
ಮೇಘಾಲಯ; ಹಿಂದೂಗಳು ಕ್ರೈಸ್ತರ ಹಬ್ಬದಲ್ಲಿ ಭಾಗವಹಿಸಿದರೆ, ಚರ್ಚುಗಳಿಗೆ ಭೇಟಿ ನೀಡಿದರೆ ಅವರ ಮೇಲೆ ಹಲ್ಲೆ ನಡೆಸಲಾಗುವುದು ಎಂದು ಅಸ್ಸಾಂನ ಕ್ಯಾಚಾರ್ ಜಿಲ್ಲೆಯಲ್ಲಿ ಬಜರಂಗದಳದ ಮುಖಂಡನೊಬ್ಬ ಬಹಿರಂಗವಾಗಿ ಘೋಷಿಸಿದ್ದಾನೆ.
ಬಲಪಂಥೀಯ ಬಜರಂಗದಳ ಸಂಘಟನೆಯ ಮುಖಂಡನ ಈ ಹೇಳಿಕೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದ್ದು, ಈ ಹೇಳಿಕೆ ವಿರುದ್ಧ ಆಕ್ರೋಶವೂ ವ್ಯಕ್ತವಾಗಿದೆ. ಹೇಳಿಕೆ ನೀಡಿರುವ ವ್ಯಕ್ತಿಯನ್ನು ವಿಶ್ವ ಹಿಂದೂ ಪರಿಷತ್-ಬಜರಂಗದಳದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮಿಥುನಾಥ್ ಎಂದು ಗುರುತಿಸಲಾಗಿದೆ.
ಭಾಷಣದ ವೇಳೆ ಕ್ರೈಸ್ತರು ಬಹುಸಂಖ್ಯಾತರಾಗಿರುವ ಮೇಘಾಲಯದ ರಾಜಧಾನಿ ಶಿಲ್ಲಾಂಗ್‌ನಲ್ಲಿ ರಾಮಕೃಷ್ಣ ಮಠದ ವಿವೇಕಾನಂದ ಕೇಂದ್ರವು ಸ್ಥಗಿತಗೊಂಡಿದೆ ಎಂದು ಆರೋಪಿಸಿರುವ ಮಿಥುನಾಥ್, “ಹಿಂದೂಗಳು ಕ್ರಿಸ್‌ಮಸ್ ದಿನದ ಕಾರ್ಯಕ್ರಮ ಮತ್ತು ಹಬ್ಬಕ್ಕೆ ಹಾಜರಾಗಲು ಅನುಮತಿ ನೀಡುವುದಿಲ್ಲ. ಒಂದು ವೇಳೆ ಹಾಜರಾದರೆ ನಮ್ಮ ಕಾರ್ಯಕರ್ತರು ಹಲ್ಲೆ ನಡೆಸಲಿದ್ದಾರೆ” ಎಂದು ಎಚ್ಚರಿಕೆ ನೀಡಿದ್ದಾರೆ.
“ನಮ್ಮ ಮಾತನ್ನು ಉಲ್ಲಂಘಿಸಿ ಚರ್ಚುಗಳಿಗೆ ಭೇಟಿ ನೀಡುವ ಹಿಂದೂಗಳ ಮೇಲೆ ನಾವು ಹಲ್ಲೆ ನಡೆಸುತ್ತೇವೆ. ಏಕೆಂದರೆ ನಮ್ಮ ಪೂಜಾ ಸ್ಥಳಗಳನ್ನು ಮುಚ್ಚಿದ ನಂತರ ಕ್ರಿಶ್ಚಿಯನ್ ಸಮಾರಂಭವೊಂದರಲ್ಲಿ ಹೋಗಿ ಮೋಜು ಮಾಡುವ ಹಿಂದೂಗಳನ್ನು ನಾನು ನಿಂದಿಸುತ್ತೇನೆ. ಈ ಕ್ರಿಸ್‌ಮಸ್‌ನಲ್ಲಿ ಯಾವುದೇ ಹಿಂದೂಗಳು ಚರ್ಚ್‌ಗೆ ಹೋಗುವುದಿಲ್ಲ. ನಾವು ಅದನ್ನು ಖಚಿತಪಡಿಸಿಕೊಳ್ಳುತ್ತೇವೆ” ಎಂದು ಮಿಥುನಾಥ್ ವೀಡಿಯೊದಲ್ಲಿ ಹೇಳಿದ್ದಾರೆ.
“ನಾವು ಹಿಂದೂಗಳ ಮೇಲೆ ಹಲ್ಲೆ ಮಾಡಿದರೆ ಮರುದಿನ ಪತ್ರಿಕೆಗಳಲ್ಲಿ ಗೂಂಡಾದಳವು ಓರಿಯೆಂಟಲ್ ಶಾಲೆಯನ್ನು ಧ್ವಂಸ ಮಾಡಿದೆ ಎಂದು ಸುದ್ದಿಯಾಗುತ್ತದೆ. ಆದರೆ, ಇದಕ್ಕೆಲ್ಲ ನಾನು ತೆಲೆಕೆಡಿಸಿಕೊಳ್ಳುವುದಿಲ್ಲ. ಶಿಲ್ಲಾಂಗ್‌ನಲ್ಲಿ ದೇವಾಲಯದ ಗೇಟುಗಳಿಗೆ ಅವರು ಬೀಗ ಹಾಕಿ, ಕ್ರಿಸ್‌ಮಸ್ ಕಾರ್ಯಕ್ರಮದಲ್ಲಿ ಹಿಂದೂಗಳು ಭಾಗವಹಿಸುವುದನ್ನು ಅನುಮತಿಸುವುದಿಲ್ಲ” ಎಂದು ಹೇಳಿದ್ದಾರೆ.
Comments are closed.