ಅಮರಾವತಿ: ಭಾರತಕ್ಕೆ ಕೊರೋನಾ ಬಂದು 9 ತಿಂಗಳಿಗೂ ಅಧಿಕವಾಗಿದೆ. ಸೋಂಕಿನ ದೊಡ್ಡ ಅಲೆಯನ್ನು ಕಂಡ ದೇಶ ಇದೀಗ ಕೊಂಚ ಸುಧಾರಿಸಿಕೊಳ್ಳಲಾರಂಭಿಸಿದೆ. ಇದೇ ಬೆನ್ನಲ್ಲೇ ಮತ್ತೊಂದು ರೋಗ ದೇಶಕ್ಕೆ ಬಂದಿರುವ ಲಕ್ಷಣಗಳು ಕಾಣಿಸಿಕೊಳ್ಳಲಾರಂಭಿಸಿವೆ. ಆಂಧ್ರಪ್ರದೇಶದಲ್ಲಿ ನಿಗೂಢ ರೋಗವೊಂದು ಕಾಣಿಸಿಕೊಂಡಿದ್ದು, ಮೊದಲನೇ ಬಲಿಯೂ ಆಗಿ ಹೋಗಿದೆ.
ಆಂಧ್ರದ ಎಲೂರು ಪ್ರದೇಶದ ನಾಲ್ಕು ಸ್ಥಳಗಳ 45 ಜನರು ಶನಿವಾರ ವಿಚಿತ್ರ ಕಾಯಿಲೆಯಿಂದ ಆಸ್ಪತ್ರೆ ಸೇರಿದ್ದಾರೆ. ಈವರೆಗೆ 46 ಮಕ್ಕಳು, 70 ಮಹಿಳೆಯರು ಸೇರಿ ಸುಮಾರು 300 ಜನರು ಆಸ್ಪತ್ರೆಗೆ ಸೇರಿರುವುದಾಗಿ ವರದಿಯಾಗಿದೆ. ಎಲೂರಿನ ಸರ್ಕಾರ ಆಸ್ಪತ್ರೆಯಲ್ಲಿ ನಿಗೂಢ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದಾನೆ.
ನಿಗೂಢ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಲ್ಲಿ ಹಠಾತ್ ಪ್ರಜ್ಞೆ ಕಳೆದುಕೊಳ್ಳುವುದು, ನರಳುವಿಕೆ ಮತ್ತು ನಡುಗುವಿಕೆ ಲಕ್ಷಣ ಕಾಣಿಸಿಕೊಂಡಿದೆ. ಜಲ ಮಾಲಿನ್ಯ ಅಥವಾ ಆಹಾರದ ತೊಂದರೆಯಿಂದ ಈ ಸಮಸ್ಯೆ ಆಗಿರಬಹುದು ಎನ್ನುವ ಅನುಮಾನವನ್ನು ಸ್ಥಳೀಯ ಆರೋಗ್ಯ ಅಧಿಕಾರಿಗಳು ತಳ್ಳಿ ಹಾಕಿದ್ದಾರೆ. ಅದೇ ಹಿನ್ನೆಲೆಯಲ್ಲಿ ದೆಹಲಿಯ ಏಮ್ಸ್ನ ತಜ್ಞರ ತಂಡವು ರೋಗದ ಮೂಲ ಪತ್ತೆಗೆ ಮುಂದಾಗಿದೆ. ರೋಗಿಗಳ ಸೆರೆಬ್ರಲ್-ಬೆನ್ನುಮೂಳೆಯ ದ್ರವ ಮಾದರಿಯನ್ನು ವಿಜಯವಾಡ ಮತ್ತು ವಿಶಾಖಪಟ್ಟಣಂನ ಪ್ರಯೋಗಾಲಯಗಳಿಗೆ ಕಳುಹಿಸಲಾಗಿದೆ. ಇದರ ವರದಿ ಬಂದ ನಂತರ ನಿಖರ ಕಾರಣ ಕಂಡುಕೊಳ್ಳಬಹುದು ಎನ್ನಲಾಗಿದೆ.