
ಹೊಸದಿಲ್ಲಿ: ಕೇಂದ್ರ ಸರಕಾರ ಸಂಸತ್ತಿನ ಅನುಮೋದನೆ ಪಡೆದಿರುವ ಎರಡು ಕೃಷಿ ವಿಧೇಯಕಗಳ ವಿರುದ್ಧ ರೈತ ಸಂಘಟನೆಗಳ ಪ್ರತಿಭಟನೆ ತೀವ್ರಗೊಂಡಿದೆ. ಈ ಕಾಯ್ದೆಗಳನ್ನು ವಿರೋಧಿಸಿ ರೈತ ಸಂಘಟನೆಗಳು ಸೆ.25ರಂದು ‘ಭಾರತ್ ಬಂದ್’ ನಡೆಸಲು ಕರೆ ನೀಡಿವೆ.
ಸುಮಾರು 250 ರೈತ ಸಂಘಟನೆಗಳು ಅಂದು ಪ್ರತಿಭಟನೆ ನಡೆಸಲಿವೆ. ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ ಹೆಸರಿನಲ್ಲಿ ಒಕ್ಕೂಟ ರಚಿಸಿಕೊಂಡು ಹೋರಾಟ ತೀವ್ರಗೊಳಿಸಲು ರೈತ ಸಂಘಟನೆಗಳು ನಿರ್ಧರಿಸಿವೆ.
”ಇದು ‘ಜಿಂದಾಬಾದ್-ಮುರ್ದಾಬಾದ್’ಗೆ ಸೀಮಿತವಾದ ವಿಷಯ ಅಲ್ಲ. ರೈತರ ಬದುಕಿನ ಜೀವನ್ಮರಣದ ಪ್ರಶ್ನೆ. ಪ್ರಜಾಪ್ರಭುತ್ವದ ಹಾದಿಯಲ್ಲಿಯೇ ಸರಕಾರಕ್ಕೆ ಈ ವಿಷಯ ಮನವರಿಕೆ ಮಾಡಿಕೊಡುವ ಪ್ರಯತ್ನ ಇದುವರೆಗೆ ಮಾಡಿದ್ದೇವೆ. ಸುಗ್ರೀವಾಜ್ಞೆ ಹೊರಡಿಸಿದ ಬೆನ್ನ ಹಿಂದೆಯೇ ಪ್ರಧಾನಿಗೆ ನಮ್ಮ ಕಳವಳ ವ್ಯಕ್ತಪಡಿಸಿ ಸಾವಿರಾರು ಪತ್ರ ಬರೆದದ್ದಾಗಿದೆ. ಸಂಸತ್ತಿನ ಒಳಗೂ ನಮ್ಮ ಆತಂಕಕ್ಕೆ ಈ ಸರಕಾರ ಸ್ಪಂದಿಸುವ ಪ್ರಯತ್ನ ಮಾಡಲಿಲ್ಲ. ಆದ್ದರಿಂದ ಈಗ ಹೋರಾಟವೊಂದೇ ನಮಗೆ ಉಳಿದಿರುವ ದಾರಿ,” ಎಂದು ಜೈ ಕಿಸಾನ್ ಆಂದೋಲನದ ಸಂಚಾಲಕ ಅವಿಕ್ ಸಹಾ ಹೇಳಿದ್ದಾರೆ.
ಕೃಷಿ ವಿಧೇಯಕಗಳ ವಿರುದ್ಧ ಪಂಜಾಬ್ ಮತ್ತು ಹರಿಯಾಣ ರೈತರು ತಿಂಗಳ ಹಿಂದೆ ಪ್ರತಿಭಟನೆ ಆರಂಭಿಸಿದ್ದಾರೆ. ಅದು ಈಗ ದೇಶಾದ್ಯಂತ ವ್ಯಾಪಿಸುತ್ತಿದೆ.
ಇನ್ನು ರಾಜ್ಯದಲ್ಲಿ ಬಂದ್ ನಡೆಸುವ ಬಗ್ಗೆ ಬುಧವಾರ ನಿರ್ಧಾರ ತೆಗೆದುಕೊಳ್ಳುವುದಾಗಿ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದ್ದಾರೆ.
Comments are closed.