ನವದೆಹಲಿ: ಹಣಕ್ಕಾಗಿ ಕೊಲೆ, ಸುಲಿಗೆ, ದರೋಡೆಯಂಥ ಕೃತ್ಯಗಳು ದಿನನಿತ್ಯ ನಡೆಯುತ್ತಲೇ ಇದೆ. ಇಲ್ಲೊಬ್ಬ ಯುವಕ ಹೊಸ ವರ್ಷವನ್ನು ಆಚರಿಸಲು ಹಣ ನೀಡಿಲ್ಲ ಎಂಬ ಕಾರಣಕ್ಕೆ ತನ್ನ 73 ವರ್ಷದ ಅಜ್ಜಿಯನ್ನು ಸುತ್ತಿಗೆಯಿಂದ ಹೊಡೆದು ಕೊಂದಿದ್ದಾನೆ. ಈ ಘಟನೆ ಸೋಮವಾರ ದೆಹಲಿಯಲ್ಲಿ ನಡೆದಿದೆ.
ಆರೋಪಿ ಕರಣ್(19 ವರ್ಷ) ವಯಸ್ಸಾಗಿರುವ ಅಜ್ಜಿಯ ತಲೆಗೆ ಸುತ್ತಿಗೆಯಿಂದ ಜೋರಾಗಿ ಹೊಡೆದಿದ್ದಾನೆ. ಈ ಬಗ್ಗೆ ಆತನ ನೆರೆಮನೆಯ ಶಹದಾರಾ ಎಂಬವರು ಭಾನುವಾರ ರಾತ್ರಿ ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ದಾರೆ.
ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಸತೀಶ್ ಜಾಲಿಯವರ ದೇಹವು ರಕ್ತದ ಮಡುವಿನಲ್ಲಿ ಕುರ್ಚಿಯ ಮೇಲೆ ಕುಸಿದಿರುವುದನ್ನು ನೋಡಿದ್ದಾರೆ. ಸುತ್ತಿಗೆಯು ರಕ್ತದ ಕಲೆಗಳಿಂದ ಕೂಡಿದ್ದು ಕೆಳಗೆ ಬಿದ್ದಿದೆ. ನೆಲದ ಮೇಲೂ ರಕ್ತ ಚಿಮ್ಮಿತ್ತು.
ರೋಹ್ತಾಶ್ ನಗರದ ಮನೆಯ ನೆಲಮಹಡಿಯಲ್ಲಿ ಸತೀಶ್ ಜಾಲಿ ವಾಸವಾಗಿದ್ದರು. ಅವರ ಹಿರಿಯ ಮಗ ಸಂಜಯ್ ತನ್ನ ಹೆಂಡತಿ ಮತ್ತು ಇಬ್ಬರು ಮಕ್ಕಳೊಂದಿಗೆ ಮೊದಲ ಮಹಡಿಯಲ್ಲಿ ವಾಸವಾಗಿದ್ದರು. ಎರಡನೇಯ ಮಗ ಮನೋಜ್ ಅಲ್ಲಿಯೇ ಹತ್ತಿರದ ಒಂದು ನಿವಾಸವೊಂದರಲ್ಲಿ ವಾಸವಾಗಿದ್ದಾರೆ.
ಪ್ರಕರಣ ಕುರಿತಂತೆ ತನಿಖೆ ನಡೆಸಿದ ಪೊಲೀಸರಿಗೆ ಆರೋಪಿ ಕರಣ್, ಸತೀಶ್ ಜಾಲಿಯ ಹಿರಿಯ ಮಗನ ಮಗನಾಗಿದ್ದು, ಶನಿವಾರ ರಾತ್ರಿ 8 ಗಂಟೆಯ ಸುಮಾರಿಗೆ ತನ್ನ ಅಜ್ಜಿಗೆ ಹೊಸ ವರ್ಷದ ಆಚರಣೆಗೆ ಹಣ ಕೊಡುವಂತೆ ಪೀಡಿಸಿದ್ದಾನೆ. ಅಜ್ಜಿ ಹಣ ಕೊಡಲು ನಿರಾಕರಿಸಿದಾಗ ಕೋಪಗೊಂಡ ಕರಣ್, ಅಜ್ಜಿಯ ತಲೆಗೆ ಸುತ್ತಿಗೆಯಿಂದ ಹೊಡೆದು 18,000 ರೂ ಹಣ ದೋಚಿಕೊಂಡು ಅಲ್ಲಿಂದ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.
ಆರೋಪಿ ತಂದೆ ರೋಹ್ತಾಶ್ ನಗರದ ಕಿರಾಣಿ ಅಂಗಡಿಯೊಂದನ್ನು ಹೊಂದಿದ್ದಾರೆ. ಕರಣ್ ಸಾಕಷ್ಟು ಸಾಲವನ್ನು ಮಾಡಿದ್ದಾನೆ ಎಂದು ಹೇಳಲಾಗುತ್ತಿದ್ದು, ಸದ್ಯ ಆರೋಪಿ ಕರಣ್‍ನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.