ನವದೆಹಲಿ; ಕೇಂದ್ರ ಸರ್ಕಾರದ ನೂತನ ಮೂರು ಕೃಷಿ ಕಾಯ್ದೆಯನ್ನು ವಿರೋಧಿಸಿ ದೇಶದ ರೈತರು ಕಳೆದು 8 ದಿನಗಳಿಂದ ದೆಹಲಿಯಲ್ಲಿ ಸತತ ಹೋರಾಟದಲ್ಲಿ ನಿರತರಾಗಿದ್ದಾರೆ. ಕಳೆದ ಮಂಗಳವಾರ ರೈತರನ್ನು ಮೊದಲ ಬಾರಿಗೆ ಮಾತುಕತೆಗೆ ಕರೆದಿದ್ದ ಸರ್ಕಾರ ಇಂದು ನಾಲ್ಕನೇ ಬಾರಿಗೆ ಮಾತುಕತೆಗೆ ಕರೆದಿತ್ತು. ಆದರೆ, ಮೂವರು ಕೇಂದ್ರ ಸಚಿವರೊಂದಿಗಿನ ಇಂದಿನ ರೈತ ಮುಖಂಡರ ಮಹತ್ವದ ಸಭೆಯಲ್ಲಿ ರೈತರು ಮತ್ತೊಮ್ಮೆ ಸ್ವಾಭಿಮಾನ ಮೆರೆಯುವ ಮೂಲಕ ದೇಶದಾದ್ಯಂತ ಸುದ್ದಿಯಾಗುತ್ತಿದ್ದಾರೆ. ಸಭೆಯ ವೇಳೆ ಮಧ್ಯಾಹ್ನದ ಊಟದ ಬಿಡುವಿನಲ್ಲಿ ರೈತ ಮುಖಂಡರಿಗೆ ಸರ್ಕಾರದ ವತಿಯಿಂದ ಊಟದ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಸರ್ಕಾರದ ಆತಿಥ್ಯವನ್ನು ತಿರಸ್ಕರಿಸಿರುವ ರೈತರು, ತಾವೇ ತಂದಿದ್ದ ಊಟವನ್ನು ನೆಲದಲ ಮೇಲೆ ಕೂತು ಊಟ ಮಾಡುವ ಮೂಲಕ ಸರ್ಕಾರದ ಹಂಗು ನಮಗೆ ಬೇಡ ಎಂಬ ಸಂದೇಶವನ್ನು ರವಾನಿಸಿದ್ದಾರೆ. ಈ ಮೂಲಕ ಪ್ರಶಂಶೆಗೆ ಪಾತ್ರರಾಗಿದ್ದಾರೆ.
ಸಚಿವರೊಂದಿಗೆ ಸಭೆಯ ನಂತರ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ರೈತ ಮುಖಂಡರು, “ನಾವು ಸರ್ಕಾರ ಒದಗಿಸಿದ ಊಟವನ್ನು ತಿರಸ್ಕರಿಸಿ ನಾವೇ ತಂದಿದ್ದ ಊಟವನ್ನು ಮಾಡಿದ್ದೇವೆ. ಸರ್ಕಾರದ ವತಿಯಿಂದ ಒದಗಿಸಲಾದ ಟೀ ಸಹ ನಾವು ನಿರಾಕರಿಸಿದ್ದೇವೆ” ಎಂದು ಸ್ಪಷ್ಟಪಡಿಸಿದ್ದಾರೆ.
ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ದೆಹಲಿಯ ಗಡಿಗಳಲ್ಲಿ ರೈತರು ನಡೆಸುತ್ತಿರುವ ಹೋರಾಟ 8 ನೇ ದಿನಕ್ಕೆ ಕಾಲಿಟ್ಟಿದೆ. ಕೇಂದ್ರ ಸಚಿವರು ಇಂದು ನಾಲ್ಕನೆ ಬಾರಿಗೆ ರೈತರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರವು ಕೃಷಿ ಕಾಯ್ದೆಗಳನ್ನು ಉಳಿಸಿಕೊಂಡು ಕನಿಷ್ಟ ಬೆಂಬಲ ನೀಡುವುದಾಗಿ ರೈತರಿಗೆ ಲಿಖಿತ ಭರವಸೆ ನೀಡಲು ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.
ಆದರೆ ರೈತ ಸಂಘಟನೆಗಳ ಮುಖಂಡರು 3 ಕೃಷಿ ಕಾಯ್ದೆಗಳನ್ನು ಬೇಷರತ್ತಾಗಿ ಹಿಂಪಡೆಯಬೇಕು, ಅದಕ್ಕಾಗಿ ವಿಶೇಷ ಸಂಸತ್ ಅಧಿವೇಶನ ಕರೆಯಬೇಕೆಂದು ತಾಕೀತು ಮಾಡಿದ್ದಾರೆ. ಡಿಸೆಂಬರ್ 03 ರ ಅಂತಿಮ ಅವಕಾಶವಾಗಿದ್ದು ಸರ್ಕಾರ ರೈತರ ಬೇಡಿಕೆಗೆ ಒಪ್ಪದಿದ್ದಲ್ಲಿ ದೆಹಲಿಗೆ ಬರುವ ಎಲ್ಲಾ ರಸ್ತೆಗಳನ್ನು ಮುಚ್ಚುವ ಮೂಲಕ ಹೋರಾಟ ತೀವ್ರಗೊಳಿಸುವುದಾಗಿ ರೈತರು ಎಚ್ಚರಿಕೆ ನೀಡಿದ್ದಾರೆ.
ಕೇಂದ್ರ ಸರ್ಕಾರದ ಪರವಾಗಿ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ಕ್ಯಾಬಿನೆಟ್ ಸಚಿವ ಪಿಯೂಶ್ ಗೋಯಲ್ ಮತ್ತು ಸೋಮ್ ಪ್ರಕಾಶ್ ಸಭೆಯಲ್ಲಿ ಭಾಗವಹಿಸಿದ್ದಾರೆ. 30 ಕ್ಕೂ ಹೆಚ್ಚು ರೈತ ಸಂಘಟನೆಗಳ ಮುಖಂಡರು ಮಾತುಕತೆಯಲ್ಲಿ ತೊಡಗಿದ್ದರು ಎಂದು ತಿಳಿದುಬಂದಿದೆ.
ಇನ್ನೂ ಈ ಮುಂಚೆಯೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಜೊತೆಗೆನ ಮಾತುಕತೆ ವೇಳೆ ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್, “ಪಂಜಾಬ್ ಸರ್ಕಾರಕ್ಕೂ ಈ ಕೃಷಿ ಕಾನೂನಿನ ವಿರುದ್ಧ ಅಸಮಾಧಾನ ಇದೆ. ಈ ಹಿಂದೆಯೂ ಅದನ್ನು ಸ್ಪಷ್ಟಪಡಿಸಿದ್ದೇವೆ. ಆದರೆ, ಇದು ರೈತ ಹೋರಾಟ. ಕೇಂದ್ರ ಸರ್ಕಾರ ಮತ್ತು ರೈತರ ನಡುವಿನ ವ್ಯಾಜ್ಯ. ಇದನ್ನು ಕೇಂದ್ರ ಸರ್ಕಾರ ಪರಿಹರಿಸಬೇಕು. ಅಲ್ಲದೆ, ಈ ಹೋರಾಟಕ್ಕೂ ತಮ್ಮ ಸರ್ಕಾರಕ್ಕೂ ಯಾವುದೇ ನಂಟು ಇಲ್ಲ” ಎಂದು ಸ್ಪಷ್ಟೀಕರಣ ನೀಡಿದ್ದರು.