯನ್ನು ಅಧ್ಯಯನ ಮಾಡುವುದು. ಒಬ್ಬ ವ್ಯಕ್ತಿಯು ಅಶ್ಲೀಲ ಚಿತ್ರಗಳನ್ನು ನೋಡಿದರೆ, ವಿಶ್ಲೇಷಣಾ ತಂಡವು ಮಾಹಿತಿಯನ್ನು ಪಡೆಯುತ್ತದೆ. ಅಲ್ಲದೆ ಅಶ್ಲೀಲ ಚಿತ್ರಗಳನ್ನು ಹುಡುಕುವವರಿಗೆ ಎಚ್ಚರಿಕೆಯ ಸಂದೇಶವನ್ನು ನೀಡಲಾಗುತ್ತದೆ ಮತ್ತು ಈ ಮಾಹಿತಿಯನ್ನು ಪೊಲೀಸರೊಂದಿಗೆ ಹಂಚಿಕೊಳ್ಳಲಾಗುತ್ತದೆ. ಒಬ್ಬ ವ್ಯಕ್ತಿಯು ಅಶ್ಲೀಲತೆಯ ಕುರಿತು ಹುಡುಕುತ್ತಿದ್ದರೆ 1090 ತಂಡಕ್ಕೆ ಮಾಹಿತಿ ರವಾನೆಯಾಗುತ್ತದೆ. ಮಾಹಿತಿ ಲಭಿಸಿದ ಕೂಡಲೇ ತಂಡ ಘಟನಾ ಸ್ಥಳಕ್ಕೆ ತಲುಪಿ ಪರಿಶೀಲನೆ ನಡೆಸುತ್ತದೆ. ಇದರಿಂದ ಸಂಭಾವ್ಯ ಅಪರಾಧವನ್ನು ತಡೆಗಟ್ಟಬಹುದು ಎಂದು ಹೇಳಿದ್ದಾರೆ.

11.6 ಕೋಟಿ ಇಂಟರ್ನೆಟ್ ಬಳಕೆದಾರರು
ಉತ್ತರ ಪ್ರದೇಶ ರಾಜ್ಯದಲ್ಲಿ ಪ್ರಸ್ತುತ ಸುಮಾರು 11.6 ಮಿಲಿಯನ್ ಇಂಟರ್ನೆಟ್ ಬಳಕೆದಾರರಿದ್ದಾರೆ. ಎಲ್ಲರೂ ಮುಖ್ಯವಾಗಿ 1090 ರ ಗುರಿಯಲ್ಲಿರಲಿದ್ದಾರೆ. ಮತ್ತೊಂದೆಡೆ, ಮಹಿಳಾ ಸುರಕ್ಷತೆಗಾಗಿ (Crime Against Women) ಸಿಎಂ ಯೋಗಿ ಆದಿತ್ಯನಾಥ್ ಅವರು ಪ್ರಾರಂಭಿಸಿದ ಮಿಷನ್ ಶಕ್ತಿ ಯೋಜನೆ ವುಮೆನ್ ಪಾವರ್ ಲೈನ್ (1090)ಅನ್ನು ಹೆಚ್ಚು ಶಕ್ತಿಯುತವಾಗಿಸುತ್ತದೆ. ಇದಕ್ಕಾಗಿ 1090 ತಂಡ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗಾಗಿ ಚಕ್ರವ್ಯೂಹವನ್ನು ಸಿದ್ಧಪಡಿಸಿದೆ. ಇದು ಅಪರಾಧಿಗಳನ್ನು ಸುತ್ತುವರೆದು ಅವರನ್ನು ಬಂಧಿಸಲಿದೆ ಎನ್ನಲಾಗಿದೆ.

Comments are closed.