ರಾಷ್ಟ್ರೀಯ

ದೇಶದಲ್ಲಿ ಕೊರೋನಾ ನಂತರ ಮತ್ತೊಂದು ಮಾರಕ ರೋಗ; ನಿರ್ಲಕ್ಷ್ಯ ಮಾಡುವಂತಿಲ್ಲ

Pinterest LinkedIn Tumblr


ನವದೆಹಲಿ: ದೇಶಾದ್ಯಂತ ಮತ್ತೊಂದು ಮಾರಕ ರೋಗ ಪಸರುತ್ತಿರುವ ಮಾಹಿತಿ ಬೆಳಕಿಗೆ ಬಂದಿದೆ. ಮ್ಯೂಕೋರ್​ಮೈಕೋಸಿಸ್ ಎಂಬ ಅಪರೂಪದ ಫಂಗಲ್ ಕಾಯಿಲೆಯ ಸೋಂಕು ಅಹ್ಮದಾಬಾದ್ ನಗರದಲ್ಲಿ ದಟ್ಟವಾಗಿ ಹಬ್ಬುತ್ತಿದೆ. ಇಲ್ಲಷ್ಟೇ ಅಲ್ಲ ದೆಹಲಿ ಮತ್ತು ಮುಂಬೈನಲ್ಲೂ ಇದರ ಸೋಂಕುಗಳು ಹರಡುತ್ತಿರುವುದು ಕಂಡುಬಂದಿದೆ. ಇದು ಅಪರೂಪದ ಹಾಗೂ ಬಹಳ ಅಪಾಯಕಾರಿ ಕಾಯಿಲೆಯಾಗಿದ್ದು ಸ್ವಲ್ಪ ಅಲಕ್ಷಿಸಿದರೆ ಸಾವು ಕಟ್ಟಿಟ್ಟ ಬುತ್ತಿ ಎಂದು ವೈದ್ಯರು ಎಚ್ಚರಿಸಿದ್ದಾರೆ. ಕೆಲ ದಿನಗಳ ಅಂತರದಲ್ಲೇ 9 ಮಂದಿ ಈ ಕಾಯಿಲೆಗೆ ತುತ್ತಾಗಿ ಮೃತಪಟ್ಟಿದ್ದಾರೆ. ಅಹ್ಮದಾಬಾದ್ ನಗರವೊಂದರಲ್ಲೇ 50 ಪ್ರಕರಣಗಳು ದಾಖಲಾಗಿವೆ. ಬೆಳಕಿಗೆ ಬಾರದೇ ಉಳಿದಿರುವ ಪ್ರಕರಣಗಳು ಅದೆಷ್ಟಿವೆಯೋ ಗೊತ್ತಿಲ್ಲ.

ಬಹಳ ಅಪಾಯಕಾರಿ ರೋಗ: ಝೈಗೋಮೈಕೋಸಿಸ್ ಅಥವಾ ಮ್ಯೂಕೋರ್​ಮೈಕೋಸಿಸ್ ಎಂಬುದು ಮ್ಯೂಕೋರ್​ಮೈಸೀಟ್ಸ್ ಎಂಬ ಫಂಗಸ್ ಜಾತಿಯ ಸೂಕ್ಷ್ಮಜೀವಿಯಿಂದ ಹರಡುವ ಫಂಗಲ್ ಇನ್ಫೆಕ್ಷನ್ ಆಗಿದೆ. ಇದು ಯಾವುದೇ ವಾತಾವರಣದಲ್ಲೂ ಹರಡಬಲ್ಲುವುದು. ಸಾಮಾನ್ಯವಾಗಿ ಇದರ ಸೋಂಕು ಮೂಗಿನ ಮೂಲಕ ಹರಡುತ್ತದೆ. ನಂತರ ಇದು ಕಣ್ಣಿಗೆ ತಲುಪುತ್ತದೆ. ಹಾಗೇ ಬಿಟ್ಟರೆ ಇದು ಕಣ್ಣಿನ ದೃಷ್ಟಿಗೆ ಹಾನಿ ಮಾಡುತ್ತದೆ. ಇದೇನಾದರೂ ಮಿದುಳಿಗೆ ಹರಡಿದರೆ ಮೆನಿಂಗಿಟಿಸ್ ಕಾಯಿಲೆಗೆ ತುತ್ತಾಗಿ ರೋಗಿ ಮೃತಪಡುವ ಅಪಾಯ ಇರುತ್ತದೆ. ಯಾರಿಗೆ ಹೆಚ್ಚು ಸುಲಭವಾಗಿ ಹರಡುತ್ತದೆ?: ಈಗ ಬೆಳಕಿಗೆ ಬಂದಿರುವ ಮ್ಯೂಕೋರ್​ಮೈಕೋಸಿಸ್ ಕಾಯಿಲೆ ಹೆಚ್ಚಾಗಿ ಕಂಡು ಬಂದಿರುವುದು ಕೋವಿಡ್​ನಿಂದ ಚೇತರಿಸಿಕೊಂಡವರಲ್ಲೇ. ರೋಗ ನಿರೋಧಕ ಶಕ್ತಿ ಕುಂದಿದವರಿಗೆ ಬೇಗ ಇದರ ಸೋಂಕು ತಗುಲುತ್ತದೆ. ಕೋವಿಡ್-19 ರೋಗದಿಂದ ಚೇತರಿಸಿಕೊಳ್ಳುತ್ತಿರುವ ಜನರು ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಡಯಾಬಿಟಿಸ್ ಸೇರಿದಂತೆ ಇತರೆ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರಿಗೂ ಅಪಾಯ ಇದೆ. ಅಹ್ಮದಾಬಾದ್​ನಲ್ಲಿರುವ ಇಂಥ ಪ್ರಕರಣಗಳಲ್ಲಿ ರೋಗಿಗಳು ಕೋವಿಡ್-19ಗೆ ಒಳಗಾಗಿ ಚೇತರಿಸಿಕೊಳ್ಳುತ್ತಿರುವುದಷ್ಟೇ ಅಲ್ಲ ಡಯಾಬಿಟಿಸ್​ನಿಂದಲೂ ಬಳಲುತ್ತಿದ್ದವರಾಗಿದ್ದಾರೆ.

ರೋಗಲಕ್ಷಣಗಳು ಮತ್ತು ಮುಂಜಾಗ್ರತಾ ಕ್ರಮಗಳು:
ಮೂಗಿನಲ್ಲಿ ನೋವು ಕಾಣಿಸಿಕೊಳ್ಳುವುದು ಅಥವಾ ಮೂಗಿನಲ್ಲಿ ಊತ ಇರುವುದು ಇದರ ಪ್ರಮುಖ ರೋಗಲಕ್ಷಣವಾಗಿದೆ. ಹಾಗೆಯೇ ದೃಷ್ಟಿ ಮಂಜಾಗಿರುವುದೂ ಒಂದು ಪ್ರಮುಖ ಲಕ್ಷಣ. ಈ ಮೂರಲ್ಲಿ ಒಂದು ಲಕ್ಷಣ ಕಾಣಿಸಿದರೂ ತಡ ಮಾಡದೇ ವೈದ್ಯರನ್ನ ಸಂಪರ್ಕಿಸಿ. ರೋಗ ಬೇಗ ಪತ್ತೆಯಾದರೆ ಚಿಕಿತ್ಸೆ ನೀಡಿ ಗುಣಪಡಿಸಬಹುದು. ಕೈಮೀರಿ ಹೋದರೆ ಸಾವಿನ ಅಪಾಯ ಹೆಚ್ಚೇ ಇರುತ್ತದೆ.

ಕೋವಿಡ್-19 ರೋಗಕ್ಕೆ ನೀವು ತೆಗೆದುಕೊಳ್ಳುವ ಮುಂಜಾಗ್ರತಾ ಕ್ರಮಗಳು ಮ್ಯೂಕೋರ್​ಮೈಕೋಸಿಸ್ ರೋಗಕ್ಕೂ ಅನ್ವಯವಾಗುತ್ತದೆ. ನಮ್ಮ ದೇಹದ ಶುಚಿತ್ವದ ಜೊತೆ ನಾವಿರುವ ಸ್ಥಳವನ್ನ ಶುಚಿಯಾಗಿಟ್ಟುಕೊಳ್ಳಬೇಕು. ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಕಡ್ಡಾಯವಾಗಿ ಹಾಕಿಕೊಳ್ಳಬೇಕು. ಕೈಗಳನ್ನ ಆಗಾಗ ಸ್ವಚ್ಛಗೊಳಿಸಿ. ನಿಮ್ಮ ಕಣ್ಣು ಮತ್ತು ಮೂಗನ್ನ ಮುಟ್ಟಿಕೊಳ್ಳುವ ಅಭ್ಯಾಸ ಇದ್ದರೆ ಬಿಟ್ಟುಬಿಡಿ.

Comments are closed.