
ಹೈದರಾಬಾದ್: ತನ್ನ ಪ್ರೀತಿಯನ್ನು ನಿರಾಕರಿಸಿದಳು ಎಂಬ ಕಾರಣಕ್ಕೆ ಆಂಧ್ರ ಪ್ರದೇಶದ ಯುವಕನೊಬ್ಬ 17 ವರ್ಷದ ಯುವತಿಯ ಕತ್ತು ಸೀಳಿ ಕೊಲೆ ಮಾಡಿದ್ದಾನೆ. ಚಾಕುವಿನಿಂದ ಕತ್ತು ಸೀಳಿದ್ದರಿಂದ ವಿಪರೀತ ರಕ್ತಸ್ರಾವ ಉಂಟಾಗಿ ಯುವತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಆಂಧ್ರ ಪ್ರದೇಶದ ವಿಶಾಖಪಟ್ಟಣಂ ಬಳಿಯ ಗಜುವಾಕ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಆರೋಪಿ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
17 ವರ್ಷದ ವರಲಕ್ಷ್ಮೀ ಎಂಬ ಯುವತಿಯನ್ನು ಪ್ರೀತಿಸುತ್ತಿದ್ದ ಯುವಕ ಅನಿಲ್ ಆಕೆಯನ್ನು ಮದುವೆಯಾಗಲು ಒತ್ತಾಯಿಸಿದ್ದ. ಆದರೆ, ಆತನ ಪ್ರೀತಿಯನ್ನು ಆಕೆ ನಿರಾಕರಿಸಿದ್ದಳು. ವಿಶಾಖಪಟ್ಟಣಂನ ಸಾಯಿಬಾಬ ದೇವಸ್ಥಾನದ ಬಳಿ ಅವರಿಬ್ಬರಿಗೂ ವಾಗ್ವಾದ ನಡೆದಿತ್ತು. ನಿನ್ನನ್ನು ನಾನು ಮದುವೆಯಾಗುವುದಿಲ್ಲ ಎಂದು ಆಕೆ ಹಠ ಹಿಡಿದಿದ್ದಳು.
ಇದರಿಂದ ಕೋಪಗೊಂಡ ಆತ ಹತಾಶೆಯಿಂದ ಚಾಕುವಿನಿಂದ ಆಕೆಯ ಕತ್ತು ಸೀಳಿದ್ದ. ರಕ್ತಸ್ರಾವದಿಂದ ಕುಸಿದುಬಿದ್ದ ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಳು. ಆರೋಪಿ ಅನಿಲ್ನನ್ನು ಬಂಧಿಸಿ, ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇತ್ತೀಚಿನ ಅಂಕಿ-ಅಂಶದ ಪ್ರಕಾರ, ಆಂಧ್ರ ಪ್ರದೇಶದಲ್ಲಿ ಇಡೀ ದೇಶದಲ್ಲಿ ನಡೆಯುವ ಅಪರಾಧ ಪ್ರಕರಣಗಳ ಶೇ. 3.7ರಷ್ಟು ಕೇಸುಗಳು ದಾಖಲಾಗುತ್ತಿವೆ. 2019ರಲ್ಲಿ ಅತಿಹೆಚ್ಚು ಅಪರಾಧ ಪ್ರಕರಣಗಳು ದಾಖಲಾದ ರಾಜ್ಯಗಳ ಪೈಕಿ ಆಂಧ್ರ ಪ್ರದೇಶ 8ನೇ ಸ್ಥಾನದಲ್ಲಿದೆ.
Comments are closed.