ರಾಷ್ಟ್ರೀಯ

ನಮ್ಮ ದೇಶದ ಇಂಟರ್ನೆಟ್​​ ವೇಗ ಜಾಗತಿಕವಾಗಿ ಅತ್ಯಂತ ಕಳಪೆ

Pinterest LinkedIn Tumblr


ನವದೆಹಲಿ: ನಮ್ಮ ದೇಶದಲ್ಲಿ ಬಳಸುವ ಇಂಟರ್ನೆಟ್ ಸ್ಪೀಡ್ ಜಗತ್ತಿನ ಉಳಿದ ದೇಶಗಳಿಗಿಂತ ಅತ್ಯಂತ ಕೆಳಮಟ್ಟದಲ್ಲಿದೆ ಎಂದು ವರದಿಯೊಂದು ತಿಳಿಸಿದೆ.

ಜಗತ್ತಿನ 138 ದೇಶಗಳ ಪೈಕಿ ಭಾರತವು 131ನೇ ಸ್ಥಾನದಲ್ಲಿದೆ ಎಂಬುದನ್ನು ಜಗಜ್ಜಾಹೀರು ಮಾಡಿದೆ. ಮೊಬೈಲ್ ಇಂಟರ್ನೆಟ್/ಡಾಟಾ ಸ್ಪೀಡ್‍ನಲ್ಲಿ ಭಾರತಕ್ಕೆ ವಿಶ್ವದಲ್ಲಿ 131 ನೇ ಸ್ಥಾನ ಲಭಿಸಿದ್ದು, ಈ ಸಲದ Ranking ಗಣನೆಗೆ ಒಟ್ಟು 138 ದೇಶಗಳನ್ನು ತೆಗೆದುಕೊಳ್ಳಲಾಗಿದೆ. ಕಳೆದ ವರ್ಷ 145 ದೇಶಗಳ ಪೈಕಿ 128ನೇ ಸ್ಥಾನದಲ್ಲಿದ್ದ ಭಾರತ, ಅದಕ್ಕಿಂತ ಹಿಂದಿನ ವರ್ಷ 110 ನೇ ಸ್ಥಾನದಲ್ಲಿತ್ತು. ಸದ್ಯಕ್ಕೆ, ಶ್ರೀಲಂಕಾ, ಪಾಕೀಸ್ಥಾನ ಹಾಗೂ ನೇಪಾಳ ಕೂಡಾ ಭಾರತಕ್ಕಿಂತ ಮೇಲಿನ ಸ್ಥಾನಗಳನ್ನು ಪಡೆದಿವೆ ಎಂದು ಗೆಜೆಟ್ ನೌ ವರದಿ ಮಾಡಿದೆ.

ವಿಶ್ವದ ಸರಾಸರಿ ಡೌನ್‍ಲೋಡ್ ಸ್ಪೀಡ್ 35.26 Mbps (megabit per second) ಆಗಿದ್ದರೆ, ಭಾರತದ ಸರಾಸರಿ ಡೌನ್‍ಲೋಡ್ ಸ್ಪೀಡ್ 12.07 Mbps. ಇನ್ನು ಗಣನೆಗೆ ತೆಗೆದುಕೊಂಡಿರುವ ಎಲ್ಲಾ ದೇಶಗಳ ಸರಾಸರಿ ಅಪ್‍ಲೋಡ್ ಸ್ಪೀಡ್ 11.22 Mbps ಆಗಿದ್ದರೆ, ಭಾರತದ್ದು, 4.31 Mbps.

ಮೊದಲನೆಯ ಸ್ಥಾನದಲ್ಲಿರುವ ದಕ್ಷಿಣ ಕೊರಿಯಾದ ಸರಾಸರಿ ಇಂಟರ್ನೆಟ್ ವೇಗ 121.00 Mbps. ಇದು ಭಾರತದ ಸರಾಸರಿ ಬ್ರಾಡ್‍ಬ್ಯಾಂಡ್ ಸ್ಪೀಡ್‍ 46.47 Mbps ಗಿಂತಾ ಸುಮಾರು ಎರಡೂವರೆ ಪಟ್ಟು ಹೆಚ್ಚು. ಶ್ರೀಲಂಕಾ 19.95 Mbps ಹೊಂದಿದ್ದು 102ನೆಯ ಸ್ಥಾನ ಪಡೆದಿದ್ದರೆ, ಪಾಕೀಸ್ಥಾನ 17.13 Mbps ಸ್ಪೀಡ್‍ನೊಂದಿಗೆ 116ನೆಯ ಸ್ಥಾನದಲ್ಲಿದೆ. ನೇಪಾಳ ಕೂಡಾ 17.12 Mbps ಸ್ಪೀಡ್ ಸರಸಾರಿ ಇಂಟರ್ನೆಟ್‍ನೊಂದಿಗೆ 117ನೆಯ ಸ್ಥಾನದಲ್ಲಿದೆ.

ಭಾರತವನ್ನು ವಿಶ್ವಗುರು ಮಾಡುತ್ತೇವೆ ಎಂದು ಆರ್ಥಿಕತೆ, ಹಸಿವು, ಕೊರನಾ ಸೇರಿದಂತೆ ಕೊನೆಗೆ ಇಂಟರ್ನೆಟ್‌ ಸ್ಪೀಡ್‌ನಲ್ಲೂ ಕಳಪೆ ಪ್ರದರ್ಶನ ನೀಡುತ್ತಿರುವುದಕ್ಕೆ ವಿಮರ್ಶಕರಿಂದ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಡಿಜಿಟಲ್ ಇಂಡಿಯಾ ಮಾಡುತ್ತೇವೆ ಎಂದು ಇಂಟರ್ನೆಟ್ ಬಳಕೆಯ ಸ್ವೀಡ್‌ನಲ್ಲಿ ಜಗತ್ತಿನಲ್ಲಿಯೇ ಅತ್ಯಂತ ಅಗ್ಗದ ಸ್ಪೀಡ್ ಹೊಂದಿರುವ ದೇಶವನ್ನಾಗಿ ಮಾಡಲಾಗಿದೆ. ಪ್ರತಿಯೊಂದನ್ನೂ ಆನ್ಲೈನ್ ಮಾಡುತ್ತೇವೆ ಎಂದು ಹೊರಟಿರುವ ಸರ್ಕಾರ ಭಾರತದ ವಾಸ್ತವವನ್ನು ಅರಿತಂತೆ ಕಾಣುತ್ತಿಲ್ಲ.

ಕೊರೊನಾ ಕಾರಣದಿಂದ ಆನ್ಲೈನ್ ತರಗತಿಗಳಿಗಾಗಿ ಪರದಾಡುತ್ತಿರುವ ಹಳ್ಳಿಯ ಮಕ್ಕಳನ್ನು ನೆನೆಸಿಕೊಂಡರೆ ನಮ್ಮ ಡಿಜಿಟಲ್ ಇಂಡಿಯಾದ ಕಲ್ಪನೆ ಕಣ್ಣಮುಂದೆ ಬರುತ್ತದೆ. ಎಷ್ಟೋ ಬಾರಿ ಸರ್ಕಾರಿ ಕಛೇರಿಗಳಲ್ಲಿಯೇ ಇಂಟರ್ನೆಟ್ ಸ್ಪೀಡ್ ಕಡಿಮೆಯಾಗಿ ಕಛೇರಿಯ ಕೆಲಸಗಳು ನಿಂತುಹೋಗಿರುವ ಉದಾಹರಣೆಗಳು ಸಾಕಷ್ಟಿವೆ. ಹೀಗಿರುವಾಗ ಎಲ್ಲವನ್ನೂ ಡಿಜಿಟಲ್ ಮಾಡುತ್ತೇವೆ ಎನ್ನುವ ಸರ್ಕಾರಕ್ಕೆ ವಾಸ್ತವದ ಅರಿವಿಲ್ಲ ಎಂದೇ ಹೇಳಬೇಕಿದೆ.

Comments are closed.