ರಾಷ್ಟ್ರೀಯ

ಒಂದು ರಾಷ್ಟ್ರ, ಒಂದು ಪಡಿತರ ಚೀಟಿ ವ್ಯವಸ್ಥೆ 28 ರಾಜ್ಯಗಳಲ್ಲೂ ಜಾರಿ; ನಿರ್ಮಲಾ ಸೀತಾರಾಮನ್

Pinterest LinkedIn Tumblr


ನವದೆಹಲಿ; ಕೇಂದ್ರ ಸರ್ಕಾರ ಜಾರಿಗೆ ತಂದಿರುವ “ಒಂದು ರಾಷ್ಟ್ರ ಒಂದು ರೇಷನ್ ಕಾರ್ಡ್” ಯೋಜನೆಯನ್ನು ಈ ವರ್ಷ ಸೆಪ್ಟೆಂಬರ್ 1 ರಿಂದ ಜಾರಿಗೆ ಬರುವಂತೆ 28 ರಾಜ್ಯಗಳ 68.8 ಕೋಟಿ ಫಲಾನುಭವಿಗಳನ್ನು ಒಳಗೊಂಡ ಕೇಂದ್ರ ಪ್ರದೇಶಗಳನ್ನು ಈ ರಾಷ್ಟ್ರೀಯ ಯೋಜನೆಯ ಅಡಿಯಲ್ಲಿ ತರಲಾಗುತ್ತದೆ” ಎಂದು ಅರ್ಥ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

ಅಸಲಿಗೆ ಇಂದು ದೇಶ ಒಂದು ಪಡಿತರ ಚೀಟಿ ಯೋಜನೆಯನ್ನು ಜಾರಿಗೊಳಿಸುವ ಕುರಿತಂತೆ ಕೇಂದ್ರ ಸರ್ಕಾರ ಕಳೆದ ಹಲವಾರು ತಿಂಗಳುಗಳ ಹಿಂದೆಯೇ ಮಾಹಿತಿ ನೀಡಿತ್ತು. ಆದರೆ, ಈ ಯೋಜನೆ ಎಂದು ಕಾರ್ಯಗತವಾಗಲಿದೆ ಎಂಬ ಕುರಿತು ಮಾಹಿತಿ ನೀಡಿರಲಿಲ್ಲ. ಆದರೆ, ಸಚಿವೆ ನಿರ್ಮಲಾ ಸೀತಾರಾಮನ್ ಕೊನೆಗೂ ಯೋಜನೆ ಪ್ರಾರಂಭವಾಗಲಿರುವ ದಿನಾಂಕವನ್ನು ಘೋಷಿಸಿದ್ದಾರೆ.

ಕೊರೋನಾ ಸಾಂಕ್ರಾಮಿಕ ರೋಗಕ್ಕೆ ಸಿಲುಕಿ ಭಾರತದ ಆರ್ಥಿಕತೆ ಪಾತಾಳಕ್ಕೆ ಕುಸಿದಿದೆ. ಹೀಗಾಗಿ ದೇಶದ ಆರ್ಥಿಕತೆಗೆ ಚುರುಕು ನೀಡಲು ಮುಂದಾಗಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಆರ್ಥಿಕ ಪ್ರಚೋದಕ ಪ್ಯಾಕೇಜ್ ಅನ್ನು ಘೋಷಿಸಿದ್ದಾರೆ. ಈ ಪತ್ರಿಕಾಗೋಷ್ಠಿಯಲ್ಲಿ ಇಂದು ದೇಶ ಒಂದು ರೇಷನ್ ಕಾರ್ಡ್ ಯೋಜನೆಯ ಕುರಿತು ಸಚಿವೆ ನಿರ್ಮಲಾ ಸೀತಾರಾಮನ್ ಮಾತನಾಡುವ ಮೂಲಕ ಗಮನ ಸೆಳೆದಿದ್ದಾರೆ.

“ಒಂದು ರಾಷ್ಟ್ರ, ಒಂದು ಪಡಿತರ ಚೀಟಿ” ವ್ಯವಸ್ಥೆ ಎಂದರೇನು?

ಈ ‘ಒಂದು ದೇಶ, ಒಂದು ರೇಷನ್​ ಕಾರ್ಡ್​’ ಯೋಜನೆಯು ವಲಸೆ ಕಾರ್ಮಿಕರು ಮತ್ತು ಅವರ ಕುಟುಂಬ ಸದಸ್ಯರಿಗೆ ಭಾರತದ ಯಾವುದೇ ನ್ಯಾಯ ಬೆಲೆ ಅಂಗಡಿಯಿಂದ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಸಚಿವೆ ಸೀತಾರಾಮನ್ ಹೇಳಿದ್ದಾರೆ.

ಒನ್ ನೇಷನ್ ಒನ್ ರೇಷನ್ ಕಾರ್ಡ್ ಸೌಲಭ್ಯವು ವ್ಯಕ್ತಿಯ ಭೌತಿಕ ಸ್ಥಳವನ್ನು ಲೆಕ್ಕಿಸದೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಬರುವ ಎಲ್ಲಾ ಫಲಾನುಭವಿಗಳಿಗೆ ಆಹಾರ ಭದ್ರತೆಯ ಅರ್ಹತೆಯನ್ನು ತಲುಪಿಸುವ ಗುರಿಯನ್ನು ಹೊಂದಿದೆ.

ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ, 2013 ರ ಪ್ರಕಾರ, ಸುಮಾರು 81 ಕೋಟಿ ಭಾರತೀಯರು ಸಬ್ಸಿಡಿ ಪಡೆದ ಆಹಾರ ಧಾನ್ಯ, ಅಕ್ಕಿ ಕೆಜಿಗೆ 3 ರೂ, ಗೋಧಿ 2 ರೂ ಮತ್ತು ಇತರೆ ಧಾನ್ಯಗಳನ್ನು ಕೆಜಿಗೆ 1 ರೂ ನೀಡಿ ಖರೀದಿಸಲು ಸಾರ್ವಜನಿಕ ವಿತರಣಾ ವ್ಯವಸ್ಥೆ (ಟಿಪಿಡಿಎಸ್) ಅರ್ಹರಾಗಿದ್ದಾರೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

ಈ ಮುಂಚಿನ ಪಡಿತರ ವ್ಯವಸ್ಥೆಯಲ್ಲಿ, ಪಡಿತರ ಕಾರ್ಡುದಾರನು ತಾನು ವಾಸಿಸುವ ಪ್ರದೇಶದಲ್ಲಿ ಅವರಿಗೆ ನಿಯೋಜಿಸಲಾದ ನ್ಯಾಯಬೆಲೆ ಅಂಗಡಿಗಳಿಂದ ಮಾತ್ರ ಆಹಾರ ಧಾನ್ಯಗಳನ್ನು ಖರೀದಿಸಬಹದಾಗಿತ್ತು. ಆದರೆ, ‘ಒನ್ ನೇಷನ್, ಒನ್ ರೇಷನ್ ಕಾರ್ಡ್’ ವ್ಯವಸ್ಥೆಯು ಈಗ ಕಾರ್ಯನಿರ್ವಹಿಸುತ್ತಿರುವುದರಿಂದ ಈ ವ್ಯವಸ್ಥೆ ಬದಲಾಗಲಿದ್ದು, ಎಲ್ಲರಿಗೂ ಅನುಕೂಲವಾಗಲಿದೆ ಎನ್ನಲಾಗುತ್ತಿದೆ.

Comments are closed.