ರಾಷ್ಟ್ರೀಯ

ಕಡಲತೀರದಲ್ಲಿ ತೇಲಿಬರುತ್ತಿರುವ ಚಿನ್ನದ ಮಣಿಗಳು?: ಭಾರೀ ಮಳೆ ಲೆಕ್ಕಿಸದೇ ನುಗ್ಗುತ್ತಿರುವ ಮೀನುಗಾರರು!

Pinterest LinkedIn Tumblr


ಅಮರಾವತಿ: ದೇಶದ ಹಲವು ಕಡೆ ನಿವಾರ್​ ಚಂಡಮಾರುತದಿಂದಾಗಿ ಭಾರಿ ಮಳೆ ಬರುತ್ತಿದೆ. ಆದರೆ ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಕಾಕಿನಾಡ ಕಡಲತೀರದಲ್ಲಿ ಮಳೆಯನ್ನೂ ಲೆಕ್ಕಸಿದೇ ಮೀನುಗಾರರ ದೌಡು ಬರುತ್ತಿದೆ.

ಇದಕ್ಕೆ ಕಾರಣ, ಮೀನುಗಳು ಹೆಚ್ಚಾಗಿ ಸಿಗುತ್ತವೆಯೋ ಅಥವಾ ಸಮುದ್ರತೀರದಲ್ಲಿ ಮೀನುಗಳು ಬಂದು ಬಿದ್ದಿವೆಯೋ ಅಂತಲ್ಲ, ಬದಲಿಗೆ ಚಿನ್ನದ ಮಣಿಗಳು ಕಡಲತೀರದಲ್ಲಿ ಸಿಗುತ್ತಿವೆ ಎಂದು ಸುದ್ದಿಯಿಂದ ಮೀನುಗಾರರೂ ಸೇರಿದಂತೆ ಜನರು ತಂಡೋಪತಂಡವಾಗಿ ಬರುತ್ತಿದ್ದಾರೆ. ಚಿನ್ನದ ಮಣಿಗಳನ್ನು ಹುಡುಕುತ್ತಿದ್ದಾರೆ.

ಕೊಥಪಲ್ಲಿ ಬ್ಲಾಕ್‌ನ ಉಪ್ಪಡಾ ಮತ್ತು ಸುರದಪೇಟೆ ಗ್ರಾಮಗಳಿಗೆ ಸೇರಿದ ಈ ಮೀನುಗಾರರು ಹೀಗೆ ದೌಡಾಯಿಸುತ್ತಿರಲು ಕಾರಣವೆಂದರೆ, ತೀರದಲ್ಲಿ ಧಾನ್ಯಗಳು ಮತ್ತು ಚಿನ್ನದ ಮಣಿಗಳು ಕೆಲವರಿಗೆ ಸಿಕ್ಕಿವೆ ಎಂಬ ಸುದ್ದಿ ಕೇಳಿ.

ನಿವಾರ್ ಚಂಡಮಾರುತದಿಂದ ಉಂಟಾದ ಏರಿಳಿತ ಅಲೆಗಳಿಂದಾಗಿ, ಧಾನ್ಯಗಳು ಮತ್ತು ಚಿನ್ನದ ಮಣಿಗಳನ್ನು ಇಲ್ಲಿ ಬಂದಿವೆ ಎಂಬ ಸುದ್ದಿಯಾಗಿದೆ. ಕೆಲವು ಮೀನುಗಾರರಿಗೆ ಇವು ಸಿಕ್ಕಿವೆ ಎಂದೂ ಹೇಳಲಾಗುತ್ತಿದೆ.

ಅಷ್ಟಕ್ಕೂ ಚಿನ್ನದ ಮಣಿಗಳು ಹಾಗೂ ಧಾನ್ಯಗಳು ಇಲ್ಲಿಗೆ ಬರಲು ಕಾರಣ ಹೇಳುವ ಗ್ರಾಮಸ್ಥರು, ನಿವಾರ್​ ಚಂಡಮಾರುತ ಹಾಗೂ ಕಳೆದ ತಿಂಗಳು ಬಂದ ಭಾರಿ ಮಳೆಗೆ ಕರಾವಳಿಯ ಕೆಲವು ಮನೆಗಳು ಮತ್ತು ದೇವಾಲಯಗಳು ಕೊಚ್ಚಿ ಹೋಗಿವೆಯಂತೆ. ಆದ್ದರಿಂದ ಚಿನ್ನ ಮತ್ತು ದವಸಧಾನ್ಯಗಳು ಕಡಲಕಿನಾರೆಗೆ ಬಂದು ಬೀಳುತ್ತಿವೆಯಂತೆ.

ಇದಕ್ಕೆ ಪುಷ್ಟಿ ನೀಡಲು ಎಂಬಂತೆ ಕೆಲ ದಿನಗಳ ಹಿಂದೆ ಚಿನ್ನದ ಮಣಿಗಳು ಕೆಲವರಿಗೆ ಸಿಕ್ಕಿವೆ ಎನ್ನಲಾಗಿದೆ. ಈ ಕುರಿತು ಮಾಹಿತಿ ನೀಡುವ ಕೊಥಪಲ್ಲಿ ಪೊಲೀಸ್ ಸಬ್​ಇನ್ಸ್‌ಪೆಕ್ಟರ್ ಬಿ. ಲೋವಾ ಕಳೆದ ಶುಕ್ರವಾರ ಕಡಲತೀರಕ್ಕೆ ಬಂದ ನಾಲ್ಕರಿಂದ ಐದು ಮೀನುಗಾರರು ಮರಳಿನ ಮೇಲೆ ಕೆಲವು ಚಿನ್ನದ ಮಣಿಗಳನ್ನು ಕಂಡಿದ್ದಾರೆ. ಅವರೇ ಈ ಸುದ್ದಿ ಮಾಡಿದ್ದಾರೆ ಎನ್ನುತ್ತಾರೆ.

ಮೀನುಗಾರಿಕೆಗೆ ಬಳಸುವ ಬಲೆಗಳು, ಬಾಚಣಿಗೆ ಮತ್ತು ಬಟ್ಟೆಗಳನ್ನು ಬಳಸಿ ಮರಳನ್ನು ಜರಡಿ ಹಿಡಿಯುತ್ತಿದ್ದಾರೆ. ಚಿನ್ನದ ಮಣಿ ಸಿಗದಿದ್ದರೂ ಭರವಸೆ ಕಳೆದುಕೊಳ್ಳದ ಗ್ರಾಮಸ್ಥರು ಹುಡುಕತ್ತಲೇ ಇದ್ದಾರೆ ಎನ್ನುತ್ತಾರೆ ಲೋವಾ.

‘ಹತ್ತಿರದ ಪ್ರದೇಶಗಳಲ್ಲಿನ ಯಾತ್ರಾ ಕೇಂದ್ರಗಳಿಗೆ ಬರುವ ಜನರು ಪವಿತ್ರ ಸ್ನಾನ ಮಾಡುವಾಗ, ಸಮುದ್ರದಲ್ಲಿ ಕೆಲವು ಸಣ್ಣ ಚಿನ್ನದ ತುಂಡುಗಳನ್ನು ಬಿಡುವುದು ಸಾಮಾನ್ಯವಾಗಿದೆ. ಇತ್ತೀಚಿನ ನಿವಾರ್ ಚಂಡಮಾರುತ ಸಮಯದಲ್ಲಿ ಈ ಕೆಲವು ಸಣ್ಣ ಚಿನ್ನದ ವಸ್ತುಗಳು ಉಬ್ಬರವಿಳಿತದ ಅಲೆಗಳಿಂದ ತೀರವನ್ನು ಸೇರಿಕೊಂಡಿರಬಹುದು’ ಎಂಬ ಮಾಹಿತಿಯನ್ನೂ ಅವರು ನೀಡುತ್ತಾರೆ.

Comments are closed.