ರಾಷ್ಟ್ರೀಯ

58 ವರ್ಷದಲ್ಲಿ ಅತಿ ಕಡಿಮೆ ತಾಪಮಾನ ಕಂಡ ರಾಷ್ಟ್ರ ರಾಜಧಾನಿ

Pinterest LinkedIn Tumblr


ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಬೇಸಿಗೆ ಎಷ್ಟು ಪ್ರಖರವಾಗಿರುತ್ತದೆಯೋ ಚಳಿಗಾಲದಲ್ಲಿ ಮೈ ಕೊರೆಯುವಷ್ಟು ಚಳಿ ಇರುತ್ತದೆ. ಹೊಸದಿಲ್ಲಿಯಲ್ಲಿ ಅಕ್ಟೋಬರ್‌ ತಿಂಗಳಿನಲ್ಲಿ ಸರಾಸರಿ 17.2 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿದ್ದು, ಇದು 58 ವರ್ಷಗಳಲ್ಲೇ ಅತ್ಯಂತ ಕನಿಷ್ಠ ತಾಪಮಾನವಾಗಿದೆ. ಈ ಮುನ್ನ 1962ರ ಅಕ್ಟೋಬರ್‌ನಲ್ಲಿ ದಿಲ್ಲಿಯ ಸರಾಸರಿ ಕನಿಷ್ಠ ತಾಪಮಾನ 16.9 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿತ್ತು.

1994ರಲ್ಲಿ ದಿಲ್ಲಿಯಲ್ಲಿ 12.3 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿ ಸ್ಥಳೀಯರು ನಡುಗಿ ಹೋಗಿದ್ದರು. ಬಳಿಕ ಅಂಥ ಮೈಕೊರೆಯುವ ಕನಿಷ್ಠ ತಾಪಮಾನ ಯಾವ ವರ್ಷವೂ ಅನುಭವಕ್ಕೆ ಬಂದಿರಲಿಲ್ಲ. ಆದರೆ ಕಳೆದ ಗುರುವಾರ ನಗರದಲ್ಲಿನ ಕನಿಷ್ಠ ತಾಪಮಾನ 12.5 ಡಿಗ್ರಿ ಸೆಲ್ಸಿಯಸ್‌ಗೆ ದಿಢೀರ್‌ ಕುಸಿತ ಕಂಡಿದೆ. ಡಿಸೆಂಬರ್‌ ಹೊತ್ತಿಗೆ ಮತ್ತಷ್ಟು ತಾಪಮಾನ ಇಳಿಕೆಯಿಂದಾಗಿ ಸ್ಥಳೀಯರಿಗೆ ಶೀತಗಾಳಿಯ ಪರಿಣಾಮ ಅನಾರೋಗ್ಯ ಹೆಚ್ಚುವ ಆತಂಕವನ್ನು ಆರೋಗ್ಯ ತಜ್ಞರು ವ್ಯಕ್ತಪಡಿಸಿದ್ದಾರೆ. 1937ರ ಅ.31ರಂದು ದಿಲ್ಲಿಯಲ್ಲಿ ಇದುವರೆಗಿನ ಕನಿಷ್ಠ ತಾಪಮಾನ ದಾಖಲೆ ಎನ್ನಲಾಗಿರುವ 9.4 ಡಿಗ್ರಿ ಸೆಲ್ಸಿಯಸ್‌ ವರದಿಯಾಗಿತ್ತು.

ಮೋಡಗಳ ಕವಚವಿಲ್ಲ

ಶೀತ ತಾಪಮಾನ ಅಪಾಯಕಾರಿ ಮಟ್ಟಕ್ಕೆ ತಲುಪುತ್ತಿರುವ ಬಗ್ಗೆ ಪ್ರತಿಕ್ರಿಯಿಸಿರುವ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಪ್ರಾದೇಶಿಕ ಕೇಂದ್ರದ ಮುಖ್ಯಸ್ಥ ಕುಲ್‌ದೀಪ್‌ ಶ್ರೀವಾಸ್ತವ ಅವರು, ಆಕಾಶದಲ್ಲಿ ಮೋಡಗಳ ದಟ್ಟವಾದ ಪದರ ಕಂಡುಬರುತ್ತಿಲ್ಲ. ಬದಲಾಗಿ ಮೋಡಗಳು ಛಿದ್ರಗೊಂಡಿರುವುದು ತಾಪಮಾನ ಗಣನೀಯವಾಗಿ ಇಳಿಕೆ ಕಾಣುತ್ತಿರುವುದಕ್ಕೆ ಪ್ರಮುಖ ಕಾರಣ. ತಣ್ಣನೆಯ ಗಾಳಿ ಬೀಸಿದಷ್ಟೂ ಮಂಜು ಕವಿಯುವುದು ಹೆಚ್ಚುತ್ತಲಿದೆ. ದಟ್ಟ ಮೋಡಗಳು ಇನ್‌ಫ್ರಾರೆಡ್‌ ಕಿರಣಗಳು ಹಿಡಿದಿಟ್ಟು ಅವುಗಳನ್ನು ಭೂಮಿಗೆ ಕಳುಹಿಸುವ ಮೂಲಕ ಶಾಖದ ಏರಿಕೆಗೆ ಸಹಾಯಕವಾಗುತ್ತಿದ್ದವು ಎಂದಿದ್ದಾರೆ.

17.2 ಡಿಗ್ರಿ ಸೆ.: 2020ರ ಅಕ್ಟೋಬರ್‌ನ ಸರಾಸರಿ ತಾಪಮಾನ

16.9 ಡಿಗ್ರಿ ಸೆ.: 1962ರ ಅಕ್ಟೋಬರ್‌ನಲ್ಲಿ ಸರಾಸರಿ ತಾಪಮಾನ

19.1 ಡಿಗ್ರಿ ಸೆ.: ಅಕ್ಟೋಬರ್‌ ತಿಂಗಳಿನಲ್ಲಿವಾಡಿಕೆಯಂತೆ ದಿಲ್ಲಿಯ ಸರಾಸರಿ ತಾಪಮಾನ

ಕನಿಷ್ಠ ತಾಪಮಾನ ದಾಖಲಾದ ವರ್ಷಗಳು

1991 (17.6 ಡಿಗ್ರಿ ಸೆ.), 1993 (17.8 ಡಿಗ್ರಿ ಸೆ.), 1994 (17.9 ಡಿಗ್ರಿ ಸೆ.), 2007 (17.5 ಡಿಗ್ರಿ ಸೆ.)

Comments are closed.