ರಾಷ್ಟ್ರೀಯ

ಕೆಂಪುಕೋಟೆ ಹಿಂಸಾಚಾರದ ವೇಳೆ ತ್ರಿವರ್ಣ ಧ್ವಜಕ್ಕೆ ಅಪಮಾನಿಸಿದ ದೀಪ್ ಸಿಧುನನ್ನು ಇನ್ನೂ ಏಕೆ ಬಂಧಿಸಿಲ್ಲ: ರಾವತ್

Pinterest LinkedIn Tumblr

ನವದೆಹಲಿ: ಸಮಾಜ ವಿದ್ರೋಹಿ ಶಕ್ತಿಗಳನ್ನು ಬಳಸಿಕೊಂಡು ರೈತರ ಪ್ರತಿಭಟನೆ ಹಾದಿ ತಪ್ಪಿಸಲಾಗಿದ್ದು, ಆ ಭರದಲ್ಲಿ ದೇಶದ ಪವಿತ್ರ ತ್ರಿವರ್ಣ ಧ್ವಜಕ್ಕೆ ಅಪಮಾನ ಮಾಡಲಾಗಿದೆ ಎಂದು ಶಿವಸೇನೆ ಸಂಸದ ಸಂಜಯ್ ರಾವತ್ ಹೇಳಿದ್ದಾರೆ.

ಸಂಸತ್ ನಲ್ಲಿ ಈ ಕುರಿತಂತೆ ಕೇಂದ್ರ ಸರ್ಕಾರವನ್ನು ಪ್ರಶ್ನೆ ಮಾಡಿದ ಸಂಜಯ್ ರಾವತ್, ಸರ್ಕಾರದ ವಿರುದ್ಧ ಯಾರೇ ಮಾತನಾಡಿದರೂ ಅವರನ್ನು ದೇಶ ವಿದ್ರೋಹಿಗಳಂತೆ ಬಿಂಬಿಸಲಾಗುತ್ತಿದೆ. ರಾಜಕೀಯ ಮುಖಂಡರು, ಹೋರಾಟಗಾರರು, ಸಂಸದರು, ಜನಪ್ರತಿನಿಧಿಗಳು, ಪತ್ರಕರ್ತರು ಎಲ್ಲರನ್ನೂ ಸರ್ಕಾರ ದೇಶ ವಿದ್ರೋಹಿಗಳಂತೆ ಬಿಂಬಿಸುತ್ತಿದೆ.

ಶಾಂತಿಯುತವಾಗಿ ನಡೆಯುತ್ತಿದ್ದ ರೈತರ ಪ್ರತಿಭಟನೆಯನ್ನು ಸಮಾಜ ವಿದ್ರೋಹಿ ಶಕ್ತಿಗಳನ್ನು ಬಳಸಿ ಕಲುಷಿತಗೊಳಿಸಲಾಗಿದೆ. ಇಡೀ ಮುಷ್ಕರದ ಹಾದಿಯನ್ನೇ ತಪ್ಪಿಸಿ ರೈತರನ್ನೂ ಕೂಡ ದೇಶ ವಿದ್ರೋಹಿಗಳಂತೆ ಬಿಂಬಿಸಲಾಗುತ್ತಿದೆ. ಕೆಂಪುಕೋಟೆಗೆ ನುಗ್ಗಿದ ದುಷ್ಕರ್ಮಿಗಳು ಪವಿತ್ರ ರಾಷ್ಟ್ರ ಧ್ವಜಕ್ಕೆ ಅಪಮಾನ ಮಾಡಿದ್ದಾರೆ. ಇಡೀ ದೇಶ ಘಟನೆಯಿಂದ ದಿಗ್ಭಾಂತಗೊಂಡಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಗೌರವ ಹಾಳಾಗಿದೆ. ಹೀಗಿದ್ದೂ ಸರ್ಕಾರ ಮಾತ್ರ ತಪ್ಪಿತಸ್ಥರನ್ನು ಬಂಧಿಸಿಲ್ಲ. ಕೇವಲ 200ಕ್ಕೂ ಅಧಿಕ ರೈತರನ್ನು ಮಾತ್ರ ಬಂಧಿಸಿ ದೇಶದ್ರೋಹ ಪ್ರಕರಣ ಜಡಿದು ತಿಹಾರ್ ಜೈಲಿಗೆ ಹಾಕಿದೆ.

ಇಷ್ಟಕ್ಕೂ ಯಾರೂ ಈ ದೀಪ್ ಸಿಧು..? ಎಲ್ಲಿದ್ದಾನೆ ಅವನು..? ಆತನನ್ನು ಇನ್ನೂ ಏಕೆ ಬಂಧಿಸಿಲ್ಲ..ಕೆಂಪುಕೋಟೆ ಹಿಂಸಾಚಾರದ ಹಿಂದಿರುವ ಈತನನ್ನು ಇನ್ನೂ ಏಕೆ ಬಂಧಿಸಿಲ್ಲ..ತ್ರಿವರ್ಣ ಧ್ವಜಕ್ಕೆ ಅಪಮಾನವಾದ ಕುರಿತು ದುಃಖ ವ್ಯಕ್ತಪಡಿಸಿರುವ ಪ್ರಧಾನಿ ಮೋದಿ ಅಪಮಾನ ಮಾಡಿದ ಈತನನ್ನು ಬಂಧಿಸಲು ಇನ್ನೂ ಏಕೆ ಕ್ರಮ ಕೈಗೊಂಡಿಲ್ಲ ಎಂದು ರಾವತ್ ಪ್ರಶ್ವಿಸಿದರು.

ಇದೇ ವೇಳೆ ಪತ್ರಕರ್ತ ಅರ್ನಾಬ್ ಗೋಸ್ವಾಮಿ ವಿರುದ್ಧವೂ ಕಿಡಿಕಾರಿದ ರಾವತ್, ಅಫೀಶಿಯಲ್ ಸೀಕ್ರೆಟ್ ಆಕ್ಟ್ ನ ನಿಮಯ ಮುರಿದು ಸರ್ಕಾರ ಗೌಪ್ಯ ಮಾಹಿತಿಗಳ ಬಹಿರಂಗ ಮಾಡಿದ್ದ ಅರ್ನಾಬ್ ಗೋಸ್ವಾಮಿ ಪರವಾಗಿ ಕೇಂದ್ರ ಸರ್ಕಾರ ನಿಂತಿದೆ. ಅರ್ನಾಬ್ ತನ್ನ ವಾಟ್ಸಪ್ ನಲ್ಲಿ ದೇಶದ ಗೌಪ್ಯ ಮಾಹಿತಿಗಳನ್ನು ಹಂಚಿಕೊಂಡಿದ್ದ..ಸರ್ಜಿಕಲ್ ಸ್ಟ್ಕೈಕ್ ಬಗ್ಗೆ ಮೊದಲೇ ಮಾಹಿತಿ ನೀಡಿದ್ದ. ಇಂತಹ ವ್ಯಕ್ತಿಯ ರಕ್ಷಣೆಗೆ ನಿಂತಿರುವ ಕೇಂದ್ರ ಸರ್ಕಾರಕ್ಕೆ ನಾಚಿಕೆಯಾಗಬೇಕು.. ಈತನ ವಿರುದ್ಧ ಏಕೆ ದೇಶದ್ರೋಹ ಪ್ರಕರಣ ಹೇರಿಲ್ಲ ಎಂದು ರಾವತ್ ಕಿಡಿಕಾರಿದ್ದಾರೆ.

Comments are closed.