ರಾಷ್ಟ್ರೀಯ

ಸಿಬಿಐ ವಶದಲ್ಲಿದ್ದ 103 ಕೆ.ಜಿ ಚಿನ್ನ ಕಳವು!: ಪೊಲೀಸ್ ವಿಚಾರಣೆಗೆ ಆದೇಶಿಸಿದ ನ್ಯಾಯಾಲಯ

Pinterest LinkedIn Tumblr


ಚೆನ್ನೈ: ಸಿಬಿಐ ವಶದಲ್ಲಿದ್ದ 45 ಕೋಟಿ ರೂ. ಮೌಲ್ಯದ 103 ಕೆ.ಜಿ ಚಿನ್ನ ಕಳವು ಆಗಿದೆ. ಈ ಪ್ರಕರಣದ ಕುರಿತು ಸ್ಥಳೀಯ ಪೊಲೀಸರು ವಿಚಾರಣೆ ನಡೆಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ.

ಪಶ್ಚಿಮ ಬಂಗಾಳದ ಐಪಿಎಸ್​ ಅಧಿಕಾರಿಗಳ ವಿರುದ್ಧ ಕೇಂದ್ರದ ಕ್ರಮ; ರಕ್ಷಣೆ ನೀಡಲು ವಿಫಲವಾದ ಅಧಿಕಾರಿಗಳು ಕೇಂದ್ರ ಸೇವೆಗೆ ನಿಯೋಜನೆ

2012ರಲ್ಲಿ ಚೆನ್ನೈನ ಸುರಾನಾ ಕಾರ್ಪೋರೇಶನ್​ ಮೇಲೆ ಸಿಬಿಐ ದಾಳಿ ನಡೆಸಿತ್ತು. ಈ ವೇಳೆ ಅಲ್ಲಿ ಸಿಕ್ಕಿದ 400.47 ಕೆ.ಜಿ ಚಿನ್ನವನ್ನು ವಶಪಡಿಸಿಕೊಳ್ಳಲಾಗಿತ್ತು. ಚಿನ್ನವನ್ನು ಅದೇ ಕಚೇರಿಯಲ್ಲಿ ಲಾಕರ್​ನಲ್ಲಿರಿಸಿ ಸಿಬಿಐ ಸೀಲು ಮಾಡಲಾಗಿತ್ತು. ಅದಾದ ನಂತರ ಎಂಟು ವರ್ಷಗಳ ಕಾಲ ಅದನ್ನು ಹೊರಗೆ ತೆಗೆದಿಲ್ಲ. ಇತ್ತೀಚೆಗೆ ಸೀಲು ತೆಗೆದು ಚಿನ್ನವನ್ನು ತೂಕ ಮಾಡಿದಾಗ ಅದರಲ್ಲಿ 103 ಕೆ.ಜಿ ಚಿನ್ನ ಕಡಿಮೆಯಾಗಿದೆ.

ಸೀಲ್​ ಮಾಡುವ ಮೊದಲು ಚಿನ್ನವನ್ನು ಒಟ್ಟಾರೆಯಾಗಿ ಹಾಕಿ ತೂಕ ಮಾಡಲಾಗಿತ್ತು. ಆದರೆ ವಾಪಾಸು ಈಗ ತೂಕ ಮಾಡುವಾಗಿ ಪ್ರತ್ಯೇಕವಾಗಿ ತೂಕ ಮಾಡಲಾಗಿದೆ. ಅದೇ ಕಾರಣದಿಂದಾಗಿ ತೂಕ ಕಡಿಮೆಯಾಗಿದೆ ಎಂದು ಸಿಬಿಐ ಹೇಳಿದೆ.

ಈ ಪ್ರಕರಣದ ವಿಚಾರಣೆ ನಡೆಸಿದ ಮದ್ರಾಸ್​ ಹೈ ಕೋರ್ಟ್​, ಪ್ರಕರಣದ ತನಿಖೆಯನ್ನು ಎಸ್‌ಪಿ ಶ್ರೇಣಿಯ ಅಧಿಕಾರಿಗೆ ವಹಿಸಿದೆ. ಆರು ತಿಂಗಳಲ್ಲಿ ತನಿಖೆ ಪೂರ್ಣಗೊಳಿಸಬೇಕೆಂದು ನ್ಯಾಯಾಲಯ ತಿಳಿಸಿದೆ. ಇದಕ್ಕೆ ತಕರಾರು ತೆಗೆದ ಸಿಬಿಐ, ಸ್ಥಳೀಯ ಪೊಲೀಸರಿಗೆ ಸಿಬಿಐ ಪ್ರಕರಣ ನೀಡಿದರೆ, ನಮ್ಮ ಘನತೆ ಕುಗ್ಗುತ್ತದೆ ಎಂದು ವಾದಿಸಿದೆ. ಈ ವಾದವನ್ನು ತಳ್ಳಿ ಹಾಕಿರುವ ನ್ಯಾಯಾಲಯ, ‘ಎಲ್ಲ ಪೊಲೀಸರ ಮೇಲೂ ನಮಗೆ ನಂಬಿಕೆಯಿದೆ. ಇಲ್ಲಿ ಸಿಬಿಐ ಮತ್ತು ಸ್ಥಳೀಯ ಪೊಲೀಸರು ಎನ್ನುವ ಭೇದ ಭಾವ ಸಲ್ಲ’ ಎಂದು ತಿಳಿಸಿದೆ.

ಇದು ಸಿಬಿಐಗೆ ಅಗ್ನಿ ಪರೀಕ್ಷೆಯಿದ್ದಂತೆ. ಅವರ ಕೈ ಸೀತಾ ಮಾತೆಯಷ್ಟು ಪವಿತ್ರವಾಗಿದ್ದರೆ ಅವರು ಪ್ರಕಾಶಮಾನವಾಗಿ ಹೊರಬರಬಹುದು. ಇಲ್ಲವಾದರೆ ಅದಕ್ಕೆ ತಕ್ಕ ಪಾಠ ಕಲಿಯಲಿದ್ದಾರೆ ಎಂದು ನ್ಯಾಯಾಲಯ ಹೇಳಿದೆ.

Comments are closed.