ರಾಷ್ಟ್ರೀಯ

ಥೈಲ್ಯಾಂಡ್ ಮೂಲದ ಸ್ಪಾ ಉದ್ಯೋಗಿಯ ಹತ್ಯೆ ರಹಸ್ಯ ಬೇಧಿಸಿದ ಗುಜರಾತ್ ಪೊಲೀಸರು

Pinterest LinkedIn Tumblr


ಗಾಂಧಿನಗರ: ಥೈಲ್ಯಾಂಡ್ ಮೂಲದ ಸ್ಪಾ ಉದ್ಯೋಗಿಯ ಕೊಲೆ ರಹಸ್ಯ ಬೇಧಿಸುವಲ್ಲಿ ಗುಜರಾತಿನ ಪೊಲೀಸರು ಯಶಸ್ವಿಯಾಗಿದ್ದಾರೆ.

ಸೆಪ್ಟೆಂಬರ್ 6ರಂದು ಯುವತಿ ವನಿಡಾ ಬುಸೊರ್ನ್ ಮೃತದೇಹ ಆಕೆಯ ಮನೆಯಲ್ಲಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ವನಿಡಾ ವಾಸವಾಗಿದ್ದ ಕೋಣೆಯಲ್ಲಿ ಮದ್ಯದ ಪಾರ್ಟಿ ಬಳಿಕ ಕೊಲೆ ನಡೆದಿತ್ತು.

ಮಗದಲ್ಲಾದಲ್ಲಿ ವಾಸವಾಗಿದ್ದ ವನಿಡಾ ಉರ್ಫ್ ಮಿಮಿ ಮೃತದೇಹ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಮನೆಯಲ್ಲಿ ವನಿಡಾ ಮೊಬೈಲ್, ಹಣ ಮತ್ತು ಆಕೆಯ ಚಿನ್ನಾಭರಣಗಳು ಮಾಯವಾಗಿದ್ದವು. ಈ ಹಿನ್ನೆಲೆ ಪೊಲೀಸರು ಕಳ್ಳತನ ಮತ್ತು ಕೊಲೆ ಎಂದು ತನಿಖೆಯ ಆರಂಭದಲ್ಲಿ ಅನುಮಾನ ವ್ಯಕ್ತಪಡಿಸಿದ್ದರು.

ಕೋಣೆಯಲ್ಲಿ ಕೇವಲ ಒಂದು ಗಾದಿ ಮಾತ್ರ ಬೆಂಕಿಗಾಹುತಿಯಾಗಿತ್ತು. ಬೆಂಕಿಯಲ್ಲಿ ವನಿಡಾ ಸುಟ್ಟು ಕರಕಲಾಗಿದ್ದರೂ ಯಾವುದೇ ರೀತಿ ಸದ್ದು ನೆರಹೊರೆಯವರಿಗೆ ಕೇಳಿಸಿರಲಿಲ್ಲ. ಘಟನಾ ಸ್ಥಳದಲ್ಲಿ ಸಿಕ್ಕ ಕೂಲ್ ಡ್ರಿಂಕ್ಸ್ ಬಾಟಲ್ ಗಳಲ್ಲಿ ಮದ್ಯದ ವಾಸನೆ ಬರುತ್ತಿತ್ತು. ಈ ಎಲ್ಲ ಅಂಶಗಳು ಇದೊಂದು ಪೂರ್ವಯೋಜಿತ ಕೊಲೆ ಎಂಬುವುದು ಪೊಲೀಸರಿಗೆ ಬಹುತೇಕ ಖಚಿತವಾಗಿತ್ತು. ಎಫ್‍ಐಆರ್ ದಾಖಲಿಸಿಕೊಂಡ ಪೊಲೀಸರು ವನಿಡಾ ವಾಸವಾಗಿದ್ದ ಕಟ್ಟಡದ ಸಿಸಿಟಿವಿ ದೃಶ್ಯಗಳನ್ನು ವಶಕ್ಕೆ ಪಡೆದಿದ್ರು.

ಸಿಸಿಟಿವಿ ದೃಶ್ಯದ ಆಧಾರದಲ್ಲಿ ವನಿಡಾ ಗೆಳತಿ, ಸ್ಪಾದಲ್ಲಿ ಕೆಲಸ ಮಾಡಿಕೊಂಡಿದ್ದ ಆಯಿದಾ ಮೇಲೆ ಪೊಲೀಸರಿಗೆ ಶಂಕೆ ವ್ಯಕ್ತವಾಗಿತ್ತು. ಕೊಲೆಯಾದ ದಿನ ರಾತ್ರಿ ಸುಮಾರು 3.30ಕ್ಕೆ ವನಿಡಾ ಮನೆಯಿಂದ ಆಯಿದಾ ಕೈಯಲ್ಲಿ ಕಪ್ಪು ಪಾಲಿಥಿನ್ ಬ್ಯಾಗ್ ಹಿಡಿದು ಹೊರ ಬಂದಿದ್ದಳು. ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಕೊಲೆಯಾದ ದಿನ ತಾನು ವನಿಡಾ ಮನೆಯಲ್ಲಿದ್ದೆ ಎಂದು ಆಯಿದಾ ತಪ್ಪೊಪ್ಪಿಕೊಂಡಿದ್ದಾಳೆ.

ತಡರಾತ್ರಿ ಎಲ್ಲಿಗಾದರೂ ಹೋಗಲು ವನಿಡಾ ಮತ್ತು ಆಯಿದಾ ಮೊದಲೇ ಆಟೋ ಬುಕ್ ಮಾಡಿಕೊಳ್ಳುತ್ತಿದ್ದರು. ಕೊಲೆಯಾದ ದಿನವೂ ಆಯಿದಾ ಇದೇ ಆಟೋ ಬಳಸಿಕೊಂಡಿದ್ದಳು. ಮನೆಯಿಂದ ಹೊರ ತಂದಿದ್ದ ಬ್ಯಾಗ್ ಆಟೋ ಚಾಲಕನಿಗೆ ನೀಡಿ ಎಸೆಯುವಂತೆ ಹೇಳಿದ್ದಳು. ಆದ್ರೆ ಚಾಲಕ ಮರೆತು ಅದನ್ನು ಆಟೋದಲ್ಲಿಯ ಇಟ್ಟುಕೊಂಡಿದ್ದನು. ಪತ್ತೆಯಾದ ಬ್ಯಾಗ್ ನಲ್ಲಿ ಹಾಸಿಗೆ ಮತ್ತು ಒಂದು ಮೊಬೈಲ್ ಸಿಕ್ಕಿದೆ. ಬಂಧಿತ ಆಯಿದಾ ವಿರುದ್ಧ ಮಲೇಶಿಯಾ ಮತ್ತು ಜಪಾನ್ ನಲ್ಲಿ ಕೆಲ ಪ್ರಕರಣಗಳು ದಾಖಲಾಗಿವೆ.

ವನಿಡಾ ಮನೆಯಲ್ಲಿ ತಡರಾತ್ರಿವರೆಗೂ ಮದ್ಯದ ಪಾರ್ಟಿ ಮಾಡಲಾಗಿದೆ. ಈ ವೇಳೆ ಆಯಿದಾ ಗಾಂಜಾ ಸಹ ಸೇವನೆ ಮಾಡಿದ್ದಾಳೆ. ಹಣ ಮತ್ತು ಚಿನ್ನದಾಸೆಗಾಗಿ ವನಿಡಾಳನ್ನು ಕೊಲೆ ಮಾಡಿ, ಪೊಲೀಸರು ದಿಕ್ಕಿ ತಪ್ಪಿಸಲು ಹಲವು ಪ್ಲಾನ್ ಮಾಡಿಕೊಂಡಿದ್ದಳು. ಪೊಲೀಸ್ ತನಿಖೆ ವೇಳೆ ಆಯಿದಾಳ ಎಲ್ಲ ಕಳ್ಳಾಟಗಳು ಬಯಲಾಗಿದ್ದು, ಆರೋಪಿ ಕಂಬಿ ಎಣಿಸುತ್ತಿದ್ದಾಳೆ.

Comments are closed.