ರಾಷ್ಟ್ರೀಯ

ಫಡ್ನವಿಸ್​ ದಾಖಲೆ ಮುರಿದು 21 ವರ್ಷಕ್ಕೇ ಮೇಯರ್​ ಪಟ್ಟಕ್ಕೆ ಕೇರಳದ ಯುವತಿ?

Pinterest LinkedIn Tumblr


ತಿರುವನಂತಪುರಂ: ಯುವಕರು ರಾಜಕೀಯಕ್ಕೆ ಬರಬೇಕು ಎಂದು ಎಲ್ಲ ರಾಜಕೀಯ ಪಕ್ಷಗಳೂ ಹೇಳುತ್ತಲೇ ಇರುತ್ತವೆ. ಆದರೆ ಇದೀಗ ಕೇರಳದ ಸಿಪಿಐಎಂ 21 ವರ್ಷದ ಯುವತಿಯನ್ನು ಮೇಯರ್​ ಸ್ಥಾನಕ್ಕೆ ಏರಿಸಲು ಹೊರಟಿದ್ದು, ಹೊಸದೊಂದು ದಾಖಲೆ ನಿರ್ಮಿಸುವ ಸಿದ್ಧತೆ ನಡೆಸಿಕೊಂಡಿದೆ.

ಈಗಿನ್ನೂ ಬಿಎಸ್ಸಿ ಪದವಿಯ ದ್ವಿತೀಯ ವರ್ಷದ ವ್ಯಾಸಂಗ ಮಾಡುತ್ತಿರುವ ಆರ್ಯ ರಾಜೇಂದ್ರನ್​ ಅವರನ್ನು ಮೇಯರ್​ ಸ್ಥಾನಕ್ಕೆ ಆಯ್ಕೆ ಮಾಡುವಂತೆ ಪಕ್ಷ ಕೋರಿದೆ ಎನ್ನಲಾಗಿದೆ. ಸಿಪಿಎಂ ಅಭ್ಯರ್ಥಿ ಆರ್ಯ, ಮುದವನ್ಮುಗಲ್ ವಾರ್ಡ್‌ನಿಂದ ಯುಡಿಎಫ್ ಅಭ್ಯರ್ಥಿ ಶ್ರೀಕಾಲ ಅವರ ವಿರುದ್ಧ 2872 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಮೇಯರ್​ ಸ್ಥಾನಕ್ಕೆ ಯುವಕರನ್ನೇ ಆಯ್ಕೆ ಮಾಡಬೇಕು ಎಂದು ಪಕ್ಷ ನಿರ್ಧರಿಸಿದ್ದು, ಆರ್ಯ ಅವರ ಹೆಸರನ್ನು ಅಂತಿಮ ಮಾಡಿದೆ ಎನ್ನಲಾಗಿದೆ. ಈ ಕುರಿತಾಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್​ ಅವರ ಬಳಿಯೂ ಮಾತನಾಡಿರುವುದಾಗಿ ಹೇಳಲಾಗಿದೆ. ಆದರೆ ಪಕ್ಷದಿಂದ ಅಧಿಕೃತವಾಗಿ ಹೇಳಿಕೆ ಬರುವುದು ಬಾಕಿಯಿದೆ.

ಆರ್ಯ ತಿರುವನಂತಪುರಂನಲ್ಲಿರುವ ಆಲ್ ಸೇಂಟ್ಸ್ ಕಾಲೇಜಿನ ದ್ವಿತೀಯ ವರ್ಷದ ಬಿಎಸ್ಸಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ವಿದ್ಯಾಭ್ಯಾಸದ ಜತೆಗೆ ಬಾಲಾ ಸಂಘದ ರಾಜ್ಯಾಧ್ಯಕ್ಷೆ ಮತ್ತು ಸಿಪಿಎಂನ ವಿದ್ಯಾರ್ಥಿ ವಿಭಾಗವಾದ ಎಸ್‌ಎಫ್‌ಐನ ರಾಜ್ಯ ಪದಾಧಿಕಾರಿಯಾಗಿಯೂ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸಿಪಿಎಂ ಶಾಖಾ ಸಮಿತಿ ಸದಸ್ಯೆಯೂ ಆಗಿದ್ದಾರೆ.

ಆರ್ಯಗೆ ರಾಜಕೀಯ ಹಿನ್ನೆಲೆಯಲ್ಲಿ ತಂದೆ ರಾಜೇಂದ್ರನ್​ ಒಬ್ಬ ಎಲೆಕ್ಟ್ರಿಷಿಯನ್​ ಆಗಿದ್ದರೆ, ತಾಯಿ ಶ್ರೀಲತಾ ಎಲ್​ಐಸಿ ಏಜೆಂಟ್​ ಆಗಿ ಕೆಲಸ ಮಾಡುತ್ತಿದ್ದಾರೆ. ನಾನೀಗ ಕೌನ್ಸಿಲರ್​. ಆದರೆ ಪಕ್ಷ ಯಾವುದೇ ಜವಾಬ್ದಾರಿಯನ್ನು ಕೊಟ್ಟರೂ ಅದನ್ನು ನಿಷ್ಠೆಯಿಂದ ಪಾಲಿಸಲು ಸಿದ್ಧಳಿದ್ದೇನೆ ಎಂದು ಆರ್ಯ ಹೇಳಿದ್ದಾರೆ.

ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್​ ಅವರು ತಮ್ಮ 27ನೇ ವಯಸ್ಸಿಗೆ ಮೇಯರ್​ ಆಗಿ ಹೊರಹೊಮ್ಮಿದ್ದರು. 23 ವರ್ಷಗಳ ಹಿಂದೆ ಈ ದಾಖಲೆ ನಿರ್ಮಾಣವಾಗಿತ್ತು. ಈವರೆಗೆ ದೇಶದಲ್ಲಿ ಅತ್ಯಂತ ಕಿರಿಯ ವಯಸ್ಸಿಗೆ ಮೇಯರ್​ ಆದವರು ಎನ್ನುವ ಖ್ಯಾತಿ ಅವರಿಗಿತ್ತು. ಇದೀಗ ಆರ್ಯ ಮೇಯರ್​ ಆದರೆ, ದೇಶದ ಅತ್ಯಂತ ಕಿರಿಯ ಮೇಯರ್​ ಎನ್ನುವ ಹೆಗ್ಗಳಿಕೆ ಆಕೆಯ ಪಾಲಾಗಲಿದೆ.

Comments are closed.