ರಾಷ್ಟ್ರೀಯ

ಗುಣಮುಖರಾದವರಿಗೆ ಮತ್ತೆ ಕೊರೋನಾ ಬರುವ ಸಾಧ್ಯತೆ ಇದೆ: ಸೋಂಕು ಒಕ್ಕರಿಸಿದರೆ ಮರಣ ಖಚಿತ

Pinterest LinkedIn Tumblr


ನವದೆಹಲಿ: ಕೊರೋನಾ ದಿಂದ ಗುಣಮುಖರಾದವರಿಗೆ ಮತ್ತೆ ಸೋಂಕು ಒಕ್ಕರಿಸುವ ಸಾಧ್ಯತೆ ಇದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಹೇಳಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಅಧಿಕಾರಿಯೊಬ್ಬರು, ಸೋಂಕಿನಿಂದ ಚೇತರಿಸಿಕೊಂಡವರಲ್ಲಿ ಸಾಮಾನ್ಯವಾಗಿ ಪ್ರತಿಕಾಯಗಳು ಉತ್ಪತ್ತಿಯಾಗುತ್ತವೆ. ಈ ಪ್ರತಿಕಾಯಗಳು ದೇಹದಲ್ಲಿ ಸರಿಸುಮಾರು ಐದು ತಿಂಗಳ ಅವಧಿಯಷ್ಟಿರುತ್ತವೆ. ಬಳಿಕ ಕ್ರಮೇಣ ಇದು ಕಡಿಮೆಯಾಗುತ್ತದೆ. ಪ್ರತಿಕಾಯಗಳು ಕಡಿಮೆಯಾದರೆ ಆಗ ವ್ಯಕ್ತಿ ಮತ್ತೆ ಕೊರೋನಾ ಸೋಂಕಿಗೆ ತುತ್ತಾಗುವ ಸಾಧ್ಯತೆ ಇದೆ ಎಂದು ಐಸಿಎಂಆರ್ ನ ತಜ್ಞರು ಹೇಳಿದ್ದಾರೆ.

ಇದೇ ವಿಚಾರವಾಗಿ ಮಾತನಾಡಿದ ಐಸಿಎಂಆರ್ ಮಹಾನಿರ್ದೇಶಕ ಬಲರಾಮ್ ಭಾರ್ಗವ ಅವರು, ದೇಶದಲ್ಲಿ ಈಗಾಗಲೇ ಇಂತಹ ಸಾಕಷ್ಟು ಪ್ರಕರಣಗಳು ವರದಿಯಾಗುತ್ತಿವೆ. ಪ್ರಸ್ತುತ ಈ ಸಂಖ್ಯೆ ಕೇವಲ ಬೆರಳೆಣಿಕೆಯಷ್ಟಿವೆ. ಈ ಹಿಂದೆ ಸೋಂಕಿಗೆ ತುತ್ತಾದವರು ಮತ್ತೆ ಸೋಂಕಿಗೆ ತುತ್ತಾದ ಪ್ರಕರಣಗಳು ಹಲವು ರಾಜ್ಯಗಳಲ್ಲಿ ವರದಿಯಾಗುತ್ತಿವೆ. ಸಾಮಾನ್ಯವಾಗಿ ವ್ಯಕ್ತಿಯ ದೇಹಕ್ಕನುಗುಣವಾಗಿ ಪ್ರತಿಕಾಯಗಳು 3 ರಿಂದ 5 ತಿಂಗಳುಗಳ ಕಾಲ ಇರುತ್ತವೆ. ಕೊರೋನಾ ಸೋಂಕು ಹೊಸ ಕಾಯಿಲೆ ಆಗಿದ್ದು, ಈ ಸೋಂಕಿನ ಕುರಿತು ಈ ವೆರಗೂ ನಡೆದಿರುವ ಅಧ್ಯಯನ ಸಾಲದು. ಈ ವೈರಸ್ ಕುರಿತು ಮತ್ತಷ್ಟು ಅಧ್ಯಯನ ನಡೆಸಬೇಕಿದೆ ಎಂದು ಹೇಳಿದರು.

ಇನ್ನು ಸೋಂಕಿನಿಂದ ಚೇತರಿಸಿಕೊಂಡ ವ್ಯಕ್ತಿಯಲ್ಲಿನ ಪ್ರತೀಕಾಯಗಳು ಕಡಿಮೆಯಾಗಿ ಎರಡನೇ ಬಾರಿಗೆ ಸೋಂಕು ವ್ಯಕ್ತಿಯನ್ನು ಆಕ್ರಮಿಸಿದರೆ ಇಂತಹ ಪ್ರಕರಣಗಳಲ್ಲಿ ಮರಣ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ ಜನರು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಮತ್ತು ಆರೋಗ್ಯ ಇಲಾಖೆ ಮಾರ್ಗ ಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಪಾಲನೆ, ಆಗಾಗ ಕೈಗಳನ್ನು ಸೋಪ್ ಅಥವಾ ಹ್ಯಾಂಡ್ ವಾಶ್ ನಿಂದ ತೊಳೆದುಕೊಳ್ಳುವುದನ್ನು ತಪ್ಪದೇ ಪಾಲಿಸಬೇಕಿದೆ. ಇದನ್ನು ಸೋಂಕಿತರು ಚೇತರಿಸಿಕೊಂಡ ಬಳಿಕವೂ ತಪ್ಪದೇ ಮಾಡಬೇಕು ಎಂದು ಅವರು ಸಲಹೆ ನೀಡಿದರು.

Comments are closed.