ರಾಷ್ಟ್ರೀಯ

ಕೊರೋನಾ ಭೀತಿ: ಸಂಸತ್ ಅಧಿವೇಶನ ಅರ್ಧಕ್ಕೆ ನಿಲ್ಲಿಸಲು ಸರ್ವ ಪಕ್ಷಗಳ ಸಮ್ಮತಿ

Pinterest LinkedIn Tumblr


ನವದೆಹಲಿ: ಸಚಿವರು ಮತ್ತು ಸಂಸದರಿಗೆ ಕೊರೋನಾ ಹರಡುತ್ತಿರುವ ಹಿನ್ನೆಲೆ ಸಂಸತ್ ಮುಂಗಾರು ಅಧಿವೇಶನವನ್ನು ಅರ್ಧಕ್ಕೆ ನಿಲ್ಲಿಸಲು ಸರ್ವ ಪಕ್ಷಗಳು ಸಮ್ಮತಿ ನೀಡಿವೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಲೋಕಸಭೆ ವ್ಯವಹಾರ ಸಲಹಾ ಸಮಿತಿಯ ಸಭೆಯಲ್ಲಿ ಅನೇಕ ರಾಜಕೀಯ ಪಕ್ಷಗಳು ನಡೆಯುತ್ತಿರುವ ಸಂಸತ್ ಅಧಿವೇಶನವನ್ನು ಮೊಟಕುಗೊಳಿಸಲು ಒಪ್ಪಿಗೆ ಸೂಚಿಸಿವೆ. ಈ ಕುರಿತು ಸಂಪುಟ ಸಮಿತಿ ಅಂತಿಮ ನಿರ್ಧಾರ ಕೈಗೊಳ್ಳಲಿದೆ.

ಅಲ್ಲದೆ, ಕೋವಿಡ್-19 ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಹಣವನ್ನು ಹೆಚ್ಚಿಸಲು ಸಂಸದರ ಸಂಬಳವನ್ನು ಶೇಕಡಾ 30 ರಷ್ಟು ಕಡಿತಗೊಳಿಸುವ ಸುಗ್ರೀವಾಜ್ಞೆಯನ್ನು ಬದಲಿಸುವ ಮಸೂದೆಯನ್ನು ಉಭಯ ಸದನಗಳು ಅಂಗೀಕರಿಸಿವೆ.

ಕೇಂದ್ರ ಸಚಿವರಾದ ನಿತಿನ್ ಗಡ್ಕರಿ, ಪ್ರಹ್ಲಾದ್ ಪಟೇಲ್ ಸೇರಿದಂತೆ ಕೆಲ ಸಂಸದರಿಗೆ ಕೋವಿಡ್-19 ಪಾಸಿಟಿವ್ ದೃಢಪಟ್ಟ ನಂತರ ಕೆಲ ಪ್ರತಿಪಕ್ಷಗಳು, ಅಧಿವೇಶನವನ್ನು ಮೊಟಕುಗೊಳಿಸಲು ಸರ್ಕಾರವನ್ನು ಮನವೊಲಿಸುವ ಪ್ರಯತ್ನ ನಡೆಸಿವೆ. ನಂತರ ಈ ನಿಟ್ಟಿನಲ್ಲಿ ಸರ್ಕಾರ ಚಿಂತಿಸುತ್ತಿರುವುದಾಗಿ ಮೂಲಗಳು ತಿಳಿಸಿವೆ.

ಉಭಯ ಸದನಗಳ ಸದಸ್ಯರಿಗೆ ಕಡ್ಡಾಯವಾಗಿ ಆರ್ ಟಿ- ಪಿಸಿಆರ್ ಪರೀಕ್ಷೆಗೊಳಪಡಿಸಲಾಗುತ್ತಿದೆ ಎಂದು ಹೇಳಲಾಗಿದೆ.

Comments are closed.