ರಾಷ್ಟ್ರೀಯ

ಮದುವೆಯಾಗಲು ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮುಸ್ಲಿಂ ಯುವಕ: ಯುವತಿಯ ಕುಟುಂಬದಿಂದ ದಂಪತಿಗೆ ಜೀವ ಬೆದರಿಕೆ; ಪೊಲೀಸ್ ರಕ್ಷಣೆ

Pinterest LinkedIn Tumblr


ಹರಿಯಾಣ: ಹಿಂದೂ ಯುವತಿಯನ್ನು ವಿವಾಹವಾಗಲು ಮುಸ್ಲಿಂ ಯುವಕನೊಬ್ಬ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದು, ದಂಪತಿಗೆ ಜೀವ ಬೆದರಿಕೆಯ ಕಾರಣಕ್ಕಾಗಿ ಪೊಲೀಸ್ ರಕ್ಷಣೆ ಒದಗಿಸಲಾಗಿದೆ.

‘ತನ್ನ ಹೆಸರು ಬದಲಿಸಿಕೊಂಡಿರುವ 21 ವರ್ಷದ ಯುವಕ ಮದುವೆಗೂ ಮುನ್ನ ಮತಾಂತರಗೊಂಡಿದ್ದು, ನವೆಂಬರ್ 9ರಂದು ಹಿಂದೂ ಸಂಪ್ರದಾಯದಂತೆ 19 ವರ್ಷದ ಯುವತಿಯನ್ನು ವಿವಾಹವಾಗಿದ್ದಾನೆ’ ಎಂದು ಯಮುನಾನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಮಲ್‌ದೀಪ್ ಗೋಯೆಲ್ ಮಂಗಳವಾರ ಮಾಹಿತಿ ನೀಡಿದ್ದಾರೆ.

ಯುವತಿಯ ಕುಟುಂಬದಿಂದ ತಮ್ಮ ಜೀವಕ್ಕೆ ಮತ್ತು ವೈಯಕ್ತಿಕ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟಾಗುತ್ತದೆ ಎನ್ನುವ ಭಯದಿಂದ ದಂಪತಿ ಹೈಕೋರ್ಟ್ ಮೊರೆ ಹೋಗಿದ್ದರು. ಯುವತಿಯ ಕುಟುಂಬದವರು ನಮ್ಮ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದು, ಸಂವಿಧಾನದ 21ನೇ ಪರಿಚ್ಛೇದದ ಅಡಿ ನೀಡಲಾಗಿರುವ ಹಕ್ಕುಗಳ ದುರುಪಯೋಗವಾಗಿದೆ ಎಂದೂ ದಂಪತಿ ದೂರು ಸಲ್ಲಿಸಿದ್ದಾರೆ.

ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ಗಳ ಮಧ್ಯಪ್ರವೇಶದಿಂದಾಗಿ ಪೊಲೀಸರು ದಂಪತಿಗೆ ಮನೆಯೊಂದರಲ್ಲಿ ಇರಿಸಿ ರಕ್ಷಣೆ ನೀಡಿದ್ದಾರೆ.

‘ಯುವತಿಯ ಕುಟುಂಬವನ್ನು ಭೇಟಿ ಮಾಡಿದ್ದ ಪೊಲೀಸರು, ಯುವಕ-ಯುವತಿ ಕಾನೂನುಬದ್ಧವಾಗಿಯೇ ವಿವಾಹವಾಗಿದ್ದಾರೆ. ಅವರಿಚ್ಛೆಯಂತೆಯೇ ಅವರಿಗೆ ಒಟ್ಟಾಗಿ ಬಾಳಲು ಅವಕಾಶ ಮಾಡಿಕೊಡಬೇಕು ಎಂದು ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದ್ದರು. ಪ್ರಕರಣದ ವಿಚಾರಣೆ ವೇಳೆ ಯುವತಿ ತನ್ನ ಕುಟುಂಬವನ್ನು ಭೇಟಿ ಮಾಡಲು ಮೊದಲು ನಿರಾಕರಿಸಿದ್ದಳು. ಆದರೆ, ನವೆಂಬರ್ 11ರಂದು ಕುಟುಂಬವನ್ನು ಒಮ್ಮೆ ಭೇಟಿ ಮಾಡುವುದಾಗಿ ಹೇಳಿದ್ದಳು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಾಹಿತಿ ನೀಡಿದ್ದಾರೆ.

ವಿವಾಹದ ನೆಪದಲ್ಲಿ ಮತಾಂತರವಾಗುವುದನ್ನು (ಲವ್ ಜಿಹಾದ್) ತಪ್ಪಿಸುವ ಸಲುವಾಗಿ ಈಚೆಗಷ್ಟೇ ಹರಿಯಾಣ ರಾಜ್ಯ ಸರ್ಕಾರ ಕಾನೂನು ರೂಪಿಸಲು ಮೂರು ಸದಸ್ಯರ ಸಮಿತಿಯೊಂದನ್ನು ರಚಿಸಿದೆ ಎಂದು ಗೃಹಸಚಿವ ಅನಿಲ್ ವಿಜಾ ಕಳೆದ ವಾರವಷ್ಟೇ ಹೇಳಿಕೆ ನೀಡಿದ್ದರು.

Comments are closed.