ರಾಷ್ಟ್ರೀಯ

ಮೂರು ಕೃಷಿ ಕಾಯ್ದೆ ವಿರೋಧಿಸಿ ಮತ್ತು ರೈತ ಹೋರಾಟ ಬೆಂಬಲಿಸಿ ವಕೀಲ ಆತ್ಮಹತ್ಯೆ

Pinterest LinkedIn Tumblr


ನವದೆಹಲಿ: ರೈತ ಹೋರಾಟವನ್ನು ಬೆಂಬಲಿಸಿ ಹಾಗೂ ಮೂರು ಕೃಷಿ ಕಾಯ್ದೆಯನ್ನು ವಿರೋಧಿಸಿ ಪಂಜಾಬ್ ಮೂಲದ ವಕೀಲರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಟಿಕ್ರಿ ಗಡಿಭಾಗದಲ್ಲಿ ನಡೆದಿದೆ.

ಮೃತಪಟ್ಟ ವಕೀಲನನ್ನು ಅಮರ್ ಜಿತ್ ಸಿಂಗ್ ಎಂದು ಗುರುತಿಸಲಾಗಿದೆ. ಇವರು ಪಂಜಾಬಿನ ಜಲಾಲ್ ಬಾದ್ ಪ್ರದೇಶದವರು ಎಂದು ತಿಳಿದು ಬಂದಿದೆ.

ಮೃತ ಅಮರ್ ಜಿತ್ ಸಿಂಗ್ ರೈತ ಹೋರಾಟದಲ್ಲಿ ಒಗ್ಗಟ್ಟು ತೋರಿಸುವ ನಿಟ್ಟಿನಲ್ಲಿ ಆತ್ಮಹತ್ಯೆ ಪತ್ರ ಬರೆದಿಟ್ಟು ವಿಷ ಕುಡಿಯುವ ಮೂಲಕ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಆತ್ಮಹತ್ಯೆ ಪತ್ರದಲ್ಲಿ ನಾನು ನನ್ನ ಜೀವವನ್ನು ರೈತರ ಹೋರಾಟಕ್ಕಾಗಿ ಸಮರ್ಪಿಸುತ್ತಿದ್ದೇನೆ. ಕೇಂದ್ರವು ಮೂರು ಕೃಷಿ ಕಾಯ್ದೆಗಳನ್ನು ಜಾರಿಗೊಳಿಸುವ ಮೂಲಕ ರೈತರನ್ನು ಸಮಸ್ಯೆಗೆ ದೂಡಿದೆ. ಸರ್ಕಾರ ರೈತರ ಸಮಸ್ಯೆಗಳಿಗೆ ಕಿವಿಗೊಡುತ್ತಿಲ್ಲ ಎಂದಿರುವ ಇವರು ಈ ಕೃಷಿ ಕಾಯ್ದೆಗಳಿಂದಾಗಿ ರೈತರು ಕೆಟ್ಟ ಬದುಕನ್ನು ಅನುಭವಿಸುವಂತಾಗಿದೆ ಎಂದು ಬರೆದುಕೊಂಡಿದ್ದಾರೆ.

ಇವರು ಸಾಯುವ ಮುನ್ನ ಡಿಸೆಂಬರ್ 18 ರಂದು ಬರೆಯಲಾಗಿರುವ ಡೆತ್ ನೋಟ್ ಲಭ್ಯವಾಗಿದ್ದು,ಈ ಪತ್ರವನ್ನು ಪರಿಶೀಲನೆಗೆ ಒಳಪಡಿಸಲಾಗಿದೆ. ಇವರ ಸಂಬಂಧಿಕರಿಗೆ ವಿಷಯ ತಿಳಿಸಲಾಗಿದ್ದು, ಅವರು ಬಂದ ಮೇಲೆ ಅವರಿಂದ ಕೆಲವು ಮಾಹಿತಿಗಳನ್ನು ಪಡೆಯಾಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಹಿಂದೆಯೂ ಕೂಡಾ ಕೇಂದ್ರ ಸರ್ಕಾರದ ಮೂರು ಕೃಷಿ ನೀತಿಗಳನ್ನು ವಿರೋಧಿಸಿ ರೈತರಿಗೆ ಬೆಂಬಲ ನೀಡುವ ನಿಟ್ಟಿನಲ್ಲಿ ಹರ್ಯಾಣ ಮೂಲದ ಸಿಖ್ ಗುರುಗಳಾದ ಬಾಬಾ ರಾಮ್ ಸಿಂಗ್(65) ತಮಗೆ ತಾವೇ ಗುಂಡು ಹಾರಿಸಿಕೊಳ್ಳುವ ಮೂಲಕ ಆತ್ಮಹತ್ಯೆಗೆ ಶರಣಾಗಿದ್ದರು. ಆನಂತರ ಪಂಜಾಬ್ ಮೂಲದ 22 ವಯಸ್ಸಿನ ರೈತರೊಬ್ಬರು ಹಾಗೂ 66 ವರ್ಷದ ರೈತರೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದರು ಎಂದು ವರದಿಯಾಗಿದೆ.

Comments are closed.