ನವದೆಹಲಿ: 4 ತಿಂಗಳ ಹಿಂದೆಯೇ ಭಾರತದಲ್ಲಿ 64 ಲಕ್ಷ ಮಂದಿಗೆ ಕೊರೋನಾ ಸೋಂಕು ತಗುಲಿತ್ತು ಎಂದು ಐಸಿಎಂಆರ್ ನಡೆಸಿದ ಸೆರೋ ಸಮೀಕ್ಷೆ ತಿಳಿಸಿದೆ.
ಈ ಸಮೀಕ್ಷೆ ಪ್ರಕಾರ ನಾಲ್ಕು ತಿಂಗಳ ಹಿಂದೆಯೇ ಭಾರತದಲ್ಲಿ 64 ಲಕ್ಷ ಮಂದಿಗೆ ಸೋಂಕು ತಗುಲಿದ್ದಿರಬಹುದು. ಮೇ 11ರಿಂದ ಜೂನ್ 4ರವರೆಗೆ ನಡೆಸಿದ ಸೆರೋ ಸಮೀಕ್ಷೆಯಲ್ಲಿ ಈ ಅಂಶ ಬೆಳಕಿಗೆ ಬಂದಿದೆ. ಕೊರೋನಾ ಪತ್ತೆಗಾಗಿ ನಡೆಸಲಾಗುತ್ತಿದ್ದ ಆರ್ಟಿ-ಪಿಸಿಆರ್ ಪರೀಕ್ಷೆಯಲ್ಲಿ ಒಂದು ಪ್ರಕರಣ ದೃಢಪಟ್ಟರೆ 82-130 ಮಂದಿಯ ಸೋಂಕು ಗುಪ್ತವಾಗಿಯೇ ಉಳಿದುಹೋಗಿತ್ತು ಎನ್ನಲಾಗುತ್ತಿದೆ.
ಫೆಬ್ರವರಿ ತಿಂಗಳಲ್ಲಿ ಭಾರತದಲ್ಲಿ ಮೊದಲ ಕೊರೋನಾ ಪ್ರಕರಣ ಪತ್ತೆಯಾಗಿದ್ದು. ಅದಾಗಿ 2-3 ತಿಂಗಳಲ್ಲೇ ದೇಶಾದ್ಯಂತ ಬರೋಬ್ಬರಿ 64 ಲಕ್ಷ ಮಂದಿಗೆ ಕೊರೋನಾ ಸೋಂಕು ತಗುಲಿದಂತಾಗಿದೆ. ಮಾರ್ಚ್ ತಿಂಗಳಿಂದ ಕಟ್ಟುನಿಟ್ಟಾಗಿ ಲಾಕ್ ಡೌನ್ ಹಾಕಿದ್ದರೂ ಪ್ರಕರಣಗಳು ಏರುಗತಿಯಲ್ಲಿ ಸಾಗಿರುವುದು ಸ್ಪಷ್ಟವಾಗಿದೆ. ಆದರೂ ಕೂಡ ಈ ಹಂತದಲ್ಲಿ ದೇಶದ ಜನಸಂಖ್ಯೆ ಒಂದು ಪ್ರತಿಶತದಷ್ಟು ಮಂದಿಗೂ ಸೋಂಕು ವ್ಯಾಪಿಸಿರಲಿಲ್ಲ.
ಏನಿದು ಸೆರೋ ಸರ್ವೇ?
ಇದು ಒಂದು ಮಾದರಿಯ ರಕ್ತದ ಪರೀಕ್ಷೆ. ರಕ್ಷದಲ್ಲಿ ಪ್ರತಿಕಾಯಗಳು (Antibodies) ಸೃಷ್ಟಿಯಾಗಿದೆಯಾ ಎಂಬುದನ್ನು ಪತ್ತೆ ಮಾಡಲು IgG(ಇಮ್ಯೂನೋಗ್ಲೋಬುಲಿನ್ ಜಿ) ಪರೀಕ್ಷೆಗೆ ರಕ್ತದ ಸೆರಮ್ನ ಸಮೀಕ್ಷೆ ಇದಾಗಿದೆ. ದೇಹದಲ್ಲಿ ಪ್ರತಿಕಾಯಗಳನ್ನ ಹೊಂದಿದ್ದರೆ ಆ ವ್ಯಕ್ತಿಗೆ 2 ವಾರಕ್ಕಿಂತ ಮುಂಚೆಯೇ ಸೋಂಕು ಬಂದು ಹೋಗಿದೆ ಎಂದರ್ಥ. ಜೂನ್ 4ರವರೆಗೆ ಸಮೀಕ್ಷೆ ನಡೆಸಲಾಗಿದೆ ಎಂದರೆ ಮೇ 20ಕ್ಕಿಂತ ಮುಂಚಿನ ಸ್ಥಿತಿಯನ್ನು ಇದು ವ್ಯಕ್ತಪಡಿಸುತ್ತದೆ.
Comments are closed.