ಬೆಂಗಳೂರು: ಕಳೆದ ಬಾರಿಗಿಂತ ಹೆಚ್ಚು ಲೀಡ್ ಬಂದಿದೆ. ಇದು ಮತದಾರರು ನನ್ನ ಮೇಲೆ ಇಟ್ಟಿರೋ ನಂಬಿಕೆ. ಮತದಾರರ ಋಣ ತೀರಿಸಲು ಸಾಧ್ಯವಿಲ್ಲ. ನನ್ನ ಗೆಲುವಿಗೆ ಪಕ್ಷ ಹಾಗೂ ಮುಖಂಡರು ಕಾರಣ ಎಂದು ಆರ್ ಆರ್ ನಗರದ ಬಿಜೆಪಿ ಅಭ್ಯರ್ಥಿ ಮುನಿರತ್ನ ಹೇಳಿದ್ದಾರೆ.
ಕೈಮುಗಿದು ಹೇಳುತ್ತೇನೆ, ಇಡೀ ಕ್ಷೇತ್ರ ಅಭಿವೃದ್ದಿ ಆಗಬೇಕು. ಇನ್ನಷ್ಟು ಅಭಿವೃದ್ದಿ ಮಾಡುವ ಗುರಿ ಇದೆ. ಸಿಎಂ ಬಿ.ಎಸ್. ಯಡಿಯೂರಪ್ಪ ನನ್ನ ಮೇಲೆ ಇಟ್ಟಿರುವ ಭರವಸೆಯನ್ನು ಉಳಿಸಿಕೊಳ್ಳುತ್ತೇನೆ. ದಿನಕ್ಕೆ 22 ಗಂಟೆ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಇದೇ ವೇಳೆ, ಪ್ರತಿಸ್ಪರ್ಧಿ ಕುಸುಮಾ ಅವರು ಸತ್ಯ ಮಾತನಾಡುವಂತೆ ಮನವಿ ಮಾಡುತ್ತೇನೆ. ನಾನು ಬಳಸದ ಪದ ಹೇಳಿದ್ದೀನಿ ಅಂತ ಅವ್ರು ಹೇಳಿದ್ದಾರೆ. ನನ್ನ ಜೀವನದಲ್ಲಿ ನಾನು ಯಾವ ಹೆಣ್ಣು ಮಗಳಿಗೂ ಮುಂಡೆ ಅಂತ ಹೇಳಿಲ್ಲ ಎಂದು ಸ್ಪಷ್ಟಪಡಿಸಿದರು.
ಪ್ರಮಾಣ ಪತ್ರ ಪಡೆದು ಬಿಜೆಪಿ ಕಚೇರಿಗೆ ಹೋಗ್ತೀನಿ ಎಂದ ಅವರು, ಸಚಿವ ಸ್ಥಾನ ನೀಡುವ ವಿಚಾರವಾಗಿ, ಅದು ಸಿಎಂಗೆ ಬಿಟ್ಟಿದ್ದು, ನಾನು ಇಂತದ್ದೇ ಖಾತೆ ಕೊಡಿ ಎಂದು ಕೇಳುವುದಿಲ್ಲ ಎಂದರು.
ರಾಜರಾಜೇಶ್ವರಿ ನಗರ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಒಟ್ಟು 1,25,734 ಮತಗಳನ್ನು ಪಡೆದು ಗೆಲುವಿನ ನಗೆ ಬೀರಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಒಟ್ಟು 67,798 ಮತಗಳನ್ನು ಪಡೆದರೆ, ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿ- 10,251 ಮತಗಳನ್ನು ಪಡೆದಿದ್ದಾರೆ.
ಇನ್ನು, 2494 ನೋಟಾ ಮತಗಳು ಬಂದಿವೆ. ಬಿಜೆಪಿ ಅಭ್ಯರ್ಥಿ ಮುನಿರತ್ನ ಒಟ್ಟು 57,936 ಮತಗಳ ಅಂತರದಲ್ಲಿ ದೊಡ್ಡ ಗೆಲುವನ್ನು ಪಡೆದಿದ್ದಾರೆ.