ರಾಷ್ಟ್ರೀಯ

ರೈತರ ಪ್ರತಿಭಟನೆ ವಿರುದ್ಧವೇ ಅಭಿಯಾನ ಆರಂಭಿಸಲು ಮುಂದಾದ ಬಿಜೆಪಿ

Pinterest LinkedIn Tumblr


ನವದೆಹಲಿ: ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ನಡೆಸುತ್ತಿರುವ ರೈತರ ವಿರುದ್ಧವೇ ಬಿಜೆಪಿ ಅಭಿಯಾನ ನಡೆಸಲು ಮುಂದಾಗಿದೆ. ಇದಕ್ಕೆ ಪ್ರತಿತಂತ್ರ ರೂಪಿಸಿದ್ದು ‘ವಿವಾದಾತ್ಮಕ ಕೃಷಿ ಕಾನೂನುಗಳು ರೈತರ ಪರವಾಗಿವೆ’ ಎಂದು ದೇಶಾದ್ಯಂತ ಪ್ರಚಾರ ನಡೆಸಲು ಮುಂದಾಗಿದೆ. ಈ ಅಭಿಯಾನದ ಅಂಗವಾಗಿ ಎಲ್ಲಾ ಜಿಲ್ಲಾ ಕೇಂದ್ರಗಳು ಸೇರಿದಂತೆ ದೇಶಾದ್ಯಂತ ಒಟ್ಟು 700 ಕಡೆ ಪತ್ರಿಕಾಗೋಷ್ಠಿಗಳನ್ನು ನಡೆಸಲಿದೆ. ಅಲ್ಲದೆ 700 ಕಡೆ ಕೃಷಿ ಕಾನೂನುಗಳ ಬಗ್ಗೆ ಚರ್ಚೆ ನಡೆಸಲಿದೆ ಎಂದು ತಿಳಿದುಬಂದಿದೆ. ಬಿಜೆಪಿಯು ಈ ಮೂಲಕ ‘ತಾನು ಯಾವ ಕಾರಣಕ್ಕೂ ರೈತರ ಪ್ರತಿಭಟನೆಗೆ ಮಣಿಯುವುದಿಲ್ಲ’ ಎಂದು ಸಾರಿ ಹೇಳಿದೆ.

ಕೇಂದ್ರ ಸರ್ಕಾರ ಇದೇ ರೀತಿ ಹಠ ಹಿಡಿದುಕುಳಿತಿದ್ದರಿಂದ ಈಗಾಗಲೇ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್​ ತೋಮರ್, ಸಚಿವ ಪಿಯೂಷ್ ಗೋಯಲ್, ಕಿರಿಯ ಕೈಗಾರಿಕಾ ಸಚಿವ ಸೋಮ್ ಪ್ರಕಾಶ್ ಮತ್ತು ರೈತ ಸಂಘಟನೆಗಳ 35 ಪ್ರತಿನಿಧಿಗಳ‌ ನಡುವೆ ನಡೆದ 5 ಸಭೆಗಳು ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ನಡೆಸಿದ ಅನೌಪಚಾರಿಕ ಮಾತುಕತೆಗಳು ವಿಫಲವಾಗಿವೆ. ಇದರಿಂದ ರೈತರು ತಮ್ಮ ಪ್ರತಿಭಟನೆ ಮುಂದುವರೆಸಲು ನಿರ್ಧರಿಸಿದ್ದಾರೆ. ಇದರಿಂದ ರೈತರ ಪ್ರತಿಭಟನೆ 16ನೇ ದಿನಕ್ಕೆ ಕಾಲಿಟ್ಟಿದೆ. ಜೊತೆಗೆ ಪ್ರತಿಭಟನೆ ನಾಳೆಯಿಂದ ಇನ್ನಷ್ಟು ತೀವ್ರವಾಗುವ ಸಾಧ್ಯತೆಯೂ ಇದೆ.

ಖುದ್ದು ಅಮಿತ್ ಶಾ ಕೂಡ ರೈತರನ್ನು ಮನವೊಲಿಸಲು ಸಫಲರಾಗಿಲ್ಲದಿರುವುದರಿಂದ ಸಮಸ್ಯೆ ಬಗೆಹರಿಯುವ ಸಾಧ್ಯತೆ ಕ್ಷೀಣಿಸಿದ್ದು ರೈತರು ಪ್ರತಿಭಟನೆ ಮುಂದುವರೆಸುತ್ತಿದ್ದಾರೆ. ಈ ಹಂತದಲ್ಲಿ ರೈತರನ್ನು ಮನವೊಲಿಸಬೇಕಾದ ಕೇಂದ್ರ ಸರ್ಕಾರ ಮೊಂಡುತನ‌ ಮುಂದುವರೆಸಿದ್ದರೆ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ರೈತರ ವಿರುದ್ಧವೇ ಅಭಿಯಾನ ಆರಂಭಿಸಲು ಹೊರಟಿದೆ.

ಕೇಂದ್ರ ಸಚಿವರು ಕೃಷಿ ಕಾನೂನುಗಳಲ್ಲಿನ ಭಿನ್ನಾಭಿಪ್ರಾಯಗಳನ್ನು ವಿಂಗಡಿಸಿ ಚರ್ಚಿಸಲು ಸಮಿತಿಯೊಂದನ್ನು ರಚಿಸುವ ಪ್ರಸ್ತಾಪವನ್ನು ಮುಂದಿಟ್ಟಿದ್ದಾರೆ. ಜೊತೆಗೆ ಕನಿಷ್ಠ ಬೆಂಬಲ ಬೆಲೆ ಪದ್ದತಿ ಮುಂದುವರೆಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಆದರೆ ಈ ಪ್ರಸ್ತಾಪಗಳಿಗೆ ಒಪ್ಪದ ರೈತ ಮುಖಂಡರು ಕೇಂದ್ರ ಸರ್ಕಾರ ಇತ್ತೀಚೆಗೆ ತಂದಿರುವ ಮೂರು ರೈತ ವಿರೋಧಿ ಕೃಷಿ ಕಾನೂನುಗಳನ್ನು ಹಿಂಪಡೆಯಲೇಬೇಕು. ರೈತರ ಎಲ್ಲಾ ಉತ್ಪನ್ನಗಳಿಗೂ ಕನಿಷ್ಠ ಬೆಂಬಲ ಬೆಲೆ ಕೊಡಬೇಕು. ಜೊತೆಗೆ ರೈತರಿಗೆ ಮಾರಕವಾಗಿರುವ ವಿದ್ಯುತ್ ಕಾನೂನನ್ನು ವಾಪಸ್ ಪಡೆಯಲೇಬೇಕು ಎಂದು ಒತ್ತಾಯಿಸಿದ್ದಾರೆ.

ದೇಶದ ವಿವಿಧ ಮೂಲೆಗಳಿಂದ ದೆಹಲಿಯತ್ತ ಧಾವಿಸಿದ್ದ ರೈತರು ನವೆಂಬರ್ 26ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದರು. ಈ ಪ್ರತಿಭಟನೆಗೆ ಮೊದಲು ಒಪ್ಪಿಗೆ ನೀಡಿದ್ದ ಪೊಲೀಸರು ನಂತರ ಪ್ರತಿಭಟನೆ ಹತ್ತಿಕ್ಕಲೆಂದೇ ಕೊರೋನಾ ಕಾರಣವೊಡ್ಡಿ ಒಪ್ಪಿಗೆಯನ್ನು ಹಿಂಪಡೆದರು. ಇದಲ್ಲದೆ ರೈತರು ದೆಹಲಿಯನ್ನು ಪ್ರವೇಶಿಸದಂತೆ ಗಡಿಯಲ್ಲೇ ತಡೆದರು. ಸದ್ಯ ದೆಹಲಿಯ ಗಡಿಯಲ್ಲಿರುವ ರೈತರು ತಾವಿದ್ದ ಸ್ಥಳಗಳಲ್ಲೇ ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ. ದೇಶದ ಬೇರೆಡೆಯಲ್ಲೂ ಪ್ರತಿಭಟನೆ ನಡೆಸುವಂತೆ ಕರೆಕೊಟ್ಟಿದ್ದಾರೆ.

ನಾಳೆ(ಡಿಸೆಂಬರ್ 12) ದೇಶದ ಎಲ್ಲಾ ಟೋಲ್ ಪ್ಲಾಜಾಗಳನ್ನು ಬಂದ್ ಮಾಡಿ ಮುಷ್ಕರ ನಡೆಸಲು ತೀರ್ಮಾನಿಸಲಾಗಿದೆ. ಇದಾದ ಬಳಿಕ ಡಿಸೆಂಬರ್ 14ರಂದು ದೇಶದ ಜಿಲ್ಲಾ ಕೇಂದ್ರಗಳಲ್ಲಿ ಶಾಂತಯುತವಾದ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ. ಸದ್ಯ ಪಂಜಾಬ್, ಹರಿಯಾಣಗಳಿಂದ ದೆಹಲಿಗೆ ಬರುವ ರಸ್ತೆಗಳನ್ನು ಬಂದ್ ಮಾಡಲಾಗಿದ್ದು ಮುಂದೆ ಉತ್ತರ ಪ್ರದೇಶ ಹಾಗೂ ರಾಜಸ್ಥಾನಗಳಿಂದ ದೆಹಲಿಗೆ ಬರಬಹುದಾದ ರಸ್ತೆಗಳನ್ನೂ ಬಂದ್ ಮಾಡಲು ನಿರ್ಧರಿಸಲಾಗಿದೆ.

ಇದಲ್ಲದೆ ದೇಶದೆಲ್ಲೆಡೆ ಬಿಜೆಪಿ ನಾಯಕರಿಗೆ ಘೆರಾವ್ ಹಾಕುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಒಗ್ಗಟ್ಟು ಕಾಯ್ದುಕೊಂಡು ಒತ್ತಡ ಹೇರುವ ದೃಷ್ಟಿಯಿಂದ ಎಲ್ಲಾ ಪ್ರತಿಭಟನೆಗಳನ್ನೂ ದೆಹಲಿ ಚಲೋ ಹೆಸರಿನಲ್ಲೇ ನಡೆಸಲು ರೈತ ಸಂಘಟನೆಗಳು ಒಮ್ಮತದ ನಿರ್ಧಾರ ಮಾಡಿವೆ‌.

ರೈತರಿಗೆ ಮಾರಕವಾಗಿರುವ ಕೃಷಿ ಕಾಯ್ದೆಗಳನ್ನು ರದ್ದುಪಡಿಸುವಂತೆ ಒತ್ತಾಯಿಸಿ ದೆಹಲಿಯ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತ ಸಂಘಟನೆಗಳು ಕೇಂದ್ರ ಸರ್ಕಾರವು ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ದೇಶದಾದ್ಯಂತ ರೈಲು ಸಂಚಾರಕ್ಕೆ ಅಡ್ಡಿ ಮಾಡುವುದಾಗಿ ಹೇಳಿವೆ. ರೈಲು ಹಳಿಗಳನ್ನು ಬಂದ್ ಮಾಡುವ ಬಗ್ಗೆ ಶೀಘ್ರದಲ್ಲೇ ದಿನಾಂಕವನ್ನು ಪ್ರಕಟಿಸುವುದಾಗಿ ಕೂಡ ತಿಳಿಸಿವೆ.

Comments are closed.