ನವದೆಹಲಿ: ಚಿಲ್ಲರೆ ನೀಡಬೇಕಿದ್ದ 20 ರೂಪಾಯಿ ಕೇಳಿದ್ದಕ್ಕೆ ಮಗನ ಮುಂದೆಯೇ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿದ ಘಟನೆ ಉತ್ತರ ದೆಹಲಿಯ ಬುರಾರಿ ಎಂಬಲ್ಲಿ ನಡೆದಿದೆ.
ಉತ್ತರ ದೆಹಲಿಯ ಬುರಾರಿ ಬಳಿ ಘಟನೆ ನಡೆದಿದ್ದು, 13 ವರ್ಷದ ಬಾಲಕನ ಮುಂದೆಯೇ ತಂದೆಯನ್ನು ಮನ ಬಂದಂತೆ ಥಳಿಸಿ ಕೊಲೆ ಮಾಡಲಾಗಿದೆ. 38 ವರ್ಷದ ರೂಪೇಶ್ ಪತ್ನಿ ಹಾಗೂ ಮಗನೊಂದಿಗೆ ವಾಸವಿದ್ದ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತೋಷ್ ಹಾಗೂ ಸರೋಜ್ ಇಬ್ಬರು ಸಹೋದರರನ್ನು ಪೊಲೀಸರು ಬಂಧಿಸಿದ್ದು, ಈ ಪ್ರದೇಶ ಅಪರಾಧ ಪ್ರಕರಣಗಳಿಗೆ ಹೆಸರುವಾಸಿಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ರೂಪೇಶ್ ಶೇವಿಂಗ್ ಮಾಡಿಸಿಕೊಳ್ಳಲು ಮನೆಯ ಬಳಿ ಇದ್ದ ಕಟಿಂಗ್ ಶಾಪ್‍ಗೆ ತೆರಳಿದ್ದು, ಶೇವ್ ಮಾಡಿಸಿದ ಬಳಿಕ 50 ರೂ.ಬಿಲ್ ಆಗಿದೆ ಎಂದು ಅಂಗಡಿಯ ಹೇಳಿದ್ದಾನೆ. ಈ ವೇಳೆ ಅಂಗಡಿ ಮಾಲಿಕ ಸಂತೋಷ್‍ಗೆ ರೂಪೇಶ್ 30 ರೂ. ನೀಡಿದ್ದು, ಉಳಿದ ಹಣವನ್ನು ನಂತರ ನೀಡುವುದಾಗಿ ತಿಳಿಸಿದ್ದಾರೆ ಎಂದು ಪೊಲೀಸರು ವಿವರಿಸಿದ್ದಾರೆ.
ಇದೇ ಕಾರಣಕ್ಕೆ ಇಬ್ಬರ ನಡುವೆ ಜಗಳ ಆರಂಭವಾಗಿದ್ದು, ಸಂತೋಷ್ ಹಾಗೂ ಸರೋಜ್ ಸಹೋದರರು ಸಲೂನ್ ಒಳಗಡೆಯೇ ರೂಪೇಶ್‍ನನ್ನು ಪ್ಲಾಸ್ಟಿಕ್ ಪೈಪ್‍ನಿಂದ ಮನಬಂದಂತೆ ಥಳಿಸಿದ್ದಾರೆ. ಘಟನೆಯನ್ನು ದಾರಿ ಹೋಕರು ತಮ್ಮ ಮೊಬೈಲ್‍ನಲ್ಲಿ ವಿಡಿಯೋ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ವೈರಲ್ ಆಗಿದೆ. ರೂಪೇಶ್‍ನ 13 ವರ್ಷದ ಮಗ ತನ್ನ ತಂದೆಯನ್ನು ಬಿಡಿಸಿಕೊಳ್ಳಲು ಹರಸಾಹಸ ಪಟ್ಟಿದ್ದು, ಘಟನೆ ವೇಳೆ ಹಲವರು ನೋಡುತ್ತ ನಿಂತರೂ ಯಾರೂ ಸಹಾಯ ಮಾಡಿಲ್ಲ.
ಘಟನೆ ಬಳಿಕ ರೂಪೇಶ್‍ನನ್ನು ಆಸ್ಪತ್ರೆಗೆ ದಾಖಲಿಸಿದ್ದು, ಸಾವನ್ನಪ್ಪಿರುವುದಾಗಿ ವೈದ್ಯರು ಖಚಿತಪಡಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.