
ಅನಂತಪುರ: ಮದುವೆಗೆ ಪೋಷಕರು ಒಪ್ಪದಿದ್ದಕ್ಕೆ ಒಟ್ಟಿಗೆ ಆತ್ಮಹತ್ಯೆ ಮಾಡಿಕೊಳ್ಳಲು ನಿರಾಕರಿಸಿದ ಪ್ರೇಯಸಿಯನ್ನು ಅನಂತಪುರದ ಯುವಕನೊಬ್ಬ ಹತ್ಯೆ ಮಾಡಿ, ಪೊಲೀಸರ ವಶವಾಗಿದ್ದಾನೆ.
ಒಂದೇ ಪಟ್ಟಣದಲ್ಲಿ ವಾಸವಿದ್ದ ಶಾಹೀದಾ ಬೇಗಂ ಮತ್ತು ರಘು ಕಳೆದ ಮೂರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಇಬ್ಬರ ಮದುವೆಗೆ ಪಾಲಕರು ಒಪ್ಪಿರಲಿಲ್ಲ. ಹೀಗಾಗಿ ಒಟ್ಟಿಗೆ ಆತ್ಮಹತ್ಯೆ ಮಾಡಿಕೊಳ್ಳೋಣ ಎಂದು ರಘು, ಶಾಹೀದಾಳ ಮನವೊಲಿಸಿದ್ದ.
ಆರಂಭದಲ್ಲಿ ಓಕೆ ಅಂದಿದ್ದ ಶಾಹೀದಾ ಬಳಿಕ ತನ್ನ ನಿರ್ಧಾರ ಬದಲಿಸಿದ್ದಳು. ರಘು ಕೀಟನಾಶ ಸೇವಿಸಿ ಶಾಹೀದಾಳನ್ನು ಸೇವಿಸುವಂತೆ ಒತ್ತಾಯ ಮಾಡಿದ್ದ ಆದರೆ, ಶಾಹೀದಾ ನಿರಾಕರಿಸಿದಳು. ಇದರಿಂದ ಅಸಮಾಧಾನಗೊಂಡ ರಘು ಆಕೆಯನ್ನು ಕೊಲ್ಲುವ ನಿರ್ಧಾರಕ್ಕೆ ಬಂದಿದ್ದ. ಇತ್ತ ವಿಷ ಸೇವಿಸಿದ್ದ ರಘು ಹೇಗಾದರೂ ಬದುಕಬೇಕೆಂದು ಆಸ್ಪತ್ರೆಗೆ ದಾಖಲಾಗಿ ಜೀವ ಉಳಿಸಿಕೊಂಡಿದ್ದ.
ಶಾಹೀದಾ ಮನೆಯವರು ನೋಡಿದ ಹುಡುಗನನ್ನು ಮದುವೆಯಾಗಲು ಮನಸ್ಸು ಮಾಡಿದ್ದಳು. ಆದರೆ, ರಘುಗೆ ಮಾತ್ರ ಶಾಹೀದಾಳ ಮೇಲೆ ತೀವ್ರ ಕೋಪವಿತ್ತು. ಅದನ್ನು ತೋರಿಸಿಕೊಳ್ಳದೆ ಆಕೆಯೊಂದಿಗೆ ಚೆನ್ನಾಗಿಯೇ ಇದ್ದ. ಶಾಹೀದಾಳಿಗೆ ಮದುವೆ ತಯಾರಿ ನಡೆಯುತ್ತಿರುವಾಗಲೇ ನಿನ್ನೊಂದಿಗೆ ಮಾತನಾಡಬೇಕಿದೆ ಎಂದು ರಘು ಕರೆಸಿಕೊಂಡಿದ್ದ. ನ. 17ರಂದು ರಘುವಿನ ಮೇಲೆ ನಂಬಿಕೆ ಇಟ್ಟು ಶಾಹೀದಾ ಆತನ ಬಳಿ ಬಂದಿದ್ದಳು.
ಅದಾದ ಬಳಿಕ ಶಾಹೀದಾ ಮನೆಗೆ ಮರಳದೇ ಇದ್ದದ್ದನ್ನು ಗಮನಿಸಿದ ಪಾಲಕರು ಸಾಕಷ್ಟು ಹುಡುಕಾಟದ ಬಳಿಕ ರಘುವನ್ನು ಮಗಳೆಲ್ಲಿ ಎಂದು ಪ್ರಶ್ನಿಸಿದ್ದರು. ಆದರೆ, ಆತನಿಂದ ಸಮರ್ಪಕವಾದ ಉತ್ತರ ಬರದಿದ್ದಾಗ ಆತಂಕದಿಂದಲೇ ದೂರು ದಾಖಲಿಸಿದ್ದರು. ಬಳಿಕ ಶಾಹೀದಾಳ ಮೃತದೇಹ ತುಂಬಿಗನೂರು ಬಳಿಯ ಎಚ್ಎಲ್ಸಿ ನಾಲೆ ಬಳಿ ಪತ್ತೆಯಾಗಿತ್ತು. ಇದರ ಬೆನ್ನಲ್ಲೇ ರಘು ವಿರುದ್ಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ.
Comments are closed.