ರಾಷ್ಟ್ರೀಯ

ಭಾರತ ವಿಶ್ವದಲ್ಲೇ ಅತಿದೊಡ್ಡ ಕೊರೋನಾ ಲಸಿಕೆ ನೀಡುವ ಕಾರ್ಯಕ್ರಮವನ್ನು ಆಯೋಜಿಸಿದೆ: ಮೋದಿ

Pinterest LinkedIn Tumblr

ನವದೆಹಲಿ: ಮಾರಕ ಕೊರೋನಾದಿಂದ ಇಡೀ ವಿಶ್ವವೇ ಕಂಗೆಟ್ಟಿದ್ದು, ಈ ಮಧ್ಯೆ ಭಾರತ ವಿಶ್ವದಲ್ಲೇ ಅತಿದೊಡ್ಡ ಕೊರೋನಾ ಲಸಿಕೆ ನೀಡುವ (vaccination) ಕಾರ್ಯಕ್ರಮವನ್ನು ಆಯೋಜಿಸಿದೆ
ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ರಾಷ್ಟ್ರೀಯ ಮೆಟ್ರಾಲಜಿ ಕಾನ್​ಕ್ಲೇವ್‌ ಉದ್ಘಾಟನಾ ಭಾಷಣದಲ್ಲಿ ಮಾತನಾಡಿದ ಅವರು, ಈಗಾಗಲೇ ಹಲವು ರಾಜ್ಯಗಳಲ್ಲಿ ಡ್ರೈ ರನ್​ ಆರಂಭವಾಗಿದೆ. ಈ ಮೂಲಕ ಭಾರತದಿಂದ ಕೊರೋನಾವನ್ನು ಓಡಿಸುವ ಕೆಲಸಕ್ಕೆ ಭಾರತ ಮುಂದಾಗಿದೆ. ಆದರೆ, ಈ ಎಲ್ಲಾ ಶ್ರೇಯವೂ ಭಾರತದ ವಿಜ್ಞಾನಿಗಳಿಗೇ ಸಲ್ಲಬೇಕು. ದೇಶದ ವಿಜ್ಞಾನಿಗಳು COVID19 ಲಸಿಕೆಯನ್ನು ಸಂಶೋಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇಂತಹ ವಿಜ್ಞಾನಿಗಳ ಬಗ್ಗೆ ನಮಗೆ ಹೆಮ್ಮೆ ಇದೆ. ಪ್ರಗತಿಪರ ಸಮಾಜಕ್ಕೆ ಇಂತಹ ಸಂಶೋಧನೆಗಳು ಮುಖ್ಯವಾಗಿದ್ದು, ಇಡೀ ದೇಶ ವಿಜ್ಞಾನಿಗಳ ಮತ್ತು ತಂತ್ರಜ್ಞರ ಕೆಲಸಕ್ಕೆ ಋಣಿಯಾಗಿದೆ” ಎಂದಿದ್ದಾರೆ.

2019 ಡಿಸೆಂಬರ್​ ವೇಳೆಗ ಚೀನಾದಲ್ಲಿ ಆರಂಭವಾದ ಕೊರೋನಾ ವೈರಸ್​ ಕಳೆದ ಒಂದು ವರ್ಷದಿಂದ ಇಡೀ ವಿಶ್ವವನ್ನು ತಲ್ಲಣಿಸುತ್ತಿದೆ. ಈ ಸೋಂಕಿಗೆ ಕೋಟ್ಯಾಂತರ ಜನ ತುತ್ತಾಗಿದ್ದರೆ, ಲಕ್ಷಾಂತರ ಜನ ಬಲಿಯಾಗಿದ್ದಾರೆ.

ಈ ಮಾರಣಾಂತಿಕ ವೈರಸ್​​ಗೆ ಲಸಿಕೆಯನ್ನು ಸಂಶೋಧಿಸಲು ಹಲವು ದೇಶಗಳು ಮುಂದಾಗಿದ್ದರೂ ಸಹ ಯಾವ ದೇಶವೂ ಈವರೆಗೆ ಯಶಸ್ವಿಯಾಗಿಲ್ಲ. ಭಾರತದ ವಿಜ್ಞಾನಿಗಳು ಹಾಗೂ ತಂತ್ರಜ್ಞರು ಸಹ ಕೊರೋನಾಗೆ ಲಸಿಕೆಯನ್ನು ತಯಾರಿಸಿದ್ದಾರೆ. ಅಲ್ಲದೆ, ಈಗಾಗಲೇ ಹಲವು ರಾಜ್ಯಗಳಲ್ಲಿ ಇದರ ಡ್ರೈ ರನ್ ಆರಂಭವಾಗಿದೆ. ಅಲ್ಲದೆ, ಇದು ಶೇ.110 ರಷ್ಟು ಸುರಕ್ಷಿತ ಲಸಿಕೆ ಎಂದೂ ಹೇಳಲಾಗುತ್ತಿದೆ.

ಈ ಕುರಿತು ಪ್ರಶಂಶೆ ವ್ಯಕ್ತಪಡಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ, “ಕೋವಿಡ್ -19 ಸೋಂಕನ್ನು ಭಾರತದಿಂದ ಓಡಿಸುವ ಸಲುವಾಗಿ ಕೋವಿಶೀಲ್ಡ್ ಮತ್ತು ಕೋವಾಕ್ಸಿನ್ ಲಸಿಕೆಗಳನ್ನು ಭಾರತದ ಉನ್ನತ ಔಷಧ ನಿಯಂತ್ರಕ ಅನುಮೋದಿಸಿದ್ದು, ಭಾನುವಾರದಿಂದಲೇ ಈ ಔಷಧಿಗಳು ಬಳಕೆಗೆ ಮುಕ್ತವಾಗಿವೆ. ಭಾರತದಲ್ಲಿ ಇದುವರೆಗೆ ಒಂದು ಕೋಟಿಗೂ ಹೆಚ್ಚು ಜನರಿಗೆ ಸೋಂಕು ತಗುಲಿ ಸುಮಾರು 1.5 ಲಕ್ಷ ಜನರನ್ನು ಬಲಿ ಪಡೆದ ವೈರಸ್ ವಿರುದ್ಧ ಸಾಮೂಹಿಕ ವ್ಯಾಕ್ಸಿನೇಷನ್ ಮಾಡಲು ಇದು ದಾರಿ ಮಾಡಿಕೊಟ್ಟಿದೆ” ಎಂದು ತಿಳಿಸಿದ್ದಾರೆ.

ಅಲ್ಲದೆ, ಇದೇ ಸಂದರ್ಭದಲ್ಲಿ ‘ಮೇಕ್ ಇನ್​ ಇಂಡಿಯಾ’ ಉಪಕ್ರಮವನ್ನೂ ಶ್ಲಾಘಿಸಿದ ನರೇಂದ್ರ ಮೋದಿ, “ನಾವು ಇಡೀ ಜಗತ್ತನ್ನು ಭಾರತೀಯ ಉತ್ಪನ್ನಗಳಿಂದ ತುಂಬಲು ಬಯಸುವುದಿಲ್ಲ. ಬದಲಾಗಿ ವಿಶ್ವದ ಮೂಲೆ ಮೂಲೆಯಲ್ಲಿರುವ ಭಾರತೀಯ ಉತ್ಪನ್ನಗಳ ಗ್ರಾಹಕರ ಹೃದಯವನ್ನು ಗೆಲ್ಲಬೇಕು. ಜಾಗತಿಕ ಬೇಡಿಕೆ ಮಾತ್ರವಲ್ಲದೆ ‘ಮೇಕ್ ಇನ್ ಇಂಡಿಯಾ’ ಉತ್ಪನ್ನಗಳ ಜಾಗತಿಕ ಸ್ವೀಕಾರವೂ ಇದೆ ಎಂಬುದನ್ನು ನಾವು ಖಚಿತಪಡಿಸಿಕೊಳ್ಳಬೇಕು. ಗುಣಮಟ್ಟ ಮತ್ತು ವಿಶ್ವಾಸಾರ್ಹತೆಯ ಆಧಾರದ ಮೇಲೆ ನಾವು ಬ್ರಾಂಡ್ ಇಂಡಿಯಾವನ್ನು ಬಲಪಡಿಸಬೇಕು. ‘ಆತ್ಮನಿರ್ಭರ ಭಾರತ್’ ಅನ್ವೇಷಣೆಯಲ್ಲಿ ನಮ್ಮ ಮಾನದಂಡಗಳು ನಮ್ಮ ಪ್ರಮಾಣದೊಂದಿಗೆ ಏರಿಕೆಯಾಗಬೇಕು” ಎಂದು ತಿಳಿಸಿದ್ದಾರೆ.

Comments are closed.