ರಾಷ್ಟ್ರೀಯ

ನಿವಾರ್​ ಚಂಡಮಾರುತ;  ಮೃತರ ಕುಟುಂಬದವರಿಗೆ 2 ಲಕ್ಷ ರೂ. ಪರಿಹಾರ ಘೋಷಿಸಿದ ಮೋದಿ

Pinterest LinkedIn Tumblr


ಚೆನ್ನೈ; ನಿವಾರ್​ ಚಂಡಮಾರುತ ನಿರೀಕ್ಷೆಗಿಂತ ಹೆಚ್ಚು ಹಾನಿ ಉಂಟುಮಾಡಿದೆ. ಚಂಡಮಾರುತದ ತೀವ್ರತೆಗೆ ನಾಲ್ವರು ಸಾವಿಗೀಡಾಗಿದ್ದು ಅಪಾರ ಆಸ್ತಿಪಾಸ್ತಿ ಹಾನಿಯಾಗಿದೆ. ಈ ಹಿನ್ನೆಲೆಯಲ್ಲಿ ಮೃತರ ಕುಟುಂಬದವರಿಗೆ 2 ಲಕ್ಷ ರೂಪಾಯಿ ಮತ್ತು ಗಾಯಗೊಂಡವರಿಗೆ ತಲಾ 50,000 ರೂಪಾಯಿ ಪರಿಹಾರ ಘೋಷಿಸಿದ್ದಾರೆ.

ನಿವಾರ್​ ಚಂಡಮಾರುತದಿಂದಾಗಿರುವ ನಷ್ಟದ ಬಗ್ಗೆ ಮಾತನಾಡಿರುವ ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ, “ನಿವಾರ್ ಚಂಡಮಾರುತಕ್ಕೆ ರಾಜ್ಯದ 18 ಜಿಲ್ಲೆಗಳಲ್ಲಿ, 2 ಸಾವಿರಕ್ಕೂ ಹೆಚ್ಚು ಮರಗಳು ಉರುಳಿವೆ. ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ ಜೊತೆಗೆ ನೂರಾರು ಜಾನುವಾರುಗಳನ್ನು ಚಂಡಮಾರುತ ಬಲಿ ಪಡೆದಿದೆ” ಎಂದು ಮಾಹಿತಿ ನೀಡಿದ್ದಾರೆ.

ತಮಿಳುನಾಡು ಪರಿಸ್ಥಿತಿಯ ಕುರಿತು ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಮಾತುಕತೆ ನಡೆಸಿದ್ದಾರೆ. ರಾಜ್ಯದಲ್ಲಿ ಸಹಾಯಕ್ಕಾಗಿ ಕೇಂದ್ರದ ತಂಡಗಳನ್ನು ನಿಯೋಜಿಸಲಾಗುವುದು ಎಂದು ಪ್ರಧಾನಿ ಮಾಹಿತಿ ಭರವಸೆ ನೀಡಿದ್ದಾರೆ ಎನ್ನಲಾಗುತ್ತಿದೆ.

“ಚಂಡಮಾರುತದಿಂದ ಮೃತಪಟ್ಟವರ ಬಗ್ಗೆ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ ಮತ್ತು ಗಾಯಾಳುಗಳು ಬೇಗ ಚೇತರಿಸಿಕೊಳ್ಳಬೇಕೆಂದು ಪ್ರಾರ್ಥಿಸಿದರು. ಮೃತರ ಕುಟುಂಬದವರಿಗೆ ತಲಾ 2 ಲಕ್ಷ ರೂಪಾಯಿ ಮತ್ತು ಗಾಯಗೊಂಡವರಿಗೆ ತಲಾ 50,000 ರೂಪಾಯಿ ಪರಿಹಾರವನ್ನು ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ ನೀಡಲಾಗುವುದು(PMNRF)” ಎಂದು ಪ್ರಧಾನಿ ಕಚೇರಿ (ಪಿಎಂಒ) ಟ್ವೀಟ್ ಮಾಡಿದೆ.

ಮುಖ್ಯಮಂತ್ರಿ ಪಳನಿಸ್ವಾಮಿ ಮೃತ ಸಂತ್ರಸ್ತರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದು, ತಲಾ 10 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ರಾಜ್ಯ ವಿಪತ್ತು ಪರಿಹಾರ ನಿಧಿಯಿಂದ ನಾಲ್ಕು ಲಕ್ಷ ರೂಪಾಯಿ ಮತ್ತು ಮುಖ್ಯಮಂತ್ರಿಯ ಸಾರ್ವಜನಿಕ ಪರಿಹಾರ ನಿಧಿಯಿಂದ ಆರು ಲಕ್ಷ ರೂಪಾಯಿ ನೀಡಲಾಗುತ್ತದೆ ಎಂದಿದ್ದಾರೆ.

ಅಲ್ಲದೆ, ಚಂಡಮಾರುತದಲ್ಲಿ 61 ಹಸುಗಳು, 5 ಎತ್ತುಗಳು, 65 ಕರುಗಳು ಮತ್ತು 114 ಆಡುಗಳನ್ನು ಕಳೆದುಕೊಂಡಿರುವ ಜಾನುವಾರು ಮಾಲೀಕರಿಗೆ 3,000 ರಿಂದ 30,000 ರೂಪಾಯಿ ಪರಿಹಾರವನ್ನು ಘೋಷಿಸಿದ್ದಾರೆ.

ಚೆನ್ನೈ, ಕಡಲೂರು, ಚೆಂಗಲ್ಪಟ್ಟು, ವೆಲ್ಲೂರು ಮತ್ತು ನಾಗಪಟ್ಟಣಂ ಸೇರಿದಂತೆ ಹಲವು ಚಂಡಮಾರುತ ಪೀಡಿತ ಜಿಲ್ಲೆಗಳಲ್ಲಿ 2,064 ಮರಗಳು ಧರೆಗುರುಳಿದ್ದು, ಇದರಿಂದ ಇದು ಸುಮಾರು 108 ವಿದ್ಯುತ್ ಪರಿವರ್ತಕಗಳಿಗೆ ಮತ್ತು 2,927 ಕ್ಕೂ ಹೆಚ್ಚು ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ ಎಂದು ಸಿಎಂ ಪಳನಿಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಲ್ಲದೆ, ಸುಮಾರು 302 ಗುಡಿಸಲುಗಳು ಮತ್ತು 38 ಹೆಂಚುಗಳ ಮನೆಗಳು ಸಂಪೂರ್ಣವಾಗಿ ಹಾನಿಗೊಳಗಾಗಿವೆ. 1,439 ಗುಡಿಸಲುಗಳು ಮತ್ತು 161 ಹೆಂಚುಗಳ ಮನೆಗಳು ಭಾಗಶಃ ಹಾನಿಗೊಳಗಾಗಿವೆ. ಚಂಡಮಾರುತದಿಂದಾಗಿ ಮನೆಗಳನ್ನು ಕಳೆದುಕೊಂಡವರಿಗೆ ಸೂಕ್ತ ನೆರವು ನೀಡಲಾಗುವುದು ಎಂದು ತಿಳಿಸಿದ್ದಾರೆ.

ಸರ್ಕಾರದ ತ್ವರಿತ ಕ್ರಮಗಳು ಒಂದು ದೊಡ್ಡ ದುರಂತವನ್ನು ತಪ್ಪಿಸಿವೆ, ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ವೈದ್ಯಕೀಯ ಶಿಬಿರಗಳನ್ನು ಆಯೋಜಿಸುವ ಮೂಲಕ ಸಾಂಕ್ರಾಮಿಕ ರೋಗಗಳು ಹರಡುವುದನ್ನು ತಡೆಗಟ್ಟುವ ಕ್ರಮಗಳು ನಡೆದಿದ್ದು, ಇದುವರೆಗೆ ಸುಮಾರು 85,331 ಜನರಿಗೆ ಅನುಕೂಲವಾಗಿದೆ ಎಂದಿದ್ದಾರೆ.

Comments are closed.