ರಾಷ್ಟ್ರೀಯ

ಭಾರತೀಯ ಷೇರು ಮಾರುಕಟ್ಟೆಯಲ್ಲಿ ಹೊಸ ದಾಖಲೆ: 50 ಸಾವಿರ ಗಡಿ ದಾಟಿಯೇ ಬಿಟ್ಟಿತು ಷೇರು ಮಾರುಕಟ್ಟೆ ಸೂಚ್ಯಂಕ..!

Pinterest LinkedIn Tumblr

ಬೆಂಗಳೂರು: ಕೊವಿಡ್ ಹೊಡೆತದ ನಡುವೆಯೂ ಷೇರುಪೇಟೆ ಹೊಸ ಮೈಲುಗಲ್ಲು ದಾಟಿದ್ದು, ಭಾರತೀಯ ಷೇರು ಮಾರುಕಟ್ಟೆಯಲ್ಲಿ ಭಾರಿ ದಾಖಲೆ ಕಂಡು ಬಂದಿದೆ. ಷೇರುಪೇಟೆ ಸೂಚ್ಯಂಕ 50 ಸಾವಿರದ ಗಡಿ ದಾಟಿದೆ.

ಇಂದು ಬೆಳಗ್ಗೆ ವಹಿವಾಟು ಆರಂಭವಾಗುತ್ತಿದ್ದಂತೆ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ 50 ಸಾವಿರ ಗಡಿ ದಾಟಿ ಸಾರ್ವಕಾಲಿಕ ದಾಖಲೆ ನಿರ್ಮಿಸಿದೆ. ಇಂದು ಬೆಳಗ್ಗೆ 9.30ಕ್ಕೆ ಷೇರು ಮಾರುಕಟ್ಟೆಯಲ್ಲಿ ವಹಿವಾಟು ಆರಂಭವಾಗುತ್ತಿದ್ದಂತೆ 300ಕ್ಕೂ ಹೆಚ್ಚು ಅಂಕಗಳಷ್ಟು ಏರಿಕೆಯಾಗಿ ಇದೇ ಮೊದಲ ಬಾರಿಗೆ 50 ಸಾವಿರದ ಗಡಿ ದಾಟಿದೆ.

ಪ್ರಮುಖ ಕಂಪೆನಿಗಳಾದ ರಿಲಯನ್ಸ್ ಇಂಡಸ್ಟ್ರೀಸ್, ಬಜಾಜ್ ಫೈನಾನ್ಸ್ ಮತ್ತು ಐಸಿಐಸಿಐ ಬ್ಯಾಂಕ್ ನ ಷೇರುಗಳು ಇಂದು ಉತ್ತಮ ಮಾರುಕಟ್ಟೆಯಲ್ಲಿ ಉತ್ತಮ ವಹಿವಾಟು ನಡೆಸುತ್ತಿವೆ. ಇವುಗಳ ಸಂವೇದಿ ಸೂಚ್ಯಂಕ ಏರುಗತಿಯಲ್ಲಿವೆ.

ಮುಂಬೈ ಷೇರು ಮಾರುಕಟ್ಟೆಯ ಇಂದು ಬೆಳಗಿನ ಆರಂಭಿಕ ವಹಿವಾಟಿನಲ್ಲಿ 300.09 ಅಂಕಗಳಷ್ಟು ಏರಿಕೆಯಾಗಿ 50 ಸಾವಿರದ 126.73ಕ್ಕೆ ಸೂಚ್ಯಂಕ ತಲುಪಿತು. ಬೆಳಗಿನ ಆರಂಭ ವಹಿವಾಟಿನಲ್ಲಿ ಶೇಕಡಾ 0.60 ಶೇಕಡಾದಷ್ಟು ಏರಿಕೆಯಾಗಿ 50 ಸಾವಿರದ 092.21ರಷ್ಟಾಗಿತ್ತು.

ನಿಫ್ಟಿ ಸಹ 85.40 ಅಂಕ ಅಥವಾ ಶೇಕಡಾ 0.58ರಷ್ಟು ಏರಿಕೆಯಾಗಿ 14 ಸಾವಿರದ 730ರಲ್ಲಿ ವಹಿವಾಟು ನಡೆಸುತ್ತಿದೆ. ಇಂದಿನ ವಹಿವಾಟಿನಲ್ಲಿ ಬಜಾಜ್ ಫಿಸರ್ವ್ ಅತಿ ಹೆಚ್ಚಿನ ಮಟ್ಟದಲ್ಲಿ ಮಾರಾಟವಾಗುತ್ತಿದ್ದು, ಶೇಕಡಾ 4ರಷ್ಟು, ನಂತರ ಬಜಾಜ್ ಫೈನಾನ್ಸ್, ರಿಲಯನ್ಸ್ ಇಂಡಸ್ಟ್ರೀಸ್, ಇಂಡಸ್ ಇಂಡ್ ಬ್ಯಾಂಕ್ ಮತ್ತು ಆಕ್ಸಿಸ್ ಬ್ಯಾಂಕ್ ಗಳ ಷೇರುಗಳು ಮಾರಾಟವಾಗುತ್ತಿವೆ.

ಇತ್ತೀಚಿನ ವರದಿ ಬಂದಾಗ ಮುಂಬೈ ಷೇರು ಮಾರುಕಟ್ಟೆಯ ಸೆನ್ಸೆಕ್ಸ್ 50 ಸಾವಿರದ 056.10ರಲ್ಲಿ ವಹಿವಾಟು ನಡೆಸುತ್ತಿದ್ದರೆ, ನಿಫ್ಟಿ 14 ಸಾವಿರದ 719.60ರಲ್ಲಿ ವಹಿವಾಟು ನಡೆಸುತ್ತಿತ್ತು. ಈ ಮಧ್ಯೆ, ಜಾಗತಿಕ ಕಚ್ಚಾತೈಲ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಶೇಕಡಾ 0.30ರಷ್ಟು ಏರಿಕೆಯಾಗಿದ್ದು ಪ್ರತಿ ಬ್ಯಾರಲ್ ಗೆ 55.91 ಡಾಲರ್ ಆಗಿದೆ.

Comments are closed.