ಮನೋರಂಜನೆ

ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರ 2 ತಿಂಗಳ ಚಿಕಿತ್ಸೆಗೆ ಆಸ್ಪತ್ರೆ ನೀಡಿದ ಬಿಲ್‌ ಎಷ್ಟು ಗೊತ್ತಾ?

Pinterest LinkedIn Tumblr


ಚೆನ್ನೈ: ಗಾಯಕ ಎಸ್‌ಪಿ ಬಾಲಸುಬ್ರಹ್ಮಣ್ಯಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಿಲ್‌ ಕುರಿತು ಒಂದು ಶಾಕಿಂಗ್‌ ಸುದ್ದಿ ಹೊರಬಿದ್ದಿದೆ.

ಗಾಯಕ ಎಸ್‌ಬಿ ಬಾಲಸುಬ್ರಹ್ಮಣ್ಯಂ ಅವರು ಅನಾರೋಗ್ಯದ ಕಾರಣ ಚೆನ್ನೈನ ಎಂಜಿಎಂ ಆಸ್ಪತ್ರೆಗೆ ದಾಖಲಾಗಿದ್ದರು. 2 ತಿಂಗಳು ಅವರಿಗೆ ಚಿಕಿತ್ಸೆ ನೀಡಿದ ಆಸ್ಪತ್ರೆಯು ಎಸ್‌ಪಿಬಿ ಕುಟುಂಬಕ್ಕೆ ನೀಡಿದ ಬಿಲ್‌ ಮೊತ್ತ ಎಷ್ಟು ಎಂಬುದರ ಕುರಿತು ಪುತ್ರ ಎಸ್‌ಪಿಬಿ ಚರಣ್‌ ಸ್ಪಷ್ಟನೆ ನೀಡಿದ್ದಾರೆ.

ಶ್ವಾಸಕೋಶ ಸಂಬಂಧಿ ಅನಾರೋಗ್ಯ ಇದ್ದಿದ್ದರಿಂದ ಎಸ್‌ಪಿಬಿಗೆ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ನೀಡಲಾಯಿತು. ಒಟ್ಟು 52 ದಿನಗಳ ಚಿಕಿತ್ಸೆಗಾಗಿ ಎಂಜಿಎಂ ಆಸ್ಪತ್ರೆಯು ಭಾರಿ ಮೊತ್ತವನ್ನೇ ಚಾರ್ಜ್‌ ಮಾಡಿದೆ ಎಂಬ ಸುದ್ದಿ ಹರಡಿತ್ತು. ಆ ಮೊತ್ತವನ್ನು ಭರಿಸುವವರೆಗೂ ಅವರ ಪಾರ್ಥಿವ ಶರೀರವನ್ನು ನೀಡುವುದಿಲ್ಲ ಎಂದು ಆಸ್ಪತ್ರೆಯವರು ಹೇಳಿದ್ದರಂತೆ ಎಂಬುದಾಗಿಯೂ ವದಂತಿ ಹರಡಿತ್ತು. ಅದಕ್ಕೆ ಎಸ್‌ಪಿಬಿ ಚರಣ್‌ ಪ್ರತಿಕ್ರಿಯಿಸಿದ್ದಾರೆ.

‘ಆ.5ರಿಂದ ಸೆ.26ರವರೆಗೂ ಅಪ್ಪ ಆಸ್ಪತ್ರೆಯಲ್ಲಿ ಇದ್ದರು. ಆಸ್ಪತ್ರೆ ಬಿಲ್‌ ಬಗ್ಗೆ ಗಾಳಿಸುದ್ದಿ ಹಬ್ಬಿದೆ. ಬಿಲ್‌ ಕಟ್ಟಲಾಗದೇ ತಮಿಳುನಾಡು ಸರ್ಕಾರ ಮತ್ತು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ಬಳಿ ನಾವು ಸಹಾಯ ಕೇಳಿದೆವು ಎಂಬ ಸುದ್ದಿ ಹರಡಿದೆ. ಆದರೆ ಇದೆಲ್ಲ ಶುದ್ಧ ಸುಳ್ಳು. ಅಂಥದ್ದು ಏನೂ ನಡೆದಿಲ್ಲ. ಜನ ಯಾಕೆ ಇಂಥ ಸುಳ್ಳು ಸುದ್ದಿ ಹಬ್ಬಿಸುತ್ತಾರೋ ಗೊತ್ತಿಲ್ಲ’ ಎಂದು ಚರಣ್‌ ಬೇಸರ ವ್ಯಕ್ತಪಡಿಸಿದ್ದಾರೆ.

‘ಆಸ್ಪತ್ರೆಯವರ ಜೊತೆ ಸೇರಿ ನಾನು ಒಂದು ಸುದ್ದಿಗೋಷ್ಠಿ ನಡೆಸುತ್ತೇನೆ. ಅದರಲ್ಲಿ ಎಲ್ಲ ಮಾಹಿತಿಯನ್ನೂ ನೀಡುತ್ತೇನೆ. ಯಾರೋ ಹರಡಿಸಿದ ಸುಳ್ಳು ಸುದ್ದಿಯನ್ನು ತಳ್ಳಿಹಾಕಲು ನಾವು ಇಷ್ಟೆಲ್ಲ ಮಾಡಬೇಕಾಗುತ್ತದೆ ಎಂಬುದು ಬೇಸರದ ಸಂಗತಿ. ಆಸ್ಪತ್ರೆಯವರು ಅಪ್ಪನನ್ನು ಚೆನ್ನಾಗಿಯೇ ನೋಡಿಕೊಂಡಿದ್ದಾರೆ. ಅದಕ್ಕಾಗಿ ನಾನು ಹೃತ್ಪೂರ್ವಕವಾಗಿ ಧನ್ಯವಾದ ಅರ್ಪಿಸುತ್ತೇನೆ. ಸುಳ್ಳು ಸುದ್ದಿ ಹಬ್ಬಿಸುವವರನ್ನೂ ನಾನು ಕ್ಷಮಿಸುತ್ತೇನೆ’ ಎಂದು ಹೇಳಿದ್ದಾರೆ ಚರಣ್‌. ಆ ಮೂಲಕ ಎಲ್ಲ ವದಂತಿಗಳಿಗೆ ಅವರು ತೆರೆ ಎಳೆದಿದ್ದಾರೆ.

Comments are closed.