ರಾಷ್ಟ್ರೀಯ

ಆಂಧ್ರದಲ್ಲಿ ಕಾಣಿಸಿಕೊಂಡಿದ್ದ ನಿಗೂಢ ಕಾಯಿಲೆಗೆ ಕಾರಣ ಪತ್ತೆ

Pinterest LinkedIn Tumblr


ಏಲೂರು: ಆಂಧ್ರಪ್ರದೇಶದ ಏಲೂರು ನಗರದಲ್ಲಿ ಕಾಣಿಸಿಕೊಂಡಿರುವ ನಿಗೂಢ ಕಾಯಿಲೆಗೆ ಕುಡಿಯುವ ನೀರು ಹಾಗೂ ಹಾಲಿನಲ್ಲಿರುವ ಸೀಸ ಹಾಗೂ ನಿಕಲ್‌ ಅಂಶ ಕಾರಣ ಎಂದು ಪ್ರಾಥಮಿಕ ಪರಿಶೀಲನೆ ವೇಳೆ ಕಂಡುಬಂದಿದೆ.

ಈ ನಿಗೂಢ ಕಾಯಿಲೆಗೆ ಇಲ್ಲಿಯವರೆಗೂ ಒಬ್ಬರು ಮೃತಪಟ್ಟಿದ್ದು 500ಕ್ಕೂ ಅಧಿಕ ಜನರು ಅಸ್ವಸ್ಥಗೊಂಡಿದ್ದಾರೆ. ಏಮ್ಸ್‌, ರಾಜ್ಯ ಹಾಗೂ ಕೇಂದ್ರದ ಇತರೆ ಸಂಸ್ಥೆಗಳ ತಜ್ಞರ ತಂಡವು ನಡೆಸಿದ ಪ್ರಾಥಮಿಕ ತನಿಖೆಯ ವರದಿಯನ್ನು ಆಧರಿಸಿ, ಆರೋಗ್ಯ ಇಲಾಖೆ ಅಧಿಕಾರಿಗಳು ಮುಖ್ಯಮಂತ್ರಿ ವೈ.ಎಸ್‌.ಜಗನ್‌ಮೋಹನ್‌ ರೆಡ್ಡಿ ಅವರಿಗೆ ಮಂಗಳವಾರ ವರದಿ ಸಲ್ಲಿಸಿದರು.

‘ನಿಗೂಢ ಕಾಯಿಲೆಗೆ ಸೀಸ ಹಾಗೂ ನಿಕಲ್‌ ಅಂಶವೇ ಕಾರಣ ಎಂದು ತಿಳಿದುಬಂದಿದೆ’ ಎಂದು ಮುಖ್ಯಮಂತ್ರಿ ಕಚೇರಿ ತಿಳಿಸಿದೆ.

ಕಳೆದ ಶನಿವಾರ ರಾತ್ರಿಯಿಂದ ಜನರು ಏಕಾಏಕಿ ತಲೆಸುತ್ತಿ ಬೀಳುತ್ತಿದ್ದು, ಕೆಲ ನಿಮಿಷಗಳ ಕಾಲ ಮರೆವು, ವಾಂತಿ, ತೆಲನೋವು, ಬೆನ್ನುನೋವಿನಿಂದ ಬಳುತ್ತಿದ್ದಾರೆ. ‘ರೋಗಿಗಳ ದೇಹದಲ್ಲಿರುವ ಲೋಹದ ಅಂಶದ ಪರಿಶೀಲನೆ ನಡೆಸಿ, ಚಿಕಿತ್ಸೆಯ ಮೇಲೆ ನಿಗಾವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸೂಚಿಸಿದ್ದಾರೆ’ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಅಧಿಕಾರಿಗಳ ಮಾಹಿತಿಯಂತೆ 505 ಜನರು ಅಸ್ವಸ್ಥರಾಗಿದ್ದು, ಈ ಪೈಕಿ 370 ಜನರು ಗುಣಮುಖರಾಗಿದ್ದಾರೆ. 120 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 19 ಜನರನ್ನು ಹೆಚ್ಚಿನ ಚಿಕಿತ್ಸೆಗಾಗಿ ವಿಜಯವಾಡ ಹಾಗೂ ಗುಂಟೂರಿನಲ್ಲಿರುವ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ತಜ್ಞರು ಸೇರಿದಂತೆ ಕೇಂದ್ರ ಆರೋಗ್ಯ ಇಲಾಖೆಯು ಮೂವರು ಸದಸ್ಯರನ್ನೊಳಗೊಂಡ ತಂಡವು ಏಲೂರಿಗೆ ಮಂಗಳವಾರ ಭೇಟಿ ನೀಡಿದ್ದು, ನೀರಿನ ಮಾದರಿಯನ್ನು ಸಂಗ್ರಹಿಸಿದೆ.

‘ಕೇಂದ್ರದ ತಂಡಗಳು ಪರಿಶೀಲನೆ ನಡೆಸಿ ವರದಿಯನ್ನು ನೀಡಿದ ಬಳಿಕವಷ್ಟೇ ಕಾಯಿಲೆಗೆ ನಿಖರ ಕಾರಣ ಏನೆಂದು ಹೇಳಬಹುದಾಗಿದೆ. ಪ್ರಾಥಮಿಕ ಮಾಹಿತಿಯಂತೆ ಸೀಸದ ಅಂಶವು ಜನರು ಅಸ್ವಸ್ಥರಾಗಲು ಕಾರಣ ಎಂದು ತಿಳಿದುಬಂದಿದೆ. ಕಾಯಿಲೆಗೆ ಒಳಗಾದ ಜನರು ಚೇತರಿಸಿಕೊಳ್ಳುತ್ತಿದ್ದು, ಜನರು ಹೆದರಬೇಕಾಗಿಲ್ಲ’ ಎಂದು ಉಪಮುಖ್ಯಮಂತ್ರಿ ಎ.ಕೆ.ಕೆ.ಶ್ರೀನಿವಾಸ್‌ ಹೇಳಿದರು.

Comments are closed.