ರಾಷ್ಟ್ರೀಯ

ಮದರಸಾದಲ್ಲಿ 12 ವರ್ಷದ ಬಾಲಕನನ್ನು ಕಟ್ಟಿ ಹಾಕಿ ಚಿತ್ರಹಿಂಸೆ!

Pinterest LinkedIn Tumblr


ಲಖನೌ: ಮದರಸಾದೊಳಗೆ ಮುಸ್ಲಿಂ ಬಾಲಕನೊಬ್ಬನನ್ನು ಕಟ್ಟಿ ಹಾಕಿ ಚಿತ್ರಹಿಂಸೆ ನೀಡಿರುವ ಘಟನೆ ಉತ್ತರ ಪ್ರದೇಶದ ಪಿಲಿಭಿತ್​ ನಗರದಲ್ಲಿ ನಡೆದಿದೆ.

ನಗರದ ಜಹಾನಾಬಾದ್ ಪ್ರದೇಶದ ಅಲ್ಜಾಮಿಯಾ ತುಲ್ ಮದರಸಾದಲ್ಲಿ ಇಂತದ್ದೊಂದು ಘಟನೆ ನಡೆದಿದೆ. ಒಂದೆರೆಡು ತಿಂಗಳ ಹಿಂದೆ ಪೋಷಕರೊಬ್ಬರು ತಮ್ಮ 12 ವರ್ಷದ ಮಗನನ್ನು ಈ ಮದರಸಾಕ್ಕೆ ಸೇರಿಸಿದ್ದರು. ನನಗೆ ಇಲ್ಲಿರಲು ಇಷ್ಟವಿಲ್ಲವೆಂದು ಮಗ ಎಷ್ಟೇ ಬೇಡಿಕೊಂಡರೂ ಕೇಳದ ತಂದೆ ಆತನನ್ನು ಅಲ್ಲೇ ಬಿಟ್ಟು ತೆರಳಿದ್ದರು. ಮದರಸಾಕ್ಕೆ ದಾಖಲಾಗಿ ಕೆಲವೇ ದಿನದಲ್ಲಿ ಅಲ್ಲಿಂದ ಓಡಿ ಹೋಗುವ ಪ್ರಯತ್ನವನ್ನು ಬಾಲಕ ಮಾಡಿದ್ದಾನೆ. ಅದೇ ಕಾರಣಕ್ಕಾಗಿ ಬಾಲಕನನ್ನು ಮೆಟಲ್​ ಚೈನ್​ನಿಂದ ಕಟ್ಟಿ ಹಾಕಲಾಗಿದೆ. ತಪ್ಪು ಮಾಡಿದ್ದಕ್ಕಾಗಿ ಆತನ ಮೇಲೆ ಹಲ್ಲೆ ಮಾಡಲಾಗಿದೆ.

ಹಲ್ಲೆಯಿಂದ ಭಯಗೊಂಡಿದ್ದ ಬಾಲಕ ನವೆಂಬರ್​ 25ರಂದು ಮತ್ತೊಮ್ಮೆ ತಪ್ಪಿಸಿಕೊಂಡು ಮದರಸಾದಿಂದ ಹೊರಗೆ ಬಂದಿದ್ದಾನೆ. ದಾರಿಯಲ್ಲಿ ಓಡಿ ಹೊರಟಿದ್ದ ಬಾಲಕನನ್ನು ಅಲ್ಲಿನ ಸಿಬ್ಬಂದಿಗಳು ಕಷ್ಟ ಪಟ್ಟು ಹಿಡಿದಿದ್ದಾರೆ. ಆದರೆ ಈ ವೇಳೆ ಬಾಲಕ ಸಹಾಯಕ್ಕಾಗಿ ಕೂಗಿದ್ದರಿಂದಾಗಿ ಜನರು ಸೇರಿದ್ದು, ಸ್ಥಳಕ್ಕೆ ಪೊಲೀಸರನ್ನು ಕರೆಸಲಾಗಿದೆ.
ನವೆಂಬರ್​ 27ರಂದು ಮಕ್ಕಳ ಕಲ್ಯಾಣ ಸಮಿತಿಯು ಬಾಲಕನ ಹೇಳಿಕೆಯನ್ನು ದಾಖಲಿಸಿದೆ. ತನ್ನಂತೆ ಒಟ್ಟು ಏಳು ಬಾಲಕರ ಮೇಲೆ ಈ ರೀತಿ ಹಿಂಸೆ ಮಾಡಲಾಗುತ್ತಿದೆ ಎಂದು ಬಾಲಕ ಹೇಳಿದ್ದಾನೆ. ಆದರೆ ಇದರ ಮಧ್ಯೆ ತನಿಖೆ ಆರಂಭಿಸಿದ ಜಿಲ್ಲಾ ಅಲ್ಪಸಂಖ್ಯಾತ ಕಲ್ಯಾಣ ಅಧಿಕಾರಿ ಮೊಹಮ್ಮದ್​ ಖಾಲಿದ್​, ಬಾಲಕ ಸುಳ್ಳು ಹೇಳಿದ್ದಾನೆ ಎಂದು ದಾಖಲಿಸಿದ್ದು, ಮದರಸಾದ ಮೇಲಿದ್ದ ಆರೋಪವನ್ನು ತೆಗೆದುಹಾಕಿದ್ದಾರೆ.

ಘಟನೆಯ ಸೂಕ್ಷ್ಮತೆಯನ್ನು ಅರಿತ ಜಿಲ್ಲಾಧಿಕಾರಿ ಪುಲ್ಕಿತ್ ಶ್ರೀವಾಸ್ತವ್, ಮೊಹಮ್ಮದ್​ ಖಾಲಿದ್​ ಅವರ ವರದಿಯನ್ನು ಪ್ರಶ್ನಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ದೂರು ಸಲ್ಲಿಸಲು ಏಕೆ ವಿಳಂಬವಾಗಿದೆ ಎಂದು ವಿವರಿಸಲು ಸಿಡಬ್ಲ್ಯೂಸಿಯನ್ನು ಕೇಳಿದ್ದಾರೆ. ಜಿಲ್ಲಾಧಿಕಾರಿಯ ಆದೇಶದ ಮೇರೆಗೆ ಮದರಸಾದ ಮೇಲ್ವಿಚಾರಕರು, ಬಾಲಕನ ತಂದೆ ಮತ್ತು ಓರ್ವ ಶಿಕ್ಷಕನ ಮೇಲೆ ದೂರು ದಾಖಲಿಸಲಾಗಿದೆ.

Comments are closed.