ರಾಷ್ಟ್ರೀಯ

ಭೀಕರ ಹಿಮನದಿ ಸ್ಫೋಟ; ಕಣ್ಮರೆಯಾದವರ ಶೋಧ ಕಾರ್ಯಾಚರಣೆ ತೀವ್ರ:14 ಮಂದಿಯ ಮೃತದೇಹ ಪತ್ತೆ-15 ಮಂದಿಯ ರಕ್ಷಣೆ

Pinterest LinkedIn Tumblr

ಡೆಹ್ರಾಡೂನ್‌: ಉತ್ತರಾಖಂಡದಲ್ಲಿ ಭಾನುವಾರ ಸಂಭವಿಸಿದ ಭೀಕರ ಹಿಮನದಿ ಸ್ಫೋಟದ ಬಳಿಕ ಕಣ್ಮರೆಯಾದವರ ಶೋಧ ಕಾರ್ಯಾಚರಣೆ ತೀವ್ರಗೊಂಡಿದ್ದು, ಈ ವರೆಗೂ ಅವಶೇಷಗಳಡಿಯಲ್ಲಿ ಸಿಲುಕಿದ್ದ 15 ಮಂದಿಯನ್ನು ರಕ್ಷಣೆ ಮಾಡಲಾಗಿದೆ. ಅಂತೆಯೇ 14 ಮಂದಿಯ ಮೃತದೇಹ ಪತ್ತೆಯಾಗಿದೆ.

ಈ ಬಗ್ಗೆ ಚಮೋಲಿ ಪೊಲೀಸರು ಮಾಹಿತಿ ನೀಡಿದ್ದು, ಕರ್ಣ ಪ್ರಯಾಗ್ ಮಾರ್ಗದಿಂದ 7 ಹಾಗೂ ತಪೋವನ ಪ್ರದೇಶದಿಂದ 3 ಮೃತದೇಹಗಳನ್ನು ಹೊರತೆಗೆಯಲಾಗಿದೆ. ತಪೋವನದ ಸುರಂಗವೊಂದರಿಂದ 12 ಮಂದಿಯನ್ನು ರಕ್ಷಿಸಲಾಗಿದೆ. ಆ ಮೂಲಕ ಒಟ್ಟಾರೆ ಒಟ್ಟು 30 ಮಂದಿಯನ್ನು ರಕ್ಷಣೆ ಮಾಡಲಾಗಿದೆ ಎಂದು ಉತ್ತರಾಖಂಡ ಡಿಜಿಪಿ ಅಶೋಕ್ ಕುಮಾರ್ ತಿಳಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಅವರು, ‘ಭೀತರಾಗುವ ಅಗತ್ಯವಿಲ್ಲ. ಹಿಮನದಿ ಸ್ಫೋಟ ನಿನ್ನೆ (ಭಾನುವಾರ) ಸಂಭವಿಸಿದೆ. ರೈನಿ ವಿದ್ಯುತ್ ಯೋಜನೆ ಪ್ರದೇಶದಲ್ಲಿನ ಪ್ರವಾಹ, ಬಂಡೆಗಳು ಮತ್ತು ಭಗ್ನಾವಶೇಷಗಳು ತಪೋವನ ಪ್ರದೇಶದಲ್ಲಿ ಹಾನಿಗೆ ಕಾರಣವಾಗಿವೆ. ವಿಪತ್ತು ನಿರ್ವಹಣಾ ತಂಡಗಳನ್ನು ಒಳಗೊಂಡ ಎಂಐ–17 ಹಾಗೂ ಎಎಲ್‌ಎಚ್‌ ಹೆಲಿಕಾಪ್ಟರ್‌ಗಳನ್ನು ಡೆಹ್ರಾಡೂನ್‌ನಿಂದ ಜೋಶಿಮಠದತ್ತ ಕಳುಹಿಸಿಕೊಡಲಾಗಿದೆ. ವೈಮಾನಿಕ ರಕ್ಷಣಾ, ಪರಿಹಾರ ಕಾರ್ಯಾಚರಣೆ ಪ್ರಗತಿಯಲ್ಲಿದೆ ಎಂದು ಹೇಳಿದ್ದಾರೆ.

ಐಟಿಬಿಪಿಯಿಂದ 30 ಮಂದಿಯ ರಕ್ಷಣೆ
ಚಮೋಲಿ ಜಿಲ್ಲೆಯ ತಪೋವನ್ ಅಣೆಕಟ್ಟು ಬಳಿ ಸುರಂಗದಲ್ಲಿ ಸಿಲುಕಿದ್ದ ಕನಿಷ್ಠ 30 ಜನರನ್ನು ರಕ್ಷಿಸುವ ಕಾರ್ಯಾಚರಣೆ ನಡೆಯುತ್ತಿದ್ದು, ಈಗಾಗಲೇ 12 ಜನರನ್ನು ಮತ್ತೊಂದು ಸುರಂಗದಿಂದ ರಕ್ಷಿಸಲಾಗಿದೆ ಎಂದು ಇಂಡೋ-ಟಿಬೆಟಿಯನ್ ಗಡಿ ಪೊಲೀಸ್ (ಐಟಿಬಿಪಿ) ವಕ್ತಾರ ವಿವೇಕ್ ಪಾಂಡೆ ಸೋಮವಾರ ತಿಳಿಸಿದ್ದಾರೆ.

ಅಂತೆಯೇ ನಾವು ಎರಡನೇ ಸುರಂಗದಲ್ಲಿ ಶೋಧ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದೇವೆ. ಸುಮಾರು 30 ಜನರು ಅಲ್ಲಿ ಸಿಲುಕಿದ್ದಾರೆ ಎಂಬ ಮಾಹಿತಿ ನಮ್ಮಲ್ಲಿದೆ. ಸುರಂಗವನ್ನು ತೆರವುಗೊಳಿಸಲು ಸುಮಾರು 300 ಐಟಿಬಿಪಿ ಜವಾನರನ್ನು ನಿಯೋಜಿಸಲಾಗಿದೆ. ಘಟನೆಯಲ್ಲಿ ಸುಮಾರು 170 ಜನರು ಕಾಣೆಯಾಗಿದ್ದಾರೆ. ಐಟಿಬಿಪಿ ನಿನ್ನೆ ಸುರಂಗದಿಂದ 12 ಜನರನ್ನು ರಕ್ಷಿಸಿದೆ. ವಿವಿಧ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಅಗತ್ಯವಿದ್ದರೆ ಹೆಚ್ಚಿನ ತಂಡಗಳನ್ನು ಅಲ್ಲಿಗೆ ಕಳುಹಿಸಲಾಗುವುದು, ಮೊದಲು ಜನರನ್ನು ಸುರಂಗದಿಂದ ರಕ್ಷಿಸುವತ್ತ ಗಮನ ಹರಿಸುತ್ತಿದ್ದೇವೆ ಎಂದು ಹೇಳಿದ್ದಾರೆ.

ಅಂತೆಯೇ ಸುರಂಗದಲ್ಲಿ ಸಿಲುಕಿರುವ ಜನರಿಗೆ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಲು, ಮಂದಕಿನಿ ನದಿಯ ಮಟ್ಟ ಕಡಿಮೆಯಾಗಲು ಪಡೆ ಕಾಯಬೇಕಾಯಿತು. ಐಟಿಬಿಪಿ, ಭಾರತೀಯ ಸೇನೆ, ಎಸ್‌ಡಿಆರ್‌ಎಫ್ ಮತ್ತು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (ಎನ್‌ಡಿಆರ್‌ಎಫ್) ಪಡೆಗಳು ಪೀಡಿತ ಪ್ರದೇಶಗಳಲ್ಲಿ ಕಾರ್ಯಚರಣೆಯಲ್ಲಿ ತೊಡಗಿವೆ. ಅಂತೆಯೇ ಕಾರ್ಯಾಚರಣೆಯಲ್ಲಿ ಭಾರತೀಯ ವಾಯುಸೇನೆಯ ಐದು ಹೆಲಿಕಾಪ್ಟರ್ ಗಳನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Comments are closed.