ರಾಷ್ಟ್ರೀಯ

ತೃಣಮೂಲ ಕಾಂಗ್ರೆಸ್ ಗೆ ಸೇರ್ಪಡೆಗೊಂಡ ಹೆಂಡತಿಗೆ ವಿಚ್ಛೇದನ ನೀಡಲು ಮುಂದಾದ ಬಿಜೆಪಿ ಸಂಸದ

Pinterest LinkedIn Tumblr


ಕೋಲ್ಕತ್ತ: ಬಿಜೆಪಿ ಸಂಸದ ಸೌಮಿತ್ರ ಖಾನ್‌ ಅವರ ಪತ್ನಿ ಸುಜಾತ ಮಂಡಲ್‌ ಖಾನ್‌ ಸೋಮವಾರ ಬಿಜೆಪಿ ತೊರೆದು ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಪಕ್ಷಕ್ಕೆ ಸೇರ್ಪಡೆಯಾದರು.

ಈ ವಿಷಯ ತಿಳಿದೊಡನೆ ತುರ್ತು ಸುದ್ದಿಗೋಷ್ಠಿ ನಡೆಸಿದ ಖಾನ್‌ ‘ಪತ್ನಿಗೆ ವಿಚ್ಛೇದನಾ ನೀಡಲು ತೀರ್ಮಾನಿಸಿದ್ದು, ಈ ಸಂಬಂಧ ಶೀಘ್ರವೇ ನೋಟಿಸ್‌ ಕೊಡುತ್ತೇನೆ’ ಎಂದಿದ್ದಾರೆ.

‘ಸುಜಾತ ನೀನು ಬಹುದೊಡ್ಡ ತಪ್ಪು ಮಾಡಿಬಿಟ್ಟೆ. ಇನ್ನೆಂದೂ ನಿನ್ನ ಹೆಸರಿನ ಜೊತೆ ನನ್ನ ಉಪನಾಮ ಬಳಸಬೇಡ’ ಎಂದು ಭಾವುಕರಾಗಿ ನುಡಿದರು. ಈ ವೇಳೆ ಅವರ ಕಣ್ಣುಗಳು ಹನಿಗೂಡಿದವು.

‘ನಮ್ಮ ನಡುವಣ 10 ವರ್ಷಗಳ ದಾಂಪತ್ಯ ಜೀವನಕ್ಕೆ ಹುಳಿ ಹಿಂಡಲು ಹಾತೊರೆಯುತ್ತಿದ್ದ ಕೆಲವರು ಆ ಕೆಲಸಕ್ಕೆ ನಿನ್ನನ್ನು ಬಳಸಿಕೊಂಡಿದ್ದಾರೆ. ಲೋಕಸಭಾ ಚುನಾವಣೆಯ ವೇಳೆ ನೀನು ನನ್ನ ಆಧಾರಸ್ತಂಭದಂತೆ ಕೆಲಸ ಮಾಡಿದ್ದೆ. ಅದನ್ನು ಒಪ್ಪುತ್ತೇನೆ. ನಾನು ಈಗ ನಿನ್ನನ್ನು ಎಲ್ಲಾ ಬಗೆಯ ಬಂಧಗಳಿಂದ ಬಿಡುಗಡೆ ಮಾಡುತ್ತಿದ್ದೇನೆ. ಇನ್ನು ಮುಂದೆ ನಮ್ಮಿಬ್ಬರ ನಡುವೆ ಯಾವ ರೀತಿಯ ಸಂಬಂಧವೂ ಇರುವುದಿಲ್ಲ. ನಿನ್ನ ಪಾಲಿಗೆ ನಾನು ಅಷ್ಟೊಂದು ಕ್ರೂರಿಯಾಗಿಬಿಟ್ಟೆನೆ’ ಎಂದೂ ಅವರು ಕಣ್ಣೀರಿಟ್ಟಿದ್ದಾರೆ.

‘2019ರ ಲೋಕಸಭಾ ಚುನಾವಣೆಯಲ್ಲಿ ನನ್ನ ಪತಿ, ವಿಷ್ಣುಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಕಾನೂನಾತ್ಮಕ ಕಾರಣಗಳಿಂದಾಗಿ ಕ್ಷೇತ್ರಕ್ಕೆ ಕಾಲಿಟ್ಟಿರಲಿಲ್ಲ. ಅವರ ಪರವಾಗಿ ನಾನು ಹಗಲಿರುಳು ಕೆಲಸ ಮಾಡಿದ್ದೆ. ಅವರ ಗೆಲುವಿಗಾಗಿ ಪ್ರಾಣವನ್ನೇ ಮುಡಿಪಾಗಿಟ್ಟಿದ್ದೆ. ಪ್ರಚಾರದ ವೇಳೆ ನನ್ನ ಮೇಲೆ ಕೆಲವರು ದಾಳಿ ನಡೆಸಿದರೂ ಅಂಜದೆ ಕಾರ್ಯ ನಿರ್ವಹಿಸಿದ್ದೆ. ಹೀಗಿದ್ದರೂ ಯಾರೂ ನನ್ನನ್ನು ಗುರುತಿಸಲಿಲ್ಲ. ಭ್ರಷ್ಟ ಮತ್ತು ಅಸಮರ್ಥರಿಗೆ ಬಿಜೆಪಿಯಲ್ಲಿ ಆಯಾಕಟ್ಟಿನ ಸ್ಥಾನ ನೀಡಲಾಗಿದೆ. ಪಕ್ಷಕ್ಕಾಗಿ ದುಡಿಯುವ ಪ್ರಾಮಾಣಿಕ ವ್ಯಕ್ತಿಗಳಿಗೆ ಅಲ್ಲಿ ಮನ್ನಣೆ ಸಿಗುತ್ತಿಲ್ಲ. ಇದರಿಂದ ನೊಂದು ಪಕ್ಷ ತ್ಯಜಿಸಿದ್ದೇನೆ’ ಎಂದು ಸುಜಾತ ಮಂಡಲ್‌ ಹೇಳಿದ್ದಾರೆ.

ಟಿಎಂಸಿ ಸಂಸದ ಸೌಗತಾ ರಾಯ್‌ ಹಾಗೂ ಪಕ್ಷದ ವಕ್ತಾರ ಕುನಾಲ್‌ ಘೋಷ್‌ ಅವರ ಸಮ್ಮುಖದಲ್ಲಿ ಟಿಎಂಸಿ ಸೇರಿದ ನಂತರ ಮಾತನಾಡಿದ ಅವರು ‘ಮಮತಾ ಬ್ಯಾನರ್ಜಿ ಹಾಗೂ ಅಭಿಷೇಕ್‌ ಬ್ಯಾನರ್ಜಿ ಅವರ ನಾಯಕತ್ವವನ್ನು ಮೆಚ್ಚಿ ಪಕ್ಷಕ್ಕೆ ಸೇರಿದ್ದೇನೆ. ಅವರ ನಿರ್ದೇಶನದಂತೆ ಕೆಲಸ ಮಾಡುತ್ತೇನೆ. ಮುಂದೊಂದು ದಿನ ನನ್ನ ಪತಿಗೂ ಜ್ಞಾನೋದಯವಾಗಬಹುದು. ಆಗ ಅವರೂ ಬಿಜೆಪಿ ಬಿಟ್ಟು ಮತ್ತೆ ಟಿಎಂಸಿಗೆ ಬರಬಹುದು’ ಎಂದಿದ್ದಾರೆ.

ಈ ಹಿಂದೆ ಟಿಎಂಸಿಯಲ್ಲಿದ್ದ ಖಾನ್‌, ಹಿಂದಿನ ಲೋಕಸಭಾ ಚುನಾವಣೆಗೂ ಮುನ್ನ ಪಕ್ಷ ತೊರೆದಿದ್ದರು. ಅವರು ಪ್ರಸ್ತುತ ಭಾರತೀಯ ಜನತಾ ಯುವ ಮೋರ್ಚಾದ (ಬಿಜೆವೈಎಂ) ರಾಜ್ಯಾಧ್ಯಕ್ಷರೂ ಆಗಿದ್ದಾರೆ.

Comments are closed.